ಬೆಂಗಳೂರು:ಕೋವಿಡ್ ರೂಪಾಂತರಿ ಒಮಿಕ್ರಾನ್ ಭೀತಿಯ ನಡುವೆ ಸರ್ಕಾರ ಬೆಳಗಾವಿಯಲ್ಲಿ ಚಳಗಾಲದ ಅಧಿವೇಶನ ನಡೆಸಲು ಮುಂದಾಗಿದ್ದು, ಕೊರೊನಾ ಮುಂಜಾಗ್ರತಾ ಕ್ರಮ ಹಾಗೂ ವೆಚ್ಚ ಕಡಿವಾಣದೊಂದಿಗೆ ಅಧಿವೇಶನ ನಡೆಸಲು ನಿರ್ಧರಿಸಿದೆ.
ಎರಡು ವರ್ಷಗಳ ಬಳಿಕ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಸರ್ಕಾರ ಮುಂದಾಗಿದ್ದು, ಒಮಿಕ್ರಾನ್ನಿಂದ ಕೋವಿಡ್ ಪ್ರಕರಣ ಮತ್ತಷ್ಟು ಹೆಚ್ಚುವ ಆತಂಕ ವ್ಯಕ್ತವಾಗಿದೆ. ಬೆಳಗಾವಿ ಅಧಿವೇಶನಕ್ಕೆ ಕೆಲ ಶಾಸಕರು ಹಾಗೂ ಅಧಿಕಾರಿ ವರ್ಗಗಳಿಂದ ಅಪಸ್ವರ ಕೇಳಿ ಬಂದಿದ್ದು, ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದು ಬೇಡ. ಅದರ ಬದಲಿಗೆ ಬೆಂಗಳೂರಿನಲ್ಲೇ ನಡೆಸುವುದು ಸೂಕ್ತ ಎಂದು ಶಾಸಕರು ಹಾಗೂ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಸರ್ಕಾರ ಬೆಳಗಾವಿಯಲ್ಲೇ ಅಧಿವೇಶನ ನಡೆಸುವ ತನ್ನ ನಿಲುವಿಗೆ ಬದ್ಧವಾಗಿದೆ.
ಅಧಿವೇಶನದಿಂದ ಸರ್ಕಾರದ ಬೊಕ್ಕಸದ ಮೇಲೆ ಬೀಳುವ ಹೊರೆ:
10 ದಿನಗಳ ಕಾಲ ನಡೆಯುವ ಬೆಳಗಾವಿ ಅಧಿವೇಶನದಿಂದ ಸರ್ಕಾರದ ಬೊಕ್ಕಸದ ಮೇಲೆ ಭಾರಿ ಹೊರೆ ಬೀಳಲಿದೆ. ಅದರಲ್ಲೂ ಶಾಸಕರು, ಅಧಿಕಾರಿಗಳು, ಮಾಧ್ಯಮದವರಿಗೆ ವಸತಿ ಹಾಗೂ ಭೋಜನ ವ್ಯವಸ್ಥೆಗೆ ಹೆಚ್ಚಿನ ವೆಚ್ಚ ತಗುಲುತ್ತಿದೆ. ಆರ್ಟಿಐ ಮಾಹಿತಿ ಪ್ರಕಾರ ಬೆಳಗಾವಿ ಅಧಿವೇಶನಕ್ಕಾಗಿ ಸರ್ಕಾರ ಕೋಟಿ ಕೋಟಿ ವೆಚ್ಚ ಮಾಡುತ್ತದೆ ಎನ್ನಲಾಗುತ್ತಿದೆ.
2018 ರಲ್ಲಿ ನಡೆದ ಬೆಳಗಾವಿ ಅಧಿವೇಶನಕ್ಕೆ ಸರ್ಕಾರ ಬರೋಬ್ಬರಿ 13.85 ಕೋಟಿ ರೂ. ಖರ್ಚು ಮಾಡಿದೆ. ಡಿಸೆಂಬರ್ 19ರಿಂದ 22ರವರೆಗೆ ನಡೆದ 40 ಗಂಟೆ 25 ನಿಮಿಷಗಳ ಕಲಾಪದಿಂದ ಬೊಕ್ಕಸದ ಮೇಲೆ ಅಪಾರ ಪ್ರಮಾಣದ ಹೊರೆ ಬಿದ್ದಿದೆ. ಬೆಂಗಳೂರಿನಲ್ಲೇ ಅಧಿವೇಶನ ನಡೆದರೆ ದಿನಕ್ಕೆ ಸುಮಾರು 70 ಲಕ್ಷ ರೂ. ವೆಚ್ಚ ತಗುಲುತ್ತದೆ. ಆದರೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದರೆ ದಿನಕ್ಕೆ ಸುಮಾರು 1.50 ಕೋಟಿ ರೂ.ವೆಚ್ಚ ತಗುಲುತ್ತದೆ. ಶಾಸಕರು ಹಾಗೂ ಅಧಿಕಾರಿಗಳಿಗೆ ಬೆಳಗಾವಿ ಸುತ್ತಮುತ್ತ ನೀಡುವ ವಸತಿ ವ್ಯವಸ್ಥೆಗೆ ಕಳೆದ ಬಾರಿ ನಡೆದ ಅಧಿವೇಶನದ ವೇಳೆ 4.42 ಕೋಟಿ ರೂ. ವೆಚ್ಚವಾಗಿದೆ. ಶಾಸಕರು ಹಾಗೂ ಅಧಿಕಾರಿಗಳಿಗೆ ಬೆಳಗಾವಿ ಅಧಿವೇಶನ ವೇಳೆ ಪ್ರತಿದಿನ 2,500 ರೂ. ಪ್ರಯಾಣ ಭತ್ಯೆ ನೀಡಲಾಗಿತ್ತು. ಅದಕ್ಕಾಗಿ 2.61 ಕೋಟಿ ರೂ.ವೆಚ್ಚ ತಗುಲಿದೆ ಎಂದು ತಿಳಿದುಬಂದಿದೆ.
2017ರಲ್ಲಿ ಬೆಳಗಾವಿ ಅಧಿವೇಶನಕ್ಕಾಗಿ ಬರೋಬ್ಬರಿ 21.57 ಕೋಟಿ ರೂ. ಖರ್ಚು ಮಾಡಲಾಗಿತ್ತು. ಇಷ್ಟು ದೊಡ್ಡ ಪ್ರಮಾಣದ ವೆಚ್ಚ ಮಾಡಿದ್ದರಿಂದ ಸಾರ್ವಜನಿಕ ವಲಯದಿಂದ ಭಾರಿ ಟೀಕೆ ವ್ಯಕ್ತವಾಗಿತ್ತು. 2017ರ ಡಿಸೆಂಬರ್ 13ರಿಂದ 24ರವರೆಗೆ ಅಧಿವೇಶನ ನಡೆದಿತ್ತು. ಆರ್ಟಿಐ ಮಾಹಿತಿಯಂತೆ ಶಾಸಕರು ಹಾಗೂ ಅಧಿಕಾರಿಗಳ ಐಶಾರಾಮಿ ಲಾಡ್ಜಿಂಗ್ಗೆ 4.79 ಕೋಟಿ ರೂ. ತಗುಲಿತ್ತು. ಸುವರ್ಣ ವಿಧಾನಸೌಧವನ್ನು ಶುಚಿಗೊಳಿಸಲು 29.63 ಲಕ್ಷ ರೂ. ಖರ್ಚು ಮಾಡಲಾಗಿತ್ತು. ಸಿಎಂ ಹಾಗೂ ನಾಲ್ವರು ಸಚಿವರ ವಾಸ್ತವ್ಯಕ್ಕೆ 24 ಲಕ್ಷ ಖರ್ಚು ಮಾಡಲಾಗಿತ್ತು.