ಬೆಂಗಳೂರು:ಕೆಆರ್ ಪುರಂ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ನಂದೀಶ್ ಮಾನಸಿಕವಾಗಿ ನೊಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಂತಹ ಘಟನೆಗಳಿಗೆ ಹಿರಿಯ ಅಧಿಕಾರಿಗಳ ಉದ್ಧಟತನ ಹಾಗೂ ಸರ್ಕಾರದ ನಡವಳಿಕೆ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಉತ್ತರ ಭಾರತದ ಅಧಿಕಾರಿಗಳು ಹಾಗೂ ಸರ್ಕಾರವೇ ಮಾಡಿರುವ ಕಗ್ಗೊಲೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಇನ್ಸ್ಪೆಕ್ಟರ್ ನಂದೀಶ್ ಹಿನ್ನೆಲೆ ತಿಳಿದುಕೊಂಡಿದ್ದೇನೆ. ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿ. ಸಸ್ಪೆನ್ಶನ್ ರಿವೋಕ್ಗಾಗಿ ಹಲವು ಮುಖಂಡರ ಮನೆಗೂ ಹೋಗಿದ್ದರಂತೆ. ಮಾನಸಿಕ ಒತ್ತಡಕ್ಕೆ ಒಳಗಾಗಿ ಹೀಗಾಗಿದೆ ಎಂದು ನಂದೀಶ್ ಪತ್ನಿ ಹೇಳಿದ್ದಾರೆ ಎಂದರು.
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಅನಧಿಕೃತವಾಗಿ ಕ್ಯಾಸಿನೊ, ಮಟ್ಕಾ ದಂಧೆ ಕೂಡ ನಡೆಯುತ್ತಿದೆ. ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ಕೆಆರ್ ಪುರಂ ಭಾಗದಲ್ಲಿ ಯಾವುದೋ ಒಂದು ಪಬ್ ನಂದೀಶ್ ಅವರ ವ್ಯಾಪ್ತಿಯಲ್ಲಿದ್ದು, ಬೆಳಗಿನ ಜಾವದವರೆಗೆ ತೆರೆದಿತ್ತು. ಇದಕ್ಕೆ ಈ ಪೊಲೀಸ್ ಅಧಿಕಾರಿಯ ಸಹಕಾರವಿತ್ತೆಂದು ಆರೋಪಿಸಿ ಅವರನ್ನು ಅಮಾನತು ಮಾಡಿದ್ದಾರಂತೆ.
ತನಿಖೆಗೆ ಆಗ್ರಹ:ಸರ್ಕಾರ ಮಧ್ಯರಾತ್ರಿ ಒಂದು ಗಂಟೆಯವರೆಗೆ ರೆಸ್ಟೋರೆಂಟ್ ಓಪನ್ ಮಾಡುವ ಅವಕಾಶ ಕೊಟ್ಟಿದ್ದಾರೆ. ಆ ಪಬ್ ಎಷ್ಟೊತ್ತು ತೆಗೆದಿತ್ತು?, ಅಲ್ಲಿ ಯಾರಿದ್ದರು?, ರಾಜಕಾರಣಿ ಬೆಂಬಲಿಗರು ಎಷ್ಟು ಜನ ಇದ್ದರು. ಪೊಲೀಸ್ ಅಧಿಕಾರಿಗಳು ಕೂಡ ಡ್ಯಾನ್ಸ್ ಮಾಡಿದ್ದಾರೆ ಅಂತಾ ರಿಪೋರ್ಟ್ ಇದೆ. ಇದರ ಬಗ್ಗೆ ತನಿಖೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.