ಬೆಂಗಳೂರು:ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಹೈಕಮಾಂಡ್ ಜೊತೆ ಸೀಟು ಹಂಚಿಕೆ ಕುರಿತಂತೆ ಮಹತ್ವದ ಮಾತುಕತೆ ನಡೆಸಿದ್ದಾರೆ.
ದೆಹಲಿಯಲ್ಲಿ ಬುಧವಾರ ಸಂಜೆ ಕೇಂದ್ರ ಗೃಹಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ, ಲೋಕಸಭೆ ಚುನಾವಣೆಗೆ ಕ್ಷೇತ್ರಗಳ ಹಂಚಿಕೆ ಸೇರಿದಂತೆ ರಾಜ್ಯದಲ್ಲಿನ ಬರ ಪರಿಹಾರ, ರಾಜಕೀಯ ಪರಿಸ್ಥಿತಿ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಅಮಿತ್ ಶಾ ಅವರ ನಿವಾಸದಲ್ಲಿ ನಡೆದ ಸಭೆ ವೇಳೆ ಕುಮಾರಸ್ವಾಮಿ ಜೊತೆಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಸಂಸದ ಕುಪೇಂದ್ರ ರೆಡ್ಡಿ ಅವರೂ ಇದ್ದರು.
ಬಳಿಕ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕುಮಾರಸ್ವಾಮಿ, ಅಯೋಧ್ಯೆಯ ರಾಮಮಂದಿರದಲ್ಲಿನ ಕಾರ್ಯಕ್ರಮದ ನಂತರ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಲೋಕಸಭೆ ಸೀಟು ಹಂಚಿಕೆ ಅಂತಿಮಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭೇಟಿ ಸಂದರ್ಭದಲ್ಲಿ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಸಿದ್ಧತೆ, ಬಿಜೆಪಿ-ಜೆಡಿಎಸ್ ನಡುವಿನ ಮೈತ್ರಿ, ಎನ್ಡಿಎ ಒಕ್ಕೂಟಕ್ಕೆ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ, ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿ, ಬರ ನಿರ್ವಹಣೆ, ಆಡಳಿತ ಪಕ್ಷ ಕಾಂಗ್ರೆಸ್ ಅನ್ನು ಎದುರಿಸಿ ಹೆಚ್ಚಿನ ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುವ ಬಗ್ಗೆ ಚುನಾವಣೆ ತಂತ್ರಗಾರಿಕೆ ಏನಾಗಿರಬೇಕು ಎನ್ನುವ ಸಂಗತಿಗಳು ಚರ್ಚೆಗೆ ಬಂದವು ಎಂದು ಹೇಳಲಾಗಿದೆ.
ಲೋಕಸಭೆ ಕ್ಷೇತ್ರ ಹಂಚಿಕೆಯ ಜೊತೆಗೆ ಜೆಡಿಎಸ್ ಪಕ್ಷ ಅಧಿಕೃತವಾಗಿ ಎನ್ಡಿಎ ಮೈತ್ರಿಕೂಟಕ್ಕೆ ಸೇರುವ ಪ್ರಕ್ರಿಯೆಗಳೆಲ್ಲವೂ ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಮುಗಿದ ಬಳಿಕ ಆಗಲಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಜೊತೆ ಚರ್ಚೆ ನಡೆಸಿದ ನಂತರ ಅಂತಿಮಗೊಳಿಸೋಣ ಎಂದು ಅಮಿತ್ ಶಾ ಅವರು ಕುಮಾರಸ್ವಾಮಿಗೆ ತಿಳಿಸಿದ್ದಾರೆ.
ರಾಜ್ಯದ 28 ಲೋಕಸಭೆ ಕ್ಷೇತ್ರಗಳೆಲ್ಲವನ್ನೂ ಎನ್ಡಿಎ ಮೈತ್ರಿಕೂಟ ಗೆದ್ದು ಮತ್ತೊಮ್ಮೆ ನರೇಂದ್ರ ಮೋದಿ ದೇಶದ ಪ್ರಧಾನಮಂತ್ರಿ ಆಗಬೇಕು. ಅದಕ್ಕಾಗಿ ಕರ್ನಾಟಕದಲ್ಲಿ ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಒಟ್ಟಾಗಿ ಮಾಡೋಣ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳೆರಡೂ ಅತ್ಯಂತ ವಿಶ್ವಾಸ, ನಂಬಿಕೆಯ ಆಧಾರದ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಎಲ್ಲ ನಿರ್ಧಾರಗಳನ್ನು ಕೈಗೊಳ್ಳೋಣ ಎಂದು ಶಾ ಕುಮಾರಸ್ವಾಮಿಗೆ ತಿಳಿಸಿದರು. ಅಲ್ಲದೆ, ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರ ಗಮನಕ್ಕೆ ಪರಿಣಾಮಕಾರಿಯಾಗಿ ತರುವ ನಿಟ್ಟಿನಲ್ಲಿ ಇಬ್ಬರೂ ನಾಯಕರು ಚರ್ಚೆ ನಡೆಸಿದರು.
ಮಾತುಕತೆ ಬಗ್ಗೆ ಮಾಜಿ ಸಿಎಂ ಸಂತಸ:ರಾಜ್ಯದಲ್ಲಿ ಉಂಟಾಗಿರುವ ಭೀಕರ ಬರದ ಬಗ್ಗೆಯೂ ಕೇಂದ್ರ ಗೃಹ ಸಚಿವರ ಗಮನಕ್ಕೆ ತಂದಿದ್ದೇನೆ. ರಾಜ್ಯ ಸರ್ಕಾರ ಈವರೆಗೂ ಬಿಡಿಗಾಸನ್ನು ಬರಪೀಡಿತ ಜನರಿಗೆ ಕೊಟ್ಟಿಲ್ಲ ಎನ್ನುವುದು ಅವರಿಗೆ ಗೊತ್ತಿದೆ. ಈ ಬಗ್ಗೆ ಅಮಿತ್ ಶಾಗೆ ಸಮಗ್ರ ಮಾಹಿತಿ ನೀಡಿದ್ದೇನೆ ಎಂದು ಹೆಚ್ಡಿಕೆ ಹೇಳಿದ್ದಾರೆ.
''ಮುಕ್ಕಾಲು ಗಂಟೆ ಕಾಲ ನಡೆದ ಈ ಸಭೆಯಲ್ಲಿ ಗೃಹ ಸಚಿವರ ಜೊತೆ ಎಲ್ಲ ವಿಷಯಗಳನ್ನು ಮುಕ್ತವಾಗಿ ಚರ್ಚೆ ಮಾಡಿದ್ದೇನೆ. ಕೇಂದ್ರದಲ್ಲಿ ಎನ್ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದು ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು. ಈ ಬಗ್ಗೆ ಜೆಡಿಎಸ್-ಬಿಜೆಪಿ ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದೇವೆ'' ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.