ಬೆಂಗಳೂರು: ಮಹಾತ್ಮ ಗಾಂಧಿ ಅವರು ದೇಶಕ್ಕೆ ಮೊದಲ ಸ್ವಾತಂತ್ರ್ಯ ತಂದು ಕೊಟ್ಟರೆ, ಜಯಪ್ರಕಾಶ್ ನಾರಾಯಣ್ ( ಜೆಪಿ) ಅವರು ಮತ್ತೊಂದು ಹಂತದ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ, ಜೆಪಿ ಅವರು ತಂದುಕೊಟ್ಟ ಮತ್ತೊಂದು ಸ್ವಾತಂತ್ರ್ಯ ಕೂಡ ನಶಿಸಿ ಹೋಗುತ್ತಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಏರ್ಪಡಿಸಿದ್ದ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ 119 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗಾಂಧಿಯ ಕಾಂಗ್ರೆಸ್ ಈಗ ಏನಾಗುತ್ತಿದೆ. ಯಾರನ್ನು ನೋಡಿದರೂ ಅಧಿಕಾರ, ಅಧಿಕಾರಕ್ಕಾಗಿ ಹಾತೊರೆಯುವ ವ್ಯವಸ್ಥೆಗೆ ಬಂದು ನಿಂತಿದೆ ಎಂದರು.
ಅಧಿಕಾರಕ್ಕೆ ಹಾತೊರೆಯುವ ಈ ವ್ಯವಸ್ಥೆಯಲ್ಲಿ ನಾನು ಜೆಪಿ ಹೆಸರು ತಮ್ಮ ಕಚೇರಿಗೆ ಇಟ್ಟಿದ್ದೇನೆ. ಇನ್ನು ಮುಂದಾದರೂ ನಾವೆಲ್ಲ ಯುವ ಪೀಳಿಗೆಗೆ ಜೆಪಿ ಅವರ ನಾಯಕತ್ವದ ಬಗ್ಗೆ ತಿಳಿಸಿ ಅವರ ಹಾದಿಯಲ್ಲಿ ನಡೆಯುವಂತೆ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದರು.
ಬಿಜೆಪಿ ಸರ್ಕಾರಕ್ಕೆ ಪರೋಕ್ಷ ಟಾಂಗ್ : ಮಹಾತ್ಮ ಗಾಂಧಿ ಅವರು ಅದ್ದೂರಿ ಜೀವನ ಮಾಡಲಿಲ್ಲ. ಕುಟೀರ ಕಟ್ಟಿ ಬಂದವರಿಗೆ ವ್ಯವಸ್ಥೆ ಮಾಡಿದ್ದರು. ತುಂಡು ಪಂಚೆ ಉಟ್ಟು ಸ್ವಾತಂತ್ರ್ಯ ತಂದುಕೊಟ್ಟರು. ನಾನು ಈಗಿನ ರಾಜಕೀಯ ಹಾಗೂ ಆಗ ಇದ್ದ ರಾಜಕೀಯದ ಬಗ್ಗೆ ಕಂಪೇರ್ ಮಾಡುತ್ತೇನೆ. ಅಮೆರಿಕದ ಅಧ್ಯಕ್ಷರಾಗಿದ್ದ ಟ್ರಂಪ್ ಅವರನ್ನು ಕರೆಸಿ ಭಾಷಣ ಮಾಡಿಸಿದ್ದರು ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ಅವರಿಗೆ ಕುಟುಕಿದರು.
ನಾನು ಬಿಜೆಪಿ, ಆರ್ಎಸ್ಎಸ್ ಸೇರಿದವನಲ್ಲ. ಅನೇಕರು ತುರ್ತು ಪರಿಸ್ಥಿತಿಗೆ ಒಪ್ಪಿಕೊಂಡಿದ್ದೇವೆ ಅಂತಾ ಆಗ ಬರೆದುಕೊಟ್ಟರು. ನಾನು ಆರ್ಎಸ್ಎಸ್ ಬಗ್ಗೆ ಟೀಕೆ ಮಾಡಲ್ಲ. ವಾಸ್ತವಾಂಶ ಹೇಳುತ್ತೇನೆ ಅಷ್ಟೇ ಎಂದು ಪರೋಕ್ಷವಾಗಿ ಟೀಕಿಸಿದರು. 1957 ರಲ್ಲಿ ಜೆಪಿಯವರನ್ನು ಮೊದಲ ಬಾರಿಗೆ ನೋಡಿದೆ. ಅವರು ಸಕ್ರಿಯ ರಾಜಕಾರಣದಲ್ಲಿ ಇದ್ದರು.