ಬೆಂಗಳೂರು:ಕೇಂದ್ರದ ಸಿಬ್ಬಂದಿ ಆಯ್ಕೆ ಆಯೋಗ (SSC) 20,000 ಹುದ್ದೆ ಆಯ್ಕೆಗೆ ಹಿಂದಿ - ಇಂಗ್ಲಿಷ್ನಲ್ಲಿ ಮಾತ್ರ ಪರೀಕ್ಷೆ ನಡೆಸುತ್ತಿದೆ. ಆಯ್ಕೆಯಾದ ಅಭ್ಯರ್ಥಿಯನ್ನು ಯಾವ ರಾಜ್ಯಕ್ಕಾದರೂ ಕಳುಹಿಸಬಹುದು. ಕನ್ನಡ ಸೇರಿ ಯಾವುದೇ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆಗೆ ಅವಕಾಶವಿಲ್ಲ. ಹಿಂದಿ ಹೇರಿಕೆ, ಭಾಷಾ ತಾರತಮ್ಯಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರಕ್ಕೆ ಪ್ರಾದೇಶಿಕ ಭಾಷೆಗಳನ್ನು ಹತ್ತಿಕ್ಕಲೇಬೇಕು ಎನ್ನುವ ಕೆಟ್ಟ ಹಠವಿದ್ದಂತೆ ಇದೆ. ಕನ್ನಡವೂ ಸೇರಿ ದಕ್ಷಿಣದ ಪ್ರಾದೇಶಿಕ ಭಾಷೆಗಳ ಬಗ್ಗೆ ಇನ್ನಿಲ್ಲದ ಅಸಹನೆ, ದ್ವೇಷ ಮೈಗೂಡಿಸಿಕೊಂಡಿದೆ ಎನಿಸುತ್ತಿದೆ. ತ್ರಿಭಾಷಾ ಸೂತ್ರಕ್ಕೆ ಹೇಗಾದರೂ ಸಮಾಧಿ ಕಟ್ಟಲೇಬೇಕೆಂದು ಹೊರಟಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಕ್ಕೂಟ ತತ್ವದಲ್ಲಿ ಆಡಳಿತ ನಡೆಸುವ ಪಕ್ಷಕ್ಕೆ ಒಪ್ಪಿಗೆ ಇಲ್ಲ ಎನ್ನುವುದನ್ನು ಇದು ತೋರಿಸುತ್ತಿದೆ. ಹಿಂದಿ ಭಾಷಿಗರನ್ನು ಕರ್ನಾಟಕ ಹಾಗೂ ದಕ್ಷಿಣ ಭಾರತದಲ್ಲಿ ತುಂಬುವ ದುಸ್ಸಾಹಸವಷ್ಟೇ ಇದು ಎಂದು ಕಿಡಿಕಾರಿದ್ದಾರೆ.