ಕರ್ನಾಟಕ

karnataka

ETV Bharat / state

ಯುವತಿಯ ವಿಚಾರಕ್ಕೆ ವಿದ್ಯಾರ್ಥಿಗಳ ನಡುವೆ ಕಿರಿಕ್; ಯುವಕನಿಗೆ ಚಾಕುವಿನಿಂದ ಇರಿತ - ಯುವಕನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನ

ಯುವತಿಯ ವಿಚಾರಕ್ಕೆ ಇಬ್ಬರು ಪದವಿ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದಿದೆ. ಇದೇ ವೇಳೆ ಒಬ್ಬನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

group-of-men-stabbed-knife-to-young-man-in-bengaluru
ಬೆಂಗಳೂರು: ಯುವತಿಯ ವಿಚಾರಕ್ಕೆ ವಿದ್ಯಾರ್ಥಿಗಳ ನಡುವೆ ಕಿರಿಕ್.. ಯುವಕನಿಗೆ ಚಾಕುವಿನಿಂದ ಇರಿತ

By

Published : Oct 21, 2021, 6:44 AM IST

ಬೆಂಗಳೂರು:ಯುವತಿಯ ವಿಚಾರಕ್ಕೆ ಇಬ್ಬರು ಪದವಿ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದಿದ್ದು, ಒಬ್ಬನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ನಡೆದಿದೆ.

ಮಾಗಡಿ ರಸ್ತೆಯ ಅಗ್ರಹಾರದ ನಿವಾಸಿ ಕೀರ್ತನ್ ಕುಮಾರ್ (21) ಹಲ್ಲೆಗೊಳಗಾದ ಯುವಕ. ಕೃತ್ಯ ಎಸಗಿದ ನಾಲ್ಕು ಮಂದಿ ಯುವಕರಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ನಗರದ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ಕೀರ್ತನ್ ಕುಮಾರ್ ತನ್ನ ಸಹಪಾಠಿ ಹಾಗೂ ಬ್ಯಾಡರಹಳ್ಳಿಯ ಅಂಜನನಗರ ನಿವಾಸಿ ಯುವತಿಯನ್ನು ಪ್ರೀತಿಸುತ್ತಿದ್ದ. ಆರೋಪಿ ಯುವಕ ಕೂಡ ಮತ್ತೊಂದು ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದ. ಬುಧವಾರ ಸಂಜೆ 5 ಗಂಟೆಯ ಸಮಯದಲ್ಲಿ ಯುವತಿಯ ತಾಯಿ ಕೀರ್ತನ್ ಕುಮಾರ್‌ಗೆ ಕರೆ ಮಾಡಿ, ಇದುವರೆಗೂ ಮಗಳು ಮನೆಗೆ ಬಂದಿಲ್ಲ, ಎಲ್ಲಿದ್ದಾಳೆ ಎಂದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಅದರಿಂದ ಗಾಬರಿಗೊಂಡ ಕೀರ್ತನ್ ಕುಮಾರ್ ಕೂಡಲೇ ಮನೆಗೆ ಬಂದಿದ್ದಾನೆ. ಅದೇ ವೇಳೆ ಆರೋಪಿ ಯುವತಿಯನ್ನು ಬೈಕ್‌ನಲ್ಲಿ ಡ್ರಾಪ್ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚಾಕುವಿನಿಂದ ಇರಿತಕ್ಕೊಳಗಾದ ಯುವಕ

ಈ ಸಂದರ್ಭದಲ್ಲಿ ಇಬ್ಬರ ನಡುವೆ ಗಲಾಟೆಯಾಗಿದೆ. ನಂತರ ಕೀರ್ತನ್ ಕುಮಾರ್ ಆಟೋ ಹತ್ತಿಕೊಂಡು ಮನೆಗೆ ಹೊರಟ್ಟಿದ್ದಾಗ ಆರೋಪಿ ಹಾಗೂ ಆತನ ಮೂವರು ಸಹಚರರು ಹಿಂಬಾಲಿಸಿದ್ದಾರೆ. ಮಾರ್ಗಮಧ್ಯೆ ಕೀರ್ತನ್ ಕುಮಾರ್ ಆಟೋ ಇಳಿದು ಬಸ್ ಏರಿದ್ದಾನೆ. ಆದರೂ ಬಿಡದ ಆರೋಪಿಗಳು ಸುಂಕದಕಟ್ಟೆ ವೃತ್ತದಲ್ಲಿ ಬೈಕ್ ನಿಲ್ಲಿಸಿ, ಬಸ್ ಏರಿ ಕೀರ್ತನ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ.

ನಾಲ್ವರಿಗೆ ಶೋಧ:

ಬೈಕ್‌ನ ಕೀಲಿ ಕೈನಿಂದ ಕೈ ಹಾಗೂ ಹೊಟ್ಟೆಯ ಭಾಗಕ್ಕೆ ಚುಚ್ಚಿದ್ದಾರೆ. ಬಳಿಕ ಚಾಕುವಿನಿಂದ ಎದೆ ಭಾಗಕ್ಕೂ ಇರಿದು ಪರಾರಿಯಾಗಿದ್ದಾರೆ. ರಕ್ತಸ್ರಾವದಿಂದ ಬಿದ್ದಿದ್ದ ಕೀರ್ತನ್ ಕುಮಾರ್‌ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಆರೋಗ್ಯ ಸ್ಥಿರವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು, ಶೋಧ ಕಾರ್ಯ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಆಲ್ಪೈನ್ ಗರ್ಲ್ ಆಫ್ ಇಂಡಿಯಾ- ಬೆಂಗಳೂರು ನಿವಾಸಿ ನಮ್ರತಾ ಟ್ರೆಕ್ಕಿಂಗ್ ಸಾಧನೆ

ABOUT THE AUTHOR

...view details