ಬೆಂಗಳೂರು:ನಾವೆಲ್ಲಾ ಪ್ರಧಾನಿ ಮಾತಿಗೆ ಬೆಲೆ ಕೊಟ್ಟು ಅವರು ಹೇಳಿದ್ದೆಲ್ಲ ಕೇಳಿದ್ದೇವೆ. ಆದರೆ, ಇವತ್ತು ಬಿಜೆಪಿ ಅಧ್ಯಕ್ಷರು ಅವರ ಕಾರ್ಯಕರ್ತರಿಗೆ ಒಪ್ಪೊತ್ತಿನ ಉಪವಾಸ ಕರೆ ನೀಡಿದ್ದಾರೆ. ಇಲ್ಲಿಯವರೆಗೆ ಪ್ರಧಾನಿ ನಡೆದುಕೊಂಡಿದ್ದಕ್ಕೆ ಇವತ್ತು ನಡೆದುಕೊಂಡಿದ್ದು ಎರಡು ಮುಖವಾಗಿ ಕಾಣಿಸುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಮಾರ್ಮಿಕವಾಗಿ ಹೇಳಿದ್ದಾರೆ.
ಒಂದು ಹೊತ್ತು ಉಪವಾಸವಿರಲು ಕರೆ ನೀಡಿದ್ದಕ್ಕೆ ಮಾಜಿ ಪ್ರಧಾನಿ ಹೆಚ್‌ಡಿಡಿ ಕಿಡಿ.. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ 40ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಒಪ್ಪೊತ್ತಿನ ಉಪವಾಸ ಮಾಡುವಂತೆ ಬಿಜೆಪಿ ಕಾರ್ಯಕರ್ತರಿಗೆ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಕರೆ ನೀಡಿದ್ದರು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಮರ್ಥಿಸಿಕೊಂಡದ್ದು ಬೇಸರ ಮೂಡಿಸಿದೆ ಎಂದರು. ಈ ವೇಳೆ ನಿಜಾಮುದ್ದೀನ್ ಪ್ರಕರಣದ ಬಗ್ಗೆ ಮಾತನಾಡಿ, ದೆಹಲಿ ನಿಜಾಮುದ್ದೀನ್‌ನಲ್ಲಿ ಅನೇಕರು ಭಾಗವಹಿಸಿದ್ದರು. ಹೀಗಾಗಿ ಕೊರೊನಾ ಹರಡಲು ಕಾರಣವಾಯ್ತು ಎಂದಾದರೇ, ಮಹಾರಾಷ್ಟ್ರದಲ್ಲಿ ಹರಡಲು ಏನು ಕಾರಣ? ಎಂದು ಪ್ರಶ್ನಿಸಿದರು.
ಈಗಾಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇನ್ನೆರಡು ವಾರಗಳಲ್ಲಿ ಕೊರೊನಾ ದುಪ್ಪಟ್ಟಾಗಬಹುದು ಎಂದು ಹೇಳಿದ್ದಾರೆ. ಹೀಗಾಗಿ ಒಂದು ಸಮುದಾಯವನ್ನು ಗುರಿಯಾಗಿಸುವುದು ಬೇಡ. ನಮ್ಮಲ್ಲಿ ಬೇಕಾದ ಸಿದ್ಧತೆ ಮಾಡಿಕೊಳ್ಳುವುದರಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಮೆಡಿಕಲ್ ಕಿಟ್, ಔಷಧಿ ತರಿಸಿದ್ದಾರೆ. ಕೊರೊನಾ ಶಂಕಿತರಿಗೆ ಚಿಕಿತ್ಸೆ ಕೊಡುತ್ತಿದ್ದಾರೆ. ಆದರೆ, ಇನ್ನಷ್ಟು ಎಚ್ಚರಿಕೆ ಅಗತ್ಯ. ಮೂರನೇ ಹಂತ, ನಾಲ್ಕನೇ ಹಂತ ಎನ್ನುತ್ತಿದ್ದಾರೆ. ಕಡಿಮೆಯಾದ ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲ ಮಾಡುತ್ತೇವೆ ಎಂದು ಸರ್ಕಾರ ಹೇಳಿದೆ ಎಂದರು.
ಇಡೀ ರಾಷ್ಟ್ರದ ಸಂಕಷ್ಟದ ಸಂದರ್ಭದಲ್ಲಿ ಪ್ರಧಾನಿ ಮಾತಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ನನಗೆ ನಿನ್ನೆ ಮಧ್ಯಾಹ್ನ ಪ್ರಧಾನಿ ಮೋದಿ ಫೋನ್ ಮಾಡಿದ್ದರು. ನಿಮ್ಮ ಸಹಕಾರಬೇಕು ಎಂದು ಮೋದಿ ಕೇಳಿದರು. ನಾನು ಬೆಂಬಲಿಸುತ್ತೇನೆ ಎಂದಿದ್ದೆ, ಬೆಂಬಲಿಸಿದ್ದೇನೆ ಎಂದು ಹೇಳಿದರು. ಅಲ್ಲದೇ ಪ್ರಧಾನಿ ಮಾತಿಗೆ ನಾವೆಲ್ಲ ಗೌರವ ಕೊಟ್ಟಿದ್ದೇವೆ. ಚಪ್ಪಾಳೆ ಹೊಡೆದು, ದೀಪ ಹಚ್ಚಲು ನಾವೆಲ್ಲ ಒಪ್ಪಿಗೆ ಕೊಟ್ಟಿದ್ದೇವೆ ಎಂದರು. ನಾನು ಲಾಕ್‌ಡೌನ್ ಬಳಿಕ ಇವತ್ತೇ ಕಚೇರಿಗೆ ಬಂದಿದ್ದೇನೆ. ಪಕ್ಷದ ಕಾರ್ಯಕರ್ತರು ಬರುತ್ತಾರೆ. ಅದಕ್ಕಾಗಿ ಕಚೇರಿ ಮುಚ್ಚಲಾಗಿತ್ತು. ನಿನ್ನೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಕಚೇರಿಗಳಲ್ಲಿ ಜಗಜೀವನ್ ರಾಮ್ ದಿನಾಚರಣೆ ಮಾಡಿದ್ದರು. ನಾವು ಇವತ್ತು ಕಚೇರಿಯಲ್ಲಿ ಆಚರಿಸುತ್ತಿದ್ದೇವೆ ಎಂದರು.