ಕರ್ನಾಟಕ

karnataka

ETV Bharat / state

ಬೆಂಗಳೂರು ನಗರದ ಶೌಚಾಲಯಗಳ ಕುರಿತು ವರದಿ ಸಲ್ಲಿಸದ ಸರ್ಕಾರ : ಐದು ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್​ - ಜನಸಂಖ್ಯೆಗೆ ಅನುಗುಣವಾಗಿ ಶೌಚಾಲಯ

ಬೆಂಗಳೂರು ನಗರದ ಶೌಚಾಲಯಗಳ ಸ್ಥಿತಿಗತಿಗೆ ಸಂಬಂಧಿಸಿದಂತೆ ಲೆಟ್ಜ್​ಕಿಟ್​ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು​ ಸರ್ಕಾರಕ್ಕೆ ದಂಡ ವಿಧಿಸಿದೆ.

high court
ಹೈಕೋರ್ಟ್​

By ETV Bharat Karnataka Team

Published : Oct 4, 2023, 5:08 PM IST

Updated : Oct 4, 2023, 7:58 PM IST

ಬೆಂಗಳೂರು : ರಾಜಧಾನಿ ಬೆಂಗಳೂರು ನಗರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳನ್ನು ನಿರ್ಮಿಸಿ ವ್ಯವಸ್ಥೆ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ನಿರ್ದೇಶನದಂತೆ ವರದಿ ಸಲ್ಲಿಸದ ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ಬುಧವಾರ ಐದು ಲಕ್ಷ ರೂಪಾಯಿ ದಂಡ ವಿಧಿಸಿದೆ.

ನಗರದ ಶೌಚಾಲಯಗಳ ಸ್ಥಿತಿಗತಿಗಳಿಗೆ ಸಂಬಂಧಿಸಿದಂತೆ ಲೆಟ್ಜ್ಕಿಟ್ ಎಂಬ ಸರ್ಕಾರೇತರ ಸಂಘ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ಧೀಕ್ಷಿತ್ ಅವರಿದ್ದ ನ್ಯಾಯ ಪೀಠ ದಂಡ ಈ ಆದೇಶ ಹೊರಡಿಸಿದೆ.

ಈ ವೇಳೆ ಅರ್ಜಿದಾರರ ಪರ ವಕೀಲ ಪುತ್ತಿಗೆ ರಮೇಶ್ ವಾದ ಮಂಡಿಸಿ, ನಗರದಲ್ಲಿನ ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿ ಹಾಗೂ ನಿರ್ವಹಣೆ ಕುರಿತ ಪ್ರಕರಣ ಮೂರು ವರ್ಷಗಳಿಂದ ನ್ಯಾಯಾಲಯದಲ್ಲಿ ನಡೀತಿದೆ. ರಾಜ್ಯ ಸರ್ಕಾರ ಇದರ ಬಗ್ಗೆ ಗಾಢ ಮೌನವಹಿಸಿದ್ದು, ಒಂದೇ ಒಂದು ಹೇಳಿಕೆ, ವರದಿ, ಪ್ರಮಾಣಪತ್ರ, ಆಕ್ಷೇಪಣೆ ಯಾವುದೂ ಸಲ್ಲಿಸಿಲ್ಲವೆಂದು ಅಚ್ಚರಿ ವ್ಯಕ್ತಪಡಿಸಿ, ಮೂರು ವಾರಗಳಲ್ಲಿ ವಿವರವಾದ ವರದಿ ಸಲ್ಲಿಸಲು 2023 ರ ಆಗಸ್ಟ್​ 8ರಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಆದರೆ, ಈ ವರೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಅದಕ್ಕೆ ಸರ್ಕಾರದ ಪರ ವಕೀಲರನ್ನು ನ್ಯಾಯಪೀಠ ಪ್ರಶ್ನಿಸಿತು. ಈ ಬಗ್ಗೆ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳಿಂದ ತಮಗೆ ಯಾವುದೇ ನಿರ್ದೇಶನ, ಮಾಹಿತಿ ಬಂದಿಲ್ಲ ಎಂದು ಸರ್ಕಾರದ ಪರ ವಕೀಲರು ತಿಳಿಸಿದರು. ಆಗ ತಮ್ಮ ಬಳಿ ಮಾಹಿತಿ ಇಲ್ಲ ಎಂದು ಸರ್ಕಾರದ ಪರ ವಕೀಲರು ಅಸಹಾಯಕತೆ ವ್ಯಕ್ತಪಡಿಸಿದರು. ನ್ಯಾಯಾಲಯದ ನಿರ್ದೇಶನದ ಹೊರತಾಗಿಯೂ ಸರ್ಕಾರದ ಈ ಧೋರಣೆ ಸಹ್ಯವಲ್ಲ ಎಂದು ಕಟುವಾಗಿ ಹೇಳಿದ ನ್ಯಾಯಪೀಠ, ತನ್ನ ತಪ್ಪಿಗಾಗಿ ಸರ್ಕಾರ 5 ಲಕ್ಷ ರೂ.ಗಳನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗಳ ಖಾತೆಗೆ ಎರಡು ವಾರಗಳಲ್ಲಿ ಜಮೆ ಮಾಡಬೇಕು. ಅಲ್ಲದೇ ಮುಂದಿನ ವಿಚಾರಣೆಗೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕು ಎಂದು ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ನವೆಂಬರ್ 2ಕ್ಕೆ ಮುಂದೂಡಿತು.

ಸರ್ಕಾರಕ್ಕೆ ಆದೇಶದ ಮೂಲಕ ಹೇಳಬೇಕು: ದಂಡದ ಮೊತ್ತ ಕಡಿಮೆ ಮಾಡುವಂತೆ ಸರ್ಕಾರದ ಪರ ವಕೀಲರು ಮನವಿ ಮಾಡಿಕೊಂಡರು. ಅದಕ್ಕೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು, ಸರ್ಕಾರದ ಈ ನಡೆಗೆ ನನ್ನ ಪ್ರಕಾರ 25 ಲಕ್ಷ ರೂ. ದಂಡ ವಿಧಿಸಬೇಕು. ಆದರೆ, ಮುಖ್ಯ ನ್ಯಾಯಮೂರ್ತಿಗಳು ಕರುಣೆ ತೋರಿ 5 ಲಕ್ಷ ರೂ. ದಂಡ ವಿಧಿಸಿದ್ದಾರೆ. ನಮಗೆ ಹೇಳಲು ಬೇಸರವಾಗುತ್ತದೆ. ಆದರೆ, ಸರ್ಕಾರ ಮತ್ತು ಅಧಿಕಾರಿಗಳಿಗೆ ಇಂತಹದ್ದೇ ಭಾಷೆ ಅರ್ಥವಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ಬಿಬಿಎಂಪಿ ಸಲ್ಲಿಸಿದ ವರದಿಗೆ ಅಸಮಾಧಾನ: ಈ ಹಿಂದೆ ಅರ್ಜಿ ವಿಚಾರಣೆ ವೇಳೆ, ನಗರದಲ್ಲಿನ ಶೌಚಾಲಯಗಳ ಸಂಬಂಧ ಈ ಹಿಂದೆ ನೀಡಿದ್ದ ಸೂಚನೆಯಂತೆ ಸಲ್ಲಿಕೆ ಮಾಡಿದ್ದ ಅನುಪಾಲನಾ ವರದಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಜತೆಗೆ ಬಿಬಿಎಂಪಿ ಸಲ್ಲಿಸಿರುವ ವರದಿಯಲ್ಲಿ ನಗರದಲ್ಲಿ ಅಗತ್ಯವಿರುವ ಶೌಚಾಲಯಗಳಿಗೆ ಸಂಬಂಧಿಸಿದಂತೆ ಅತ್ಯಂತ ಕಡಿಮೆಯಾಗಿದೆ ಎಂದು ಪೀಠ ತಿಳಿಸಿತು.

ಅಲ್ಲದೇ ಅರ್ಜಿ ಕಳೆದ ಮೂರು ವರ್ಷಗಳಿಂದ ವಿಚಾರಣಾ ಹಂತದಲ್ಲಿದ್ದರೂ ರಾಜ್ಯ ಸರ್ಕಾರ ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಮುಂದಿನ ವಿಚಾರಣೆ ವೇಳೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಸೂಚನೆ ನೀಡಿದೆ.
ನಗರದಲ್ಲಿನ ಶೌಚಾಲಯಗಳು ಬೆಂಗಳೂರಿನಲ್ಲಿ ನೆಲೆಸಿರುವ ಜನಸಂಖ್ಯೆಗೆ ಅನುಗುಣವಾಗಿಲ್ಲ ವಿಷಯ ಅತ್ಯಂತ ಗಂಭೀರದ್ದಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಸರ್ಕಾರ ಈ ವಿಚಾರವಾಗಿ ಗಂಭೀರವಾಗಿ ಪರಿಗಣಿಸದೆ ಕಣ್ಣು ಮುಚ್ಚಿ ಕುಳಿತಿದೆ ಎಂದು ಪೀಠ ಈ ಹಿಂದೆಯೂ ಅಸಮಾಧಾನ ವ್ಯಕ್ತಪಡಿಸಿತ್ತು.

ಇದನ್ನೂಓದಿ:ಚಿಲುಮೆ ಹಾಗೂ ಬಿಬಿಎಂಪಿ ಆಯುಕ್ತರ ವಿರುದ್ಧ ತನಿಖೆ ವಿಚಾರ: ಸಚಿವ ಡಾ ಜಿ‌ ಪರಮೇಶ್ವರ್ ಹೇಳಿದ್ದೇನು?

Last Updated : Oct 4, 2023, 7:58 PM IST

ABOUT THE AUTHOR

...view details