ಕರ್ನಾಟಕ

karnataka

ETV Bharat / state

ಪೀರನವಾಡಿ ಗಲಾಟೆ : ಕನ್ನಡಿಗರ ಮೇಲೆ ಹಾಕಿದ ಕೇಸ್​ ವಾಪಸ್ ಪಡೆಯುವಂತೆ ಸಿದ್ದರಾಮಯ್ಯ ಆಗ್ರಹ - ಪೀರನವಾಡಿ ವಿವಾದ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಗ್ಗೆ ಮೊದಲೇ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ನಾನು ಸಚಿವ ರಮೇಶ್ ಜಾರಕಿಹೊಳಿ ಜೊತೆ ಮಾತನಾಡಿದ್ದೆ. ರಾಯಣ್ಣನ ಬಗ್ಗೆ ವಿವಾದ ಮಾಡೋದೇ ತಪ್ಪು. ರಾಯಣ್ಣ ಮಹಾನ್ ದೇಶಪ್ರೇಮಿ. ಕಿತ್ತೂರು ಸೈನ್ಯದಲ್ಲಿ ಸೇರಿ ‌ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ನಿನ್ನೆ ಮಾಡಿದ್ದನ್ನ ಮೊದಲೇ ಮಾಡಬಹುದಿತ್ತು..

Opposition leader Siddaramaiah
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

By

Published : Aug 29, 2020, 3:32 PM IST

Updated : Aug 29, 2020, 3:58 PM IST

ಬೆಂಗಳೂರು :ಬೆಳಗಾವಿ ಜಿಲ್ಲೆಯ ಪೀರನವಾಡಿಯಲ್ಲಿ ನಡೆದ ಗಲಾಟೆ ಸಂಬಂಧ ಕನ್ನಡಿಗರ ಮೇಲೆ ಹಾಕಿದ ಕೇಸ್​ಗಳನ್ನು ವಾಪಸ್ ಪಡೆಯಬೇಕು ಎಂದು ರಾಜ್ಯ ಸರ್ಕಾರವನ್ನು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇದಕ್ಕೆ ಸಿ ಟಿ ರವಿ ರಾಜಕೀಯ ಬಣ್ಣ ಕೊಡಬೇಕಾದ ಅಗತ್ಯವಿಲ್ಲ. ನಿನ್ನೆ ಮೊನ್ನೆಯಿಂದ ಕನ್ನಡ ಸಂಘಟನೆಗಳು ಹೋರಾಟ ಮಾಡಿದ್ದಲ್ಲ. ಸಿ ಟಿ ರವಿ ರಾಜಕೀಯ ಬಣ್ಣ ಕೊಡೋ ಹೇಳಿಕೆ ಬಿಟ್ಟು ಜವಾಬ್ದಾರಿಯಿಂದ ಮಾತನಾಡೋದು ಒಳ್ಳೆಯದು. ಸಿ ಟಿ ರವಿ ತಾನು ಸಚಿವ ಎಂದು ತಿಳಿದುಕೊಂಡಿಲ್ಲ ಅಂತಾ ಅನಿಸುತ್ತೆ ಎಂದಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಗ್ಗೆ ಮೊದಲೇ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ನಾನು ಸಚಿವ ರಮೇಶ್ ಜಾರಕಿಹೊಳಿ ಜೊತೆ ಮಾತನಾಡಿದ್ದೆ. ರಾಯಣ್ಣನ ಬಗ್ಗೆ ವಿವಾದ ಮಾಡೋದೇ ತಪ್ಪು. ರಾಯಣ್ಣ ಮಹಾನ್ ದೇಶಪ್ರೇಮಿ. ಕಿತ್ತೂರು ಸೈನ್ಯದಲ್ಲಿ ಸೇರಿ ‌ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ನಿನ್ನೆ ಮಾಡಿದ್ದನ್ನ ಮೊದಲೇ ಮಾಡಬಹುದಿತ್ತು. ಇವರು ವಿಳಂಬ ಮಾಡಿದ್ದು, ಘಟನೆಗೆ ಕಾರಣವಾಯ್ತು. ಸದ್ಯಕ್ಕೆ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಸಿಕ್ಕಿದೆ. ಶಿವಾಜಿ ಕೂಡ ದೇಶಭಕ್ತರೇ.. ರಾಯಣ್ಣ ಸ್ವಾತಂತ್ರ್ಯಕ್ಕಾಗಿ ಪ್ರಾಣಕೊಟ್ಟವರು. ಇಂತಹ ವಿಚಾರದಲ್ಲಿ ವಿವಾದಕ್ಕೆ ಎಡೆ ಮಾಡಿಕೊಡಬಾರದು ಎಂದರು.

ರಾಜ್ಯದಲ್ಲಿ ಮಾದಕ ವಸ್ತು ಪತ್ತೆ ಕುರಿತು ಮಾತನಾಡಿ, ಗಾಂಜಾ ಅಫೀಮು ಮಾರುವುದು, ತೆಗೆದುಕೊಳ್ಳುವುದು ಅಪರಾಧ. ಇದು ಒಂದು ಸಾಮಾಜಿಕ ಪಿಡುಗು. ಸರ್ಕಾರ ಬಿಗಿ ಕ್ರಮ ತೆಗೆದುಕೊಂಡು ತಪ್ಪಿಸಬೇಕು. ಯುವ ಸಮುದಾಯ ಮಕ್ಕಳು ಇದಕ್ಕೆ ಬಲಿ ಆಗ್ತಾರೆ. ಇದರ ಹಿಂದೆ ರಾಜಕಾರಣಿಗಳ ಮಕ್ಕಳು, ಸಿನಿಮಾದವರು ಯಾರೇ ಇರಲಿ ತನಿಖೆ ಮಾಡಲಿ. ರಾಜಕಾರಣಿಗಳ ಮಕ್ಕಳು ಇರೋದು ನನಗೆ ಗೊತ್ತಿಲ್ಲ ಎಂದರು.

ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹ

ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ದ್ರೋಹ :ಜಿಎಸ್​ಟಿ ಬಾಕಿ ತಡೆ ಮಾಡಿರುವ ಕೇಂದ್ರ ಸರ್ಕಾರ ರಾಜ್ಯಗಳಿಗೆ ದ್ರೋಹ ಮಾಡುತ್ತಿದೆ. ಜಿಎಸ್​ಟಿ ಜಾರಿ ವೇಳೆ ಕೌನ್ಸಿಲ್‌ನಲ್ಲಿ ಒಪ್ಪಂದವಾಗಿದೆ. ಜಿಎಸ್​ಟಿ ನಷ್ಟವಾದರೆ ನಷ್ಟ ಭರಿಸಿಕೊಡಬೇಕು. 2015ರಲ್ಲಿ ಜಿಎಸ್​ಟಿ ಜಾರಿಗೆ ಬಂತು. 2020ರವರೆಗೆ ಒಕ್ಕೂಟ ವ್ಯವಸ್ಥೆಯಂತೆ ಒಪ್ಪಂದವಾಗಿದೆ. ಒಪ್ಪಂದದಂತೆ ಮೋದಿ ಸರ್ಕಾರ ನಡೆದುಕೊಳ್ಳಬೇಕು. ಜಿಎಸ್​ಟಿ ತುಂಬಿಕೊಡುವ ಬಗ್ಗೆ ಅವರು ಒಪ್ಪಿಕೊಂಡಿದ್ರು. ನಾವು ಒಪ್ಪಿಕೊಂಡಿದ್ದೇವೆ. ಪ್ರತಿವರ್ಷ ನಷ್ಟವನ್ನೂ ರಾಜ್ಯ ಸರ್ಕಾರಕ್ಕೆ ತುಂಬಿಕೊಡಬೇಕು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಏನ್ ಹೇಳ್ತಾರೆ?. ಕೊರೊನಾದಿಂದ 3 ಲಕ್ಷ ಕೋಟಿ ಜಿಎಸ್‌ಟಿ ಕೊರತೆಯಾಗಿದೆ. ಸೆಸ್‌ನಿಂದ 65 ಸಾವಿರ ಕೋಟಿ ಬರುತ್ತೆ. ಉಳಿದ 2ಲಕ್ಷದ 35ಸಾವಿರ ಕೋಟಿ ಖೋತಾ ಆಗುತ್ತೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ತುಂಬಿಕೊಡೋಕೆ ಆಗಲ್ಲ ಎಂದಿದ್ದಾರೆ ಸಿದ್ದರಾಮಯ್ಯ.

ರಿಸರ್ವ್ ಬ್ಯಾಂಕ್​ನಿಂದ ಸಾಲ ತೆಗೆದುಕೊಳ್ಳಿ ಎಂದಿದ್ದಾರೆ. ಸಾಲ ಪಡೆದ್ರೆ ತೀರಿಸೋದು ಕೂಡ ರಾಜ್ಯ ಸರ್ಕಾರವೇ.. ರಾಜ್ಯಗಳಿಗೆ ಮೊದಲ ಕಂತು ಬಿಡುಗಡೆಯಾಗಬೇಕಿತ್ತು. ಆದರೆ, ಈವರೆಗೂ ಬಾಕಿ ‌ಹಣ ಬಂದಿಲ್ಲ. ವೇತನ ಕೊಡೋಕೆ ರಾಜ್ಯ ಸರ್ಕಾರಕ್ಕೆ ಹಣವಿಲ್ಲ. ಕೊರೊನಾ ನಿಯಂತ್ರಣಕ್ಕೂ ಇವರಿಗೆ ದುಡ್ಡಿಲ್ಲದಂತಾಗಿದೆ. ಇಂತಹ ವೇಳೆ ಕೇಂದ್ರ ರಾಜ್ಯಗಳ ಮೇಲೆ ಬರೆ ಎಳೆದರೆ ಹೇಗೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ರಾಜ್ಯದಲ್ಲೂ 25 ಜನ ಸಂಸದರನ್ನ ಗೆಲ್ಲಿಸಿದ್ರು. ನಿಮ್ಮ‌ ಮೇಲೆ ವಿಶ್ವಾಸವಿಟ್ಟು ಕಳಿಸಿಕೊಟ್ಟಿದ್ದಾರೆ. ನೀವು ಜನರಿಟ್ಟ ವಿಶ್ವಾಸಕ್ಕೆ ದ್ರೋಹ ಮಾಡ್ತಿದ್ದೀರಿ.. ರಾಜ್ಯಗಳನ್ನ ದಿವಾಳಿ ಹಂತಕ್ಕೆ ತಳ್ಳುತ್ತಿದ್ದೀರಿ ಎಂದು ದೂರಿದರು.

ಕೊರೊನಾದಿಂದ ನಾನು ‌ಗುಣಮುಖನಾಗಿದ್ದೇನೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಕ್ವಾರಂಟೈನ್ ಮುಗಿಸಿದ್ದೇನೆ. ನನಗೆ ಶುಭಕೋರಿದ ಎಲ್ಲರಿಗೂ ಧನ್ಯವಾದ. ಕೊರೊನಾ ಸೋಂಕು‌ ಬಹಳ ಬೇಗ ಹರಡುವ ರೋಗ. ಕೆಲವರಿಗೆ ರೋಗದ ಲಕ್ಷಣ ಕಾಣಿಸುತ್ತೆ. ಕೆಲವರಿಗೆ ರೋಗದ ಲಕ್ಷಣಗಳೇ ಕಾಣಿಸಿಕೊಳ್ಳಲ್ಲ. ನನಗೆ ಆ.2ರಂದು ಜ್ವರ ಕಾಣಿಸಿತ್ತು. ಆಸ್ಪತ್ರೆಯಲ್ಲಿ 10 ದಿನ ಚಿಕಿತ್ಸೆ ಪಡೆದಿದ್ದೆ. 15 ದಿನ ಮನೆಯಲ್ಲೇ ಕ್ವಾರಂಟೈನ್​ನಲ್ಲಿದ್ದೆ. ನಿನ್ನೆಗೆ ಎಲ್ಲಾ ಅವಧಿ ಮುಗಿದಿದೆ. ಇಂದು ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಆನ್‌ಲೈನ್ ಮೂಲಕ ಭಾಗಿಯಾಗಿದ್ದೆ ಎಂದಿದ್ದಾರೆ ವಿಪಕ್ಷ ನಾಯಕ ಸಿದ್ದರಾಮಯ್ಯ.

ಸಂಸದರ ನಿಯೋಗ ಕರೆದೊಯ್ಯಲಿ: ಸಂಸದರ ನಿಯೋಗ ಒಯ್ಯಬೇಕು. ಆಯಮ್ಮ ನಿರ್ಮಲಾ ಇಲ್ಲಿಂದಲೇ ರಾಜ್ಯಸಭೆಗೆ ಹೋದವರು. ನಮಗೆ ಯಾವ ನೆರವು ಕೊಡುತ್ತಿದ್ದಾರೆ. ಜಿಎಸ್‌ಟಿ ಪರಿಹಾರವೇ ಇಲ್ಲವೆಂದ್ರೆ, ಎಲ್ಲಿ ಹೋಗ್ಬೇಕು ಎಂದು ನಿರ್ಮಲಾ ಸೀತಾರಾಮನ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಕೆಟ್ಟ ಸರ್ಕಾರ ಕೇಂದ್ರದಲ್ಲಿದೆ. ಹೇಡಿ ಸರ್ಕಾರ ರಾಜ್ಯದಲ್ಲಿದೆ. ಈಗಾಗಲೇ ಅಭಿವೃದ್ಧಿ ಕೆಲಸ ನಿಂತು ಹೋಗಿವೆ. ಸಾಲ ತೆಗೆದುಕೊಳ್ಳೋದೇ ಅಭಿವೃದ್ಧಿಗಾಗಿ. ನಮ್ಮ ಅವಧಿಯಲ್ಲಿ ಜಿಡಿಪಿ ಶೇ.7ರಷ್ಟಿತ್ತು. ಸಾಲದ ಪ್ರಮಾಣ ಶೇ.25ರಷ್ಟಿತ್ತು. ಆದರೆ, ಈಗ ಎಲ್ಲವೂ ಹೊರೆಯಾಗುತ್ತಿದೆ.

ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತಿದೆ :ರಾಜ್ಯಗಳ ಹಿತದೃಷ್ಟಿಯಿಂದ ಕೇಂದ್ರದ ಮೇಲೆ ಒತ್ತಡ ತರಬೇಕು. ಸಿಎಂ, ಸಂಸದರು ಒತ್ತಡ ಹೇರಬೇಕು. ಕೇಂದ್ರ ಸರ್ಕಾರ ಬೇಕಾದರೆ ಸಾಲ ತೆಗೆದುಕೊಳ್ಳಲಿ. ಸಾಲ ಪಡೆದು ರಾಜ್ಯಗಳಿಗೆ ನೀಡಲಿ. ಒಪ್ಪಂದದಲ್ಲಿ ಹೇಳಿರೋದೇನು. ಈ ವರ್ಷವೂ ರಾಜ್ಯ ಪ್ರವಾಹಕ್ಕೆ ತುತ್ತಾಗಿದೆ. 1ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದೆ. ಸಾವಿರಾರು ಮನೆಗಳು ಕುಸಿದಿವೆ. ಸರ್ಕಾರವೇ 4 ಸಾವಿರ ಕೋಟಿ ನಷ್ಟ ಎಂದಿದೆ. ಕಳೆದ ಬಾರಿ 35 ಸಾವಿರ ಕೋಟಿ ಕೇಳಿದ್ದರು. ಆದರೆ, ಅಲ್ಲಿಂದ ಬಂದಿದ್ದು ಕೇವಲ 1860 ಕೋಟಿ ಮಾತ್ರ. ಮನೆಗಳ ತೆರವು ಮಾಡಿಲ್ಲ. ತಗಡಿನ ಶೆಡ್‌ಗಳಲ್ಲೇ ಜನ ವಾಸಿಸುತ್ತಿದ್ದಾರೆ. ಶಾಲೆಗಳು ಕೂಡ ದೇವಸ್ಥಾನ, ಶೆಡ್‌ನಲ್ಲಿ ನಡೆಯುತ್ತಿವೆ. ಮತ್ತೆ ಈ ಬಾರಿಯೂ ಪ್ರವಾಹ ಬಂದಿದೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವೈಮಾನಿಕ ‌ಸಮೀಕ್ಷೆ ಮಾಡಿದ್ದಾರೆ. ಸಮೀಕ್ಷೆ ಮಾಡಿದ್ದು ಸರಿ, ಕಂದಾಯ ಮಂತ್ರಿ ಮಾಡ್ತಿರೋದೇನು? ಜನರ ಕಷ್ಟ-ಸುಖ ವಿಚಾರಿಸಬೇಕಲ್ಲ. ಜನರಿಗೆ ಪರಿಹಾರ ಕೊಡಬೇಕಲ್ಲ. ಅಶೋಕ್ ಕೇಂದ್ರದಿಂದ ಬರುತ್ತೆ ಕೊಡ್ತೀವಿ ಅಂತಾರೆ. ಅಧಿಕಾರಿಗಳು ಒಂದು ಹೇಳ್ತಾರೆ, ಸಚಿವರು ಮತ್ತೊಂದು ಹೇಳ್ತಾರೆ. ಕೇಂದ್ರದ ಮುಂದೆ ಕುಳಿತು ಪರಿಹಾರ ತರಬೇಕು. ಹಿಂದೆ ನಾವು ಅದನ್ನೇ ಮಾಡ್ತಿದ್ವಿ. ಇವರು ಏನೇನೂ ಮಾಡ್ತಿಲ್ಲ. ಕೂಡಲೇ ಹಾನಿಯನ್ನ‌ ಸರ್ವೆ ಮಾಡಿಸಿ ರಿಪೋರ್ಟ್ ತರಿಸಿಕೊಳ್ಳಲಿ. ಪರಿಹಾರವನ್ನ ಮೊದಲು ಕೊಡಲಿ. ಅಸೆಂಬ್ಲಿಯಲ್ಲಿ ಹೇಳಿದ್ರೂ ಅವರು ಮಾತನ್ನ ಕೇಳಿಸಿಕೊಳ್ಳಲ್ಲ. ಈಗ ಮತ್ತೆ ಅಸೆಂಬ್ಲಿ ಕರೆದಿದ್ದಾರೆ. ಆಗಲೂ ಇದನ್ನೇ ಪ್ರಸ್ತಾಪ ಮಾಡಿ, ಒತ್ತಾಯ ಹೇರುತ್ತೇವೆ ಎಂದರು.

ವಿಶ್ವನಾಥ್ ಸತ್ಯ ಹೇಳಿದ್ದಾರೆ: ಟಿಪ್ಪು ಸುಲ್ತಾನ್‌ ಬಗ್ಗೆ ಹೆಚ್‌ ವಿಶ್ವನಾಥ್ ಹೊಗಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಟಿಪ್ಪು ಈ ಮಣ್ಣಿನ ಮಗ ಅಂತಾನೇ ಜಯಂತಿ ಮಾಡಿದ್ದು ನಾವು. ವಿಶ್ವನಾಥ್ ಯಾವ ಪಾರ್ಟಿಯಲ್ಲಿದ್ದಾರೆ. ವಿಶ್ವನಾಥ್ ಸತ್ಯವನ್ನ ಹೇಳಿದ್ದಾನೆ. ಬಿಜೆಪಿಯವರಿಗೆ ಮುಜುಗರವಾಗಿದೆ. ಸತ್ಯ ಹೇಳೋದನ್ನ ಇವರಿಗೆ ತಡೆಯೋಕೆ ಆಗುತ್ತಾ? ನಾನು ವಿಶ್ವನಾಥ್‌ಗೆ ಹೇಳೋದಿಷ್ಟೇ, ಸತ್ಯ ಹೇಳೋದನ್ನ ನಿಲ್ಲಿಸಬೇಡ. ಅವರ ಹೇಳಿಕೆಗೆ ಬದ್ಧರಾಗಿ ಇರಲಿ ಎಂದಿದ್ದಾರೆ.

ಸರ್ಕಾರ ಉಳಿಸಲ್ಲ :ನಾವು ಸರ್ಕಾರವನ್ನು ಉರುಳಿಸುವ ಪ್ರಯತ್ನ ಮಾಡಲ್ಲ. ಅವರೇ ಸರ್ಕಾರ ಉರುಳಿಸಿಕೊಂಡರೆ ನಾವು ಏನು‌ ಮಾಡೋಕೆ ಆಗಲ್ಲ. ವಿಜಯೇಂದ್ರ ಮೇಲೆ 5 ಸಾವಿರ ಕೋಟಿ ಅವ್ಯವಹಾರ ಆರೋಪ ಇದೆ. ಬಿಜೆಪಿ ಎಂಎಲ್​ಎ ಬರೆದಿರುವ ಪತ್ರ ತೋರಿಸುತ್ತಿದ್ರು. ನಾನು ಆ ಲೆಟರ್‌ ನೋಡಿಲ್ಲ. ಸತ್ಯ ಹೇಳೋಕೆ ಮುಜುಗರ ಬೇಕಿಲ್ಲ. ದಾಖಲೆ ಇದ್ದರೆ ವಕ್ತಾರರಾದರೇನಂತೆ ಮಾತನಾಡೋಕೆ. ನಮ್ಮ ಗಮನಕ್ಕೆ ಅದನ್ನ ತರಬೇಕೆಂದಿಲ್ಲ. ನಾನು ಅವರ ಜೊತೆ ಇನ್ನೂ ಮಾತನಾಡಿಲ್ಲ ಎಂದು ಕೈ ವಕ್ತಾರ ಲಕ್ಷ್ಮಣ್ ಆರೋಪದ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದರು.

Last Updated : Aug 29, 2020, 3:58 PM IST

ABOUT THE AUTHOR

...view details