ಕರ್ನಾಟಕ

karnataka

ETV Bharat / state

Congress Guarantee: ಗೃಹಜ್ಯೋತಿ ಯೋಜನೆ ಆರಂಭ ಘೋಷಿಸಿದ ಸಿಎಂ: ಮಹಾರಾಷ್ಟ್ರ ದುರಂತಕ್ಕೆ ತೀವ್ರ ಆತಂಕ

ಅನ್ನಭಾಗ್ಯದ ಹಣ ಈ ತಿಂಗಳ 10 ನಂತರ ಖಾತೆಗಳಿಗೆ ಹಾಕಲು ಪ್ರಾರಂಭ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.

CM Siddaramaiah
ಮುಖ್ಯಮಂತ್ರಿ ಸಿದ್ದರಾಮಯ್ಯ

By

Published : Jul 1, 2023, 1:39 PM IST

Updated : Jul 1, 2023, 3:48 PM IST

ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಗೃಹಜ್ಯೋತಿ ಇಂದಿನಿಂದ ಪ್ರಾರಂಭವಾಗುತ್ತಿದ್ದು, ಈ ತಿಂಗಳು ವಿದ್ಯುತ್​ ಉಚಿತವಾಗಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇಂದು ಮಾಧ್ಯಮದದವರೊಂದಿಗೆ ಮಾತನಾಡಿದ ಅವರು, ಗೃಹಜ್ಯೋತಿ ಯೋಜನೆಯ ಬಿಲ್​ ಆಗಸ್ಟ್ ತಿಂಗಳಲ್ಲಿ ನೀಡಲಾಗುವುದು. ಅನ್ನಭಾಗ್ಯದ ಹಣವನ್ನು ಈ ತಿಂಗಳು 10 ರ ನಂತರ ಪ್ರಾರಂಭ ಮಾಡುತ್ತೇವೆ. ಜುಲೈ ತಿಂಗಳಲ್ಲಿ ಅಕ್ಕಿ ಬದಲಿಗೆ ದುಡ್ಡನ್ನು ಒಂದನೇ ತಾರೀಖು ಕೊಡುತ್ತೇವೆ ಎಂದು ಹೇಳಿಲ್ಲ. ಈ ತಿಂಗಳ ಹಣವನ್ನು ಈ ತಿಂಗಳಲ್ಲಿಯೇ ನೀಡಲಾಗುವುದು ಎಂದರು.

ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಸಭೆ ನಡೆಯುತ್ತಿರುವ ಬಗ್ಗೆ ಮಾತನಾಡಿ, ವಿರೋಧ ಪಕ್ಷ ಅವರ ಒಳಜಗಳವನ್ನು ಮೊದಲು ಸರಿಪಡಿಸಿಕೊಳ್ಳಲಿ ಎಂದು ಸಿಎಂ ಸಿದ್ದರಾಮಯ್ಯ ಟಾಂಗ್​ ಕೊಟ್ಟರು.

ತೀವ್ರ ಆತಂಕ:ಮಹಾರಾಷ್ಟ್ರದಲ್ಲಿ ಸಂಭವಿಸಿರುವ ಭೀಕರ ಅಪಘಾತಕ್ಕೆ ಆಘಾತ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದು, ಮಹಾರಾಷ್ಟ್ರದ ಬುಲ್ಧಾನದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 26 ಮಂದಿ ಸಜೀವ ದಹನವಾಗಿರುವ ಸುದ್ದಿ ಕೇಳಿ ಆಘಾತವಾಯಿತು. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ತಮ್ಮವರನ್ನು ಕಳೆದುಕೊಂಡ ದುಃಖತಪ್ತ ಕುಟುಂಬಗಳಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಖಾಸಗಿ ಬಸ್‌ನಲ್ಲಿ ಬೆಂಕಿ ಹೊತ್ತಿಕೊಂಡು ಮೂವರು ಮಕ್ಕಳು ಸೇರಿದಂತೆ 26 ಜನರು ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದ ಎಕ್ಸ್‌ಪ್ರೆಸ್‌ ವೇಯಲ್ಲಿ ನಡೆದಿದೆ. ಅವಘಡದಲ್ಲಿ ಏಳು ಜನರು ಗಾಯಗೊಂಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೃತರ ಕುಟುಂಬಕ್ಕೆ ತಲಾ ಎರಡು ಹಾಗೂ ಐದು ಲಕ್ಷ ರೂ. ಪರಿಹಾರ ಘೋಷಿಸಿವೆ.

ವಾಣಿಜ್ಯ ತೆರಿಗೆ ಇಲಾಖೆ ಪುಸ್ತಕ ಬಿಡುಗಡೆ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಾಣಿಜ್ಯ ತೆರಿಗೆ ಇಲಾಖೆ ಹೊರತಂದಿರುವ Handbook on handling Digital Evidence ಪುಸ್ತಕವನ್ನು ಬಿಡುಗಡೆ ಮಾಡಿದರು. ಮುಖ್ಯಮಂತ್ರಿಗಳ ರಾಜಕೀಯ ಕಾಯದರ್ಶಿಗಳಾದ ನಜೀರ್ ಅಹ್ಮದ್, ಗೋವಿಂದರಾಜು, ಆರ್ಥಿಕ ಇಲಾಖೆ ಕಾರ್ಯದರ್ಶಿ ಎಲ್. ಕೆ. ಅತೀಕ್, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಸಿ. ಶಿಖಾ ಉಪಸ್ಥಿತರಿದ್ದರು.

ವಾಣಿಜ್ಯ ತೆರಿಗೆ ಇಲಾಖೆ ಪುಸ್ತಕ ಬಿಡುಗಡೆ

ಸಾರ್ವಜನಿಕರ ಭೇಟಿ:ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಹ ಸಾರ್ವಜನಿಕರ ಭೇಟಿ ಮಾಡಿ ಅಹವಾಲು ಸ್ವೀಕರಿಸಿದರು. ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ ಬಹುತೇಕ ಪ್ರತಿದಿನ ಮುಂಜಾನೆ ಸಾರ್ವಜನಿಕರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸುತ್ತಿದ್ದು, ಸ್ಥಳದಲ್ಲೇ ಹಲವರಿಗೆ ಪರಿಹಾರ ಒದಗಿಸುತ್ತಿದ್ದಾರೆ. ಹಲವರ ಸಮಸ್ಯೆಗೆ ಪರಿಹಾರ ನೀಡಿದ್ದಾರೆ. ನಿನ್ನೆ ಸಹ ಸಾರ್ವಜನಿಕರ ಭೇಟಿ ಸಂದರ್ಭ ಆಸಿಡ್‌ ದಾಳಿಗೆ ತುತ್ತಾದ ಮಹಿಳೆಗೆ ತಮ್ಮ ಕಚೇರಿಯಲ್ಲಿ ಕೆಲಸ ನೀಡಿದ್ದಾರೆ.

ಈ ವಿಚಾರವಾಗಿ ಟ್ವೀಟ್‌ ಸಹ ಮಾಡಿ, ಕಳೆದ ವರ್ಷ ವಿಕೃತನೊಬ್ಬನಿಂದ ಆಸಿಡ್ ದಾಳಿಗೆ ತುತ್ತಾಗಿ ಬದುಕು ಸಾಗಿಸಲು ಪರಿತಪಿಸುತ್ತಿದ್ದ ಯುವತಿ ಇಂದು ನನ್ನನ್ನು ಭೇಟಿಯಾಗಿ, ತನ್ನ ನೋವು ತೋಡಿಕೊಂಡಳು. ಸಂಕಷ್ಟದ ನಡುವೆಯೂ ಆಕೆಯ ಬತ್ತದ ಜೀವನೋತ್ಸಾಹ ಕಂಡು ಚಕಿತನಾದೆ. ಆಕೆಗೆ ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ನೌಕರಿ ನೀಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಧಿಕಾರ ಎನ್ನುವುದು ಜನರ ಕಷ್ಟಗಳಿಗೆ ಹೆಗಲಾಗಲು ಸಿಗುವ ಅವಕಾಶ ಎಂದು ನಾನು ನಂಬಿದ್ದೇನೆ ಎಂದು ಹೇಳಿದ್ದರು.

ಸಿಎಂ ಸಿದ್ದರಾಮಯ್ಯ ನಡೆಸುತ್ತಿರುವ ಸಾರ್ವಜನಿಕರ ಅಹವಾಲು ಸ್ವೀಕಾರ ದಿನದಿಂದ ದಿನಕ್ಕೆ ಸಾಕಷ್ಟು ಜನಪ್ರಿಯವಾಗುತ್ತಲೇ ಸಾಗಿದ್ದು, ಉತ್ತಮ ಸಾಮಾಜಿಕ ಕಳಕಳಿ ಹೊಂದಿದ ಕಾರ್ಯಕ್ರವಾಗಿ ಗೋಚರಿಸುವ ಜತೆಗೆ ಸಿದ್ದರಾಮಯ್ಯ ವೈಯಕ್ತಿಕ ಜನಪ್ರಿಯತೆಯನ್ನು ಸಹ ಹೆಚ್ಚಿಸುತ್ತಿದೆ.

ಇದನ್ನೂ ಓದಿ:ಆ್ಯಸಿಡ್ ಸಂತ್ರಸ್ತೆಗೆ ಸಿಎಂ ಸಚಿವಾಲಯದಲ್ಲಿ ಉದ್ಯೋಗ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Last Updated : Jul 1, 2023, 3:48 PM IST

ABOUT THE AUTHOR

...view details