ಬೆಂಗಳೂರು:ತೈಲ ಬೆಲೆ ಇಳಿಸುವ ಉದ್ದೇಶದೊಂದಿಗೆ ಪೆಟ್ರೋಲ್ ಅನ್ನು ಜಿಎಸ್ಟಿಗೆ ಸೇರಿಸುವುದು ಪರಿಹಾರವಲ್ಲ. ಅದು ಶೋಷಣೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಜಿಎಸ್ಟಿಗೆ ಸೇರಿಸುವ ಬದಲಿಗೆ ಕೇಂದ್ರ ಈಗ ವಿಧಿಸುತ್ತಿರುವ ಮಿತಿ ಮೀರಿದ ಸುಂಕ ಕಡಿತ ಮಾಡಲಿ. ರಾಜ್ಯ ಸರ್ಕಾರವೂ ತೆರಿಗೆ ಇಳಿಸಲಿ. ಈಗ ತೈಲದ ಮೇಲೆ ಕೇಂದ್ರ, ರಾಜ್ಯಗಳೆರಡೂ ಶೇ.68ರಷ್ಟು ತೆರಿಗೆ ವಿಧಿಸುತ್ತಿವೆ. ಈ ತೆರಿಗೆ ಪ್ರಮಾಣ ಕಡಿಮೆಯಾಗಬೇಕಾದ್ದು ಅಗತ್ಯ.
ಅಂದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಈಗ ಒಂದು ಲೀಟರ್ ಪೆಟ್ರೋಲ್ ಮೇಲೆ ₹60–65 ತೆರಿಗೆ ಹಣ ಸಿಗುತ್ತಿದೆ. ಆದರೆ, ಎರಡೂ ಸರ್ಕಾರಗಳೂ ಲೀಟರ್ ಪೆಟ್ರೋಲ್ ಮೇಲೆ ಸಂಗ್ರಹಿಸುವ ಹಣ ₹30 ಮೀರಬಾರದು. ಆಗ ಪೆಟ್ರೋಲ್ ₹65–70ಗೆ ಬಂದು ನಿಲ್ಲಲಿದೆ. ನಿಜವಾಗಿಯೂ ಆಗಬೇಕಾದ್ದು ಇದು. ಈ ನಿಟ್ಟಿನಲ್ಲಿ ನಾವೆಲ್ಲರೂ ಹೋರಾಡಬೇಕಿದೆ ಎಂದು ತಿಳಿಸಿದ್ದಾರೆ.
ಪೆಟ್ರೋಲ್ ಬೆಲೆ ಏರಿಕೆ ವಿರುದ್ಧದ ಹೋರಾಟಗಳು ತೆರಿಗೆ, ಸುಂಕ ಇಳಿಕೆಯ ಉದ್ದೇಶದ್ದಾಗಿರಬೇಕೇ ವಿನಃ ಜಿಎಸ್ಟಿಗೆ ಸೇರಿಸುವುದಾಗಿರಬಾರದು. ಈಗ ಕಾಂಗ್ರೆಸ್ ಪ್ರತಿಭಟಿಸುತ್ತಿರುವುದು ತೆರಿಗೆ ಇಳಿಸಲೋ ಅಥವಾ ಪೆಟ್ರೋಲ್ನ್ನು ಜಿಎಸ್ಟಿಗೆ ಸೇರಿಸಲೋ ಎಂಬುದು ಸ್ಪಷ್ಟವಾಗಬೇಕು. ಜಿಎಸ್ಟಿಗೆ ಸೇರಿಸುವುದೇ ಕಾಂಗ್ರೆಸ್ ಉದ್ದೇಶವಾಗಿದ್ದರೆ, ಅದು ಶೋಷಣೆ ಪರವಾದ ಹೋರಾಟ. ಪೆಟ್ರೋಲಿಯಂ ಖಾತೆಯ ಮಾಜಿ ಸಚಿವರೂ, ಕಾಂಗ್ರೆಸ್‌ನ ಹಿರಿಯರೂ ಆಗಿರುವ ನಾಯಕರೊಬ್ಬರು ಪೆಟ್ರೋಲ್ನ್ನು ಜಿಎಸ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಜಿಎಸ್ಟಿ ವ್ಯಾಪ್ತಿಯಲ್ಲಿ ಪೆಟ್ರೋಲ್ ಬಂದರೆ ಒಳ್ಳೆಯದು: ಡಿ.ವಿ. ಸದಾನಂದಗೌಡ