ಕರ್ನಾಟಕ

karnataka

ETV Bharat / state

ನೀಟ್ ಪರೀಕ್ಷೆ ದಿನವೇ ಪ್ರಧಾನಿ ರೋಡ್ ಶೋ: ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ವೇಳಾಪಟ್ಟಿ ಬದಲಿಸಿಕೊಳ್ಳಲು ಹೆಚ್​ಡಿಕೆ ಆಗ್ರಹ

ಪ್ರಧಾನಿ ನರೇಂದ್ರ ಮೋದಿಯವರ ರೋಡ್​ ಶೋನಿಂದ ಮಕ್ಕಳ ಭವಿಷ್ಯಕ್ಕೆ ಧಕ್ಕೆ ಉಂಟಾಗಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ಒತ್ತಾಯಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ

By

Published : May 5, 2023, 3:09 PM IST

ಬೆಂಗಳೂರು : ಇದೇ 7ರಂದು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಗಾಗಿ ಹಮ್ಮಿಕೊಂಡಿರುವ ರೋಡ್ ಶೋದಿಂದ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಲಿದೆ. ಈ ಕಾರಣಕ್ಕೆ ಪ್ರಧಾನಿಗಳು ರೋಡ್ ಶೋ ವೇಳಾಪಟ್ಟಿ ಬದಲಿಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಒತ್ತಾಯಿಸಿದ್ದಾರೆ.

ಜೆಪಿ ನಗರದ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭಾನುವಾರ ನೀಟ್ ಪರೀಕ್ಷೆಯ ನಡುವೆಯೂ ಪ್ರಧಾನಿ ಮೋದಿ ರೋಡ್ ಶೋ ವಿಚಾರದ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಹಾಗೂ ಸಾರ್ವಜನಿಕರಿಂದ ಬರುತ್ತಿರುವ ಟೀಕೆಗಳ ಬಗ್ಗೆ ನನಗೆ ಮಾಹಿತಿ ಇದೆ. ರೋಡ್ ಶೋ ಗಳಿಂದ ಮಕ್ಕಳ ಭವಿಷ್ಯಕ್ಕೆ ಧಕ್ಕೆ ಉಂಟಾಗಬಾರದು ಎಂದರು.

ಜನಸಾಮಾನ್ಯರ ಬದುಕಿನ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ: ಬಿಜೆಪಿ ಪಕ್ಷಕ್ಕೆ ನಾಡಿನ ಜನರ ಸಮಸ್ಯೆಗಳಿಗಿಂತ ಅವರಿಗೆ ಅಧಿಕಾರ ಹಿಡಿಯೋದೇ ಮುಖ್ಯವಾಗಿದೆ. ಅಧಿಕಾರಕ್ಕೋಸ್ಕರ ಅವರು ಏನು ಬೇಕಾದರೂ ಮಾಡ್ತಾರೆ. ಜನಸಾಮಾನ್ಯರ ಬದುಕಿನ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ. ಏನಾದರೂ ಮಾಡಿ ಅಧಿಕಾರ ಹಿಡಿಯಬೇಕು ಎಂಬ ಅಜೆಂಡಾ ಇಟ್ಟುಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.

ಮಕ್ಕಳ ಭವಿಷ್ಯದ ಜತೆಗೆ ಚೆಲ್ಲಾಟ ಆಡೋದು ಸರಿಯಲ್ಲ:ಸಾರ್ವಜನಿಕ ವಲಯದಲ್ಲಿ ಇದು ಸರಿನಾ, ತಪ್ಪಾ ಚರ್ಚೆ ನಡೆದರೂ ಅದನ್ನು ಬಿಜೆಪಿಯವರು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ದೇಶದ ಪ್ರಧಾನಿಯಾಗಿ ಮಕ್ಕಳ ಭವಿಷ್ಯದ ಜತೆಗೆ ಚೆಲ್ಲಾಟ ಆಡೋದು ಸರಿಯಲ್ಲ. ನೀಟ್ ಪರೀಕ್ಷೆಗೆ ತೊಂದರೆ ಕೊಡಬಾರದು. ಮಕ್ಕಳ ಭವಿಷ್ಯದ ಬಗ್ಗೆ ಅವರಿಗೆ ಏನಾದರೂ ಕಿಂಚಿತ್ ಕಾಳಜಿ ಇದ್ದರೆ ರೋಡ್ ಶೋ ಮುಂದಕ್ಕೆ ಹಾಕುವುದು ಒಳ್ಳೆಯದು ಎಂದರು.

ಒಂದೇ ದಿನ ಮೋದಿ ಮೆಗಾ ರೋಡ್ ಶೋ : ಮೇ 6 ಮತ್ತು 7 ರಂದು ಎರಡು ದಿನ ಸಿಲಿಕಾನ್​ ಸಿಟಿಯಲ್ಲಿ ನಿಗದಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಕಾರ್ಯಕ್ರಮವನ್ನು (ಮೇ 2-2023) ರಂದು ಒಂದೇ ದಿನಕ್ಕೆ ಸೀಮಿತಗೊಳಿಸಲಾಗಿತ್ತು. ಮೇ 6ರಂದು ಒಂದೇ ದಿನ ಪ್ರಚಾರ ನಡೆಸಲು ನಿರ್ಧಾರ ಕೈಗೊಳ್ಳಲಾಗಿದ್ದು, ಅಂದು 23 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೋದಿ ಭರ್ಜರಿ ರೋಡ್ ಶೋ ನಡೆಸಿ, ಬಿಜೆಪಿ ಪರವಾಗಿ ಮತಬೇಟೆ ನಡೆಸಲಿದ್ದಾರೆ ಎಂಬುದು ತಿಳಿದು ಬಂದಿತ್ತು.

ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆ ಬಿಜೆಪಿ ಶಾಸಕರ ಸಭೆ: ರೋಡ್ ಶೋ ನಿಮಿತ್ತ ಬೆಂಗಳೂರು ಬಿಜೆಪಿ ಶಾಸಕರ ಸಭೆ ನಡೆಸಲಾಯಿತು. ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ಶಾಸಕರು ಮತ್ತು ಸಂಸದರು ಭಾಗಿಯಾಗಿದ್ದರು. ಬೆಂಗಳೂರಿನಲ್ಲಿ ನಮೋ ಮೆಗಾ ರೋಡ್ ಶೋ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿತ್ತು. ಎರಡು ದಿನದ ಬದಲು ಒಂದೇ ದಿನ ರೋಡ್ ಶೋ ನಡೆಸಲು ಪ್ರಧಾನಿ ಕಾರ್ಯಾಲಯದಿಂದ ಬಂದಿದ್ದ ಮಾಹಿತಿಯಂತೆ ಒಂದೇ ದಿನದ ರೋಡ್ ಶೋಗಾಗಿ ಸಿದ್ಧತೆ ಮಾಡಿಕೊಳ್ಳುವ ಕುರಿತು ಚರ್ಚಿಸಲಾಗಿತ್ತು.

ಇದನ್ನೂ ಓದಿ:ಒಂದೇ ದಿನ ಮೋದಿ ಮೆಗಾ ರೋಡ್ ಶೋ: ಮೇ 6ಕ್ಕೆ ಸಿಲಿಕಾನ್ ಸಿಟಿಯಲ್ಲಿ ನಮೋ ಮತಬೇಟೆ..

ABOUT THE AUTHOR

...view details