ಬೆಂಗಳೂರು :ವಿಧಾನ ಪರಿಷತ್ ಕಲಾಪದಲ್ಲಿ ಕಾನೂನು ಬಾಹಿರ ಸ್ಕ್ಯಾವೆಂಜಿಂಗ್‌ನಿಂದ ಕಾರ್ಮಿಕರು ಮೃತಪಡುತ್ತಿರುವ ಘಟನೆ ಕುರಿತು ಚರ್ಚೆ ನಡೆಯಿತು. ಈ ವೇಳೆ ಆಡಳಿತ ಪಕ್ಷದ ಆಯನೂರು ಮಂಜುನಾಥ್ ಪ್ರತಿಪಕ್ಷ ಸದಸ್ಯ ಹರಿಪ್ರಸಾದ್ ನಡುವೆ ಜಟಾಪಟಿಯೂ ನಡೆದು ವಾಕ್ಸಮರಕ್ಕೆ ವೇದಿಕೆಯಾಯಿತು.
ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಬಿ ಕೆ ಹರಿಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು, ಕಳೆದ 5 ವರ್ಷದಿಂದ ಸ್ಕ್ಯಾವೆಂಜಿಂಗ್‌ನಿಂದ 30-32 ಜನ ಮೃತಪಟ್ಟಿದ್ದಾರೆ.
ಕಾನೂನು ಬಾಹಿರವಾಗಿ ಹಸ್ತಚಾಲಿತ ಸ್ಕ್ಯಾವೆಂಜಿಂಗ್ ಕೆಲಸಗಳನ್ನು ಮಾಡಲಾಗುತ್ತಿದೆ, ಇದನ್ನು ಕಠಿಣ ಕಾನೂನು ಮೂಲಕ ಸರಿಪಡಿಸಬೇಕಿದೆ, ಕಾನೂನು ಪಾಲಿಸಬೇಕು ಎನ್ನುವ ಆದೇಶವಿದ್ದರೂ ಎಗ್ಗಿಲ್ಲದೆ ನಡೆಯುತ್ತಿದೆ. ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ ಎಂದರು.
ನಂತರ ಉಪ ಪ್ರಶ್ನೆಗೆ ಉತ್ತರ ನೀಡಿದ ಶ್ರೀರಾಮುಲು, ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಲಾಗಿದೆ. ಹೈಕೋರ್ಟ್ನಲ್ಲಿ ಕೇಸ್ ಇದೆ, ಆರ್ಡಿಪಿಆರ್, ಜಲಮಂಡಳಿ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿ ಚರ್ಚೆ ನಡೆಯುತ್ತಿದೆ, ಶಾಶ್ವತ ಪರಿಹಾರಕ್ಕೆ ಪ್ರಯತ್ನ ಕಲ್ಪಿಸಲಾಗುತ್ತದೆ. ಕಲಬುರಗಿ ಘಟನೆ ಸಂಬಂಧ ಎಫ್ಐಆರ್ ದಾಖಲಿಸಲಾಗಿದೆ ಎಂದರು.
ನಂತರ ಸಚಿವರ ನೆರವಿಗೆ ಧಾವಿಸಿದ ಡಿಸಿಎಂ ಕಾರಜೋಳ, ಸಾಮಾಜಿಕ ಕಳಕಳಿ, ಕಾಳಜಿ ಇಲ್ಲದ ಕಾರಣಕ್ಕೆ ಈ ದುರಂತವಾಗುತ್ತಿವೆ, ಮನುಷ್ಯನ ಹೊಲಸನ್ನು, ಮನುಷ್ಯನ ಕೈಯಿಂದ ತೆಗೆಸುವುದು, ತಲೆಯ ಮೇಲೆ ಹೊರುವುದಕ್ಕೆ ನಿಷೇಧ ಹೇರಿದೆ. ಸಫಾಯಿ ಕರ್ಮಚಾರಿ ಆಯೋಗ ಆರಂಭಿಸಿ ಅವರಿಗೆಲ್ಲಾ ನೆರವು ಕಲ್ಪಿಸಲಾಗಿತ್ತಿದೆ. ಪೌರಕರ್ಮಿಕರು ಶೇ.90ರಷ್ಟು ನನ್ನ ಸಮುದಾಯವರೇ ಇದ್ದಾರೆ.
ಎಸ್ಪಿ ಟಿಎಸ್ಪಿ ಅನುದಾನ ಬಳಕೆಗೆ ಅವಕಾಶ ಇದೆ. ಸಫಾಯಿ ಕರ್ಮಚಾರಿಗಳ ಅನುಕೂಲಕ್ಕೆ ಇನ್ನಷ್ಟು ಅನುದಾನ ಕೊಡಲಾಗುತ್ತದೆ. ಇದು ಸಾವಿರ ವರ್ಷದ ಪಿಡುಗು ಇನ್ನೂ ಹೋಗುತ್ತಿಲ್ಲ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೀಗಾಗುತ್ತಿದೆ. ಇನ್ಮುಂದೆ ಕಾರ್ಮಿಕರು ಸ್ಕ್ಯಾವೆಂಜಿಂಗ್ ವೇಳೆ ಮೃತರಾಗುವ ಘಟನೆ ಜರುಗಿದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಯಾಗಿಸಲಾಗುತ್ತದೆ ಎಂದರು.