ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ಗಳ ಪುನರ್ ವಿಂಗಡಣಾ ಆಯೋಗವನ್ನು ಪುನರ್ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧ್ಯಕ್ಷತೆಯಲ್ಲಿ ನಾಲ್ಕು ಸದಸ್ಯರ ಆಯೋಗವನ್ನು ರಚಿಸಲಾಗಿದೆ. ಬಿಡಿಎ ಆಯುಕ್ತ, ಬೆಂಗಳೂರು ನಗರ ಡಿಸಿ, ಬಿಬಿಎಂಪಿ ವಿಶೇಷ ಆಯುಕ್ತರು ಸದಸ್ಯರಾಗಿ ನೇಮಕಗೊಂಡಿದ್ದಾರೆ.
ರಾಜ್ಯ ಸರ್ಕಾರ 2021ರ ಜ.29ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರದೇಶಕ್ಕೆ ಸಂಬಂಧಿಸಿದಂತೆ ವಾರ್ಡ್ಗಳ ಪುನರ್ ವಿಂಗಡಣೆಗಾಗಿ, ಬಿಬಿಎಂಪಿ ವಾರ್ಡ್ಗಳ ಪುನರ್ ವಿಂಗಡನಾ ಆಯೋಗವನ್ನು ರಚಿಸಿತ್ತು. ಅದರಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪುನರ್ ವಿಂಗಡಣಾ ಆಯೋಗ 2022ರ ಜೂನ್ 09 ರಂದು ನೀಡಿದ ವರದಿಯನ್ನಾಧರಿಸಿ 2011ರ ಜನಗಣತಿಯ ಆಧಾರದ ಮೇರೆಗೆ 2022ರ ಜುಲೈ 14ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಾರ್ಡು ವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಿತ್ತು.
ಈ ವಾರ್ಡ್ ವಾರು ಕ್ಷೇತ್ರ ಪುನರ್ ವಿಂಗಡಣಾ ಅಧಿಸೂಚನೆಯನ್ನು ಪ್ರಶ್ನಿಸಿ, ಅದರ ವಿರುದ್ಧ ದಾಖಲಾಗಿದ್ದ ರಿಟ್ ಅರ್ಜಿಗಳನ್ನು ಹೈಕೋರ್ಟ್ 2022 ರ ಸೆಪ್ಟಂಬರ್ 16ರ ಆದೇಶದಲ್ಲಿ ವಜಾಗೊಳಿಸಿತ್ತು. ಅದರ ವಿರುದ್ಧ ಬಿ.ಎನ್. ಮಂಜುನಾಥ ರೆಡ್ಡಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮುಂದೆ ರಿಟ್ ಅಪೀಲು ಹೋಗಿದ್ದರು. ಈ ರಿಟ್ ಅಪೀಲು ಮೇಲೆ ಹೈಕೋರ್ಟ್ 2023ರ ಜೂನ್ 19ರಂದು ಮರುವಿಂಗಡನೆ ಮಾಡುವಂತೆ 12 ವಾರಗಳ ಕಾಲಾವಧಿ ನೀಡಿತ್ತು.
ಹೈಕೋರ್ಟ್ ಆದೇಶದಂತೆ ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರದೇಶಕ್ಕೆ ಸಂಬಂಧಿಸಿದಂತೆ ವಾರ್ಡುಗಳ ಕ್ಷೇತ್ರ ಪುನರ್ ವಿಂಗಡಣೆಯನ್ನು ಈಗ ಮತ್ತೊಮ್ಮೆ ಹೊಸದಾಗಿ ಮಾಡಬೇಕಾಗಿದೆ. ಅದರಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿನಿಯಮ, 2020ರ ಪ್ರಕರಣ 7ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರದೇಶಕ್ಕೆ ಸಂಬಂಧಿಸಿದಂತೆ ವಾರ್ಡ್ಗಳ ಪುನರ್ ವಿಂಗಡಣೆ ಮಾಡಲು ತಕ್ಷಣದಿಂದ ಜಾರಿಯಲ್ಲಿರುವಂತೆ ಪುನರ್ ವಿಂಗಡನೆ ಆಯೋಗ ರಚಿಸಿದೆ. ಆಯೋಗ ಹೈಕೋರ್ಟ್ ನಿಗದಿಪಡಿಸಿರುವ ಅವಧಿಯೊಳಗಾಗಿ ವಿಂಗಡಣೆ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಆದೇಶಿಸಿದೆ.
ಇದನ್ನೂ ಓದಿ:ಬಿಬಿಎಂಪಿ ವಾರ್ಡ್ ಪುನರ್‌ವಿಂಗಡಣೆಗೆ 12 ವಾರಗಳ ಕಾಲಾವಕಾಶ ನೀಡಿದ ಹೈಕೋರ್ಟ್
ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆಗೆ ಕಾಂಗ್ರೆಸ್ ಆಕ್ರೋಶ:ಹಿಂದಿನ ಬಿಜೆಪಿ ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಮಾಡಿ ಆದೇಶ ಹೊರಡಿಸಿತ್ತು. ಇದಕ್ಕೆ ಕಾಂಗ್ರೆಸ ಸರ್ಕಾರ ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿತ್ತು. ಕಾಂಗ್ರೆಸ್ ಗೆಲ್ಲುವ ವಾರ್ಡ್ಗಳು ಮರು ವಿಂಗಡಣೆಯಲ್ಲಿ ಮಾಯವಾಗಿವೆ ಎಂದು ಕೈ ಪಕ್ಷ ಗಂಭೀರ ಆರೋಪ ಮಾಡಿತ್ತು. ಇದಕ್ಕೂ ಮೊದಲು ಕಾಂಗ್ರೆಸ್ ಸರ್ಕಾರವಿದ್ದಾಗ, ಬಿಬಿಎಂಪಿ ಮೀಸಲಾತಿ ಬದಲಾಯಿಸಿತ್ತು. ಆ ವೇಳೆ ಬಿಜೆಪಿ ಪ್ರತಿಭಟಿಸಿತ್ತು. ನಮ್ಮ ಪಕ್ಷದ ಸದಸ್ಯರು ಗೆಲ್ಲುವ ವಾರ್ಡ್ಗಳ ಮೀಸಲಾತಿ ಬದಲಾಯಿಸಲಾಗಿದೆ ಎಂದು ಬಿಜೆಪಿ ಆರೋಪ ಮಾಡಿತ್ತು.
ಇದನ್ನೂ ಓದಿ:ಬಿಬಿಎಂಪಿ ವಾರ್ಡ್ ಮರುವಿಂಗಡಣೆಯಿಂದ ಭುಗಿಲೆದ್ದ ಅಸಮಾಧಾನ: 20 ಹೊಸ ವಾರ್ಡ್ಗಳು ಅಸ್ತಿತ್ವಕ್ಕೆ