ಸಿಎಂ ನಿವಾಸದ ಮುಂದೆ ಧರಣಿ ನಿರ್ಧಾರ ಕೈಬಿಟ್ಟ ಮಾಜಿ ಪ್ರಧಾನಿ ದೇವೇಗೌಡ - ಸಿಎಂ ನಿವಾಸದೆದುರು ಧರಣಿ
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ವೈಷ್ಯಮ್ಯ ರಾಜಕಾರಣ ನಡೆಯುತ್ತಿರುವುದನ್ನು ಖಂಡಿಸಿ ಸಿಎಂ ನಿವಾಸದೆದುರು ಧರಣಿ ನಡೆಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆದಿದ್ದ ಮಾಜಿ ಪ್ರಧಾನಿ ದೇವೇಗೌಡರು, ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಸಿಎಂ ನಿವಾಸದ ಮುಂದೆ ಧರಣಿ ನಡೆಸುವ ನಿರ್ಧಾರ ಕೈ ಬಿಟ್ಟ ಮಾಜಿ ಪ್ರಧಾನಿ ದೇವೇಗೌಡ
ಬೆಂಗಳೂರು:ಸಿಎಂ ನಿವಾಸದ ಮುಂದೆ ನಡೆಸಲು ಉದ್ದೇಶಿಸಿದ್ದ ಧರಣಿಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೈ ಬಿಟ್ಟಿದ್ದಾರೆ.
ಗುರುವಾರ ಎಚ್.ಡಿ.ದೇವೇಗೌಡ ಸಿಎಂಗೆ ಪತ್ರ ಬರೆದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ವೈಷ್ಯಮ್ಯ ರಾಜಕಾರಣ ನಡೆಯುತ್ತಿದೆ. ನನ್ನ ಸುದೀರ್ಘ 60ವರ್ಷಗಳ ರಾಜಕಾರಣದಲ್ಲಿ ಎಂದು ಕಂಡಿಲ್ಲದ ಕೆಟ್ಟ ವಾತಾವರಣ ತಾಲೂಕಿನಲ್ಲಿ ನಿರ್ಮಾಣವಾಗಿದೆ ಎಂದು ಸಚಿವ ನಾರಾಯಣಗೌಡ ವಿರುದ್ಧ ಆರೋಪಿಸಿದ್ದರು. ನನ್ನ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತರಾದ ಹೆಚ್.ಟಿ.ಮಂಜು ಎಂಬುವರ ಮೇಲೆ ಸಚಿವರು ಚುನಾವಣೆಯ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಹೆಚ್.ಟಿ.ಮಂಜು ಸ್ಟೋನ್ ಕ್ರಷರ್ ಮತ್ತು ಕ್ವಾರಿ ಮೈನಿಂಗ್ ಮಾಡಲು ಸರ್ಕಾರದ ಸಂಬಂಧಪಟ್ಟ ಎಲ್ಲ ಇಲಾಖೆಗಳಿಂದ ಅನುಮತಿ ಪಡೆದು ಕೊಂಡಿದ್ದರೂ ಸಹ ಸ್ಥಳೀಯ ರಾಜಕಾರಣದಿಂದ ಅವರಿಗೆ ವ್ಯವಹಾರ ಮಾಡಲು ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.ಕಾನೂನು ಬದ್ಧವಾಗಿ ಹೆಚ್.ಟಿ.ಮಂಜುರವರಿಗೆ ಅವರ ವ್ಯವಹಾರ ನಡೆಸಲು ಸಂಬಂಧ ಪಟ್ಟವರಿಗೆ ಸೂಚನೆ ನೀಡಬೇಕು. ಸರ್ಕಾರ ಇದರ ಬಗ್ಗೆ ಪಾರದರ್ಶಕತೆ ತೋರಿಸದೆ ಹೋದರೆ, ಜೂನ್ 29ರಂದು ಮುಖ್ಯಮಂತ್ರಿಗಳ ನಿವಾಸದ ಮುಂದೆ ಸತ್ಯಾಗ್ರಹ ಕೂರುತ್ತೇನೆ ಎಂದು ಈ ಪತ್ರದ ಮುಖೇನ ಎಚ್ಚರಿಕೆ ನೀಡಿದ್ದರು.