ಕರ್ನಾಟಕ

karnataka

ETV Bharat / state

ಗುರುರಾಘವೇಂದ್ರ ಬ್ಯಾಂಕ್ ಹಗರಣ: ಖಾತೆಗಳನ್ನು ಮುಚ್ಚದಂತೆ ಹೈಕೋರ್ಟ್ ಆದೇಶ

ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣಕ್ಕೆ ಸಂಬಂಧಪಟ್ಟಂತೆ ಸಾಲಗಾರರ ಖಾತೆಗಳನ್ನು ಆಡಳಿತಾಧಿಕಾರಿ ಗಮನಕ್ಕೆ ತರದೆ ಮುಚ್ಚಬಾರದು ಎಂದು ಹೈಕೋರ್ಟ್ ನಿರ್ದೇಶಿಸಿದೆ.

High Court
ಹೈಕೋರ್ಟ್

By

Published : Nov 10, 2020, 3:31 PM IST

ಬೆಂಗಳೂರು:ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತ ಹಾಗೂ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್‌ನಲ್ಲಿ ಸಾಲ ಪಡೆದಿರುವ ಸಾಲಗಾರರ ಖಾತೆಗಳನ್ನು ಆಡಳಿತಾಧಿಕಾರಿ ಗಮನಕ್ಕೆ ತರದೆ ಮುಚ್ಚಬಾರದು ಎಂದು ಹೈಕೋರ್ಟ್ ನಿರ್ದೇಶಿಸಿದೆ.

ಠೇವಣಿದಾರರ ಹಣ ದುರ್ಬಳಕೆ ಹಗರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ಕೋರಿ ಬಸವನಗುಡಿಯ ಕೆ.ಆರ್. ನರಸಿಂಹಮೂರ್ತಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ ವಾದಿಸಿ, ಆಡಳಿತಾಧಿಕಾರಿ ಗಮನಕ್ಕೆ ತರದೆ ಅಂದಾಜು 50 ಸಾಲಗಾರರ ಖಾತೆಯನ್ನು ಬ್ಯಾಂಕ್ ಸಿಬ್ಬಂದಿ ಮುಚ್ಚಿದ್ದಾರೆ ಎಂಬ ವಿಷಯವನ್ನು ಪೀಠದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಆಡಳಿತಾಧಿಕಾರಿ ಗಮನಕ್ಕೆ ತರದೆ ಖಾತೆ ಮುಚ್ಚಿದರೆ ಅದು ಅಪರಾಧವಾಗಲಿದೆ. ಆದ್ದರಿಂದ ಯಾವ ಕಾರಣಕ್ಕೆ ಖಾತೆ ಮುಚ್ಚಲಾಗಿದೆ, ಆ ಖಾತೆಗಳಲ್ಲಿ ಎಷ್ಟು ಸಾಲ ನೀಡಲಾಗಿತ್ತು, ಎಷ್ಟು ಸಾಲ ವಸೂಲಿ ಮಾಡಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆಡಳಿತಾಧಿಕಾರಿಗೆ ಸೂಚಿಸಿತು. ಜತೆಗೆ, ಇನ್ನು ಮುಂದೆ ಆಡಳಿತಾಧಿಕಾರಿ ಗಮನಕ್ಕೆ ತರದೆ ಯಾವುದೇ ಖಾತೆಗಳನ್ನು ಮುಚ್ಚಬಾರದು ಎಂದು ಸೂಚಿಸಿ ವಿಚಾರಣೆಯನ್ನು ನ.20ಕ್ಕೆ ಮುಂದೂಡಿತು.

ABOUT THE AUTHOR

...view details