ಬೆಂಗಳೂರು: ಸಾವಿನ ಮನೆಯಲ್ಲಿ ಸಂಭ್ರಮಿಸುವ ವಿಕೃತಿ ಬೇಡವೆಂದು ನಾನು ಹೇಳಿದ್ದೆ. ಪಾಪ, ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಧ್ಯರಾತ್ರಿಯಲ್ಲೇ ಜ್ಞಾನೋದಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ಸಾವುಗಳನ್ನೇ ಸಾಧನೆಗಳನ್ನಾಗಿ ಮಾಡಿಕೊಂಡಿದೆ, ಸರ್ಕಾರದ ಕಾಳಜಿಯಲ್ಲಿ ಸಾಚಾತನವಿಲ್ಲ. ಸಾವಿನಲ್ಲೂ ಸಿಂಪಥಿ ಗಿಟ್ಟಿಸುವ ವ್ಯರ್ಥ ಪ್ರಯತ್ನ ವಾಕರಿಕೆ ತರಿಸುತ್ತದೆ. ಸಾಧನಾ ಸಮಾವೇಶ ನಿಂತಿತಲ್ಲ ಎನ್ನುವ ಹತಾಶೆ ಎದ್ದು ಕಾಣುತ್ತಿದೆ. ರಾಜ್ಯದಲ್ಲಿ ಸಾವುಗಳ ಮೆರವಣಿಗೆ ನಡೆಯುತ್ತಿರುವುದಷ್ಟೇ ಬಿಜೆಪಿ ಸರ್ಕಾರದ ವರ್ಷದ ಸಾಧನೆ ಎಂದು ಹರಿಹಾಯ್ದಿದ್ದಾರೆ.
ಜಾತಿ, ಧರ್ಮ, ಆಚಾರ, ವಿಚಾರ, ಆಹಾರ, ವ್ಯಾಪಾರ, ಉಡುಗೆ-ತೊಡುಗೆ ನೆಪದಲ್ಲಿ ರಾಜ್ಯವನ್ನು ಭಾವನಾತ್ಮಕವಾಗಿ ಛಿದ್ರ ಛಿದ್ರ ಮಾಡಿದ್ದಾ ಸಾಧನೆ ತಿನ್ನುವ ಅನ್ನದಲ್ಲಿ, ಕಲಿಯುವ ಅಕ್ಷರದಲ್ಲಿ, ಉರಿಯುವ ಮನೆಯಲ್ಲಿ ಮತಕ್ಕಾಗಿ ಕೋಮುಗಳ ಇರಿಯುವುದಾ ಸಾಧನೆ?. ಇನ್ನೆಷ್ಟು ಯುವಕರ ಕಗ್ಗೊಲೆ ಆಗಬೇಕು? ಅದೆಷ್ಟು ಬಡಮನೆಗಳ ದೀಪಗಳು ಆರಬೇಕು? ಮತ್ತೆಷ್ಟು ಹೆತ್ತ ಕರುಳುಗಳು ಕಣ್ಣೀರಿಡಬೇಕು? ಹರ್ಷ, ಚಂದ್ರು ತಾಯಿಂದರ ಆರ್ತನಾದ ಸರ್ಕಾರಕ್ಕೆ ಕೇಳಿಸಿದ್ದರೆ ಪ್ರವೀಣ್ ನೆಟ್ಟಾರು ಅವರ ಅಮ್ಮನ ಆರ್ತನಾದ ಕೇಳುವ ಸ್ಥಿತಿ ಬರುತ್ತಿತ್ತಾ? ಕೊಲೆಯನ್ನೇ ತಡೆಯಲಾಗದೇ ಈಗ ʼಕೃತಕ ಸಾಂತ್ವನʼ ಹೇಳಿದರೇನು ಪ್ರಯೋಜನ? ಎಂದು ಹೆಚ್ ಡಿಕೆ ಸರಣಿ ಪ್ರಶ್ನೆಗಳನ್ನು ಸರ್ಕಾರಕ್ಕೆ ಕೇಳಿದ್ದಾರೆ.