ಕರ್ನಾಟಕ

karnataka

ETV Bharat / state

ಕಾವೇರಿ ನೀರು ಹಂಚಿಕೆ ವಿವಾದ: ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಸಂಪುಟ ಸಭೆ ತೀರ್ಮಾನ

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ತೀರ್ಮಾನಿಸಿದೆ.

ಕಾವೇರಿ ನೀರು ಹಂಚಿಕೆ
ಕಾವೇರಿ ನೀರು ಹಂಚಿಕೆ

By

Published : Aug 19, 2023, 10:05 PM IST

ಬೆಂಗಳೂರು: ತಮಿಳುನಾಡಿಗೆ ರಾಜ್ಯದಿಂದ ನಿತ್ಯ 10,000 ಕ್ಯೂಸೆಕ್ಸ್‌ನಂತೆ 15 ದಿನಗಳ ಕಾಲ ನೀರು ಹರಿಸುವಂತೆ ಕಳೆದ ವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಸೋಮವಾರ ಮೇಲ್ಮನವಿ ಸಲ್ಲಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡು ತೆಗೆದಿರುವ ತಗಾದೆ ವಿರುದ್ಧ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಸೋಮವಾರ ಮೊರೆ ಹೋಗಲಿದೆ. ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಸರ್ಕಾರ ಸಲ್ಲಿಸಿರುವ ಮನವಿ ಸಾಧಕ-ಬಾಧಕ, ರಾಜ್ಯದ ಮನವಿ ಸ್ವರೂಪದ ಕುರಿತು ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.

ಅಡ್ವೋಕೇಟ್ ಜನರಲ್ ಅವರನ್ನು ಸಚಿವ ಸಂಪುಟ ಸಭೆಗೆ ಕರೆಯಿಸಿಕೊಂಡು ಮುಂದಿನ ಕಾನೂನು ಹೋರಾಟ, ರಾಜ್ಯ ಸರ್ಕಾರದ ನಡೆ ಹೇಗಿರಬೇಕೆಂದು ಸಮಾಲೋಚಿಸಿತು. ನಂತರ ತಮಿಳುನಾಡು ಕೋರಿಕೆ ವಿರೋಧಿಸಿ ಸುಪ್ರೀಂ ಕೋರ್ಟ್‌ಗೆ ವಿಸ್ತೃತ ಮನವಿ ಸಲ್ಲಿಸಲು ಸಭೆ ತೀರ್ಮಾನಿಸಿದೆ. ಮಳೆಯ ಅಭಾವದಿಂದ ರಾಜ್ಯಕ್ಕೆ ಕುಡಿಯಲು, ಅಗತ್ಯಕ್ಕೂ ನೀರಿಲ್ಲದಂತಾಗಿದೆ. ಹೀಗಾಗಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಪ್ರತಿನಿಧಿಗಳು ವಾದಿಸಿದ್ದರೂ ಕಾವೇರಿ ನಿರ್ವಹಣಾ ಪ್ರಾಧಿಕಾರವೂ ನಿತ್ಯ 10 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿದೆ.

ಇದರಂತೆ ರಾಜ್ಯ ಸರ್ಕಾರ ಸ್ವಲ್ಪ ನೀರನ್ನೂ ಬಿಡುಗಡೆ ಮಾಡಿದೆ. ಈ ಬಗ್ಗೆ ರೈತರು ಹಾಗೂ ಪ್ರತಿಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರನ್ನು ಕರೆಸಿಕೊಂಡು ವಿಸ್ತೃತ ಚರ್ಚೆ ನಡೆಸಿತು ಎಂದು ಕಾನೂನು ಸಚಿವ ಹೆಚ್‌.ಕೆ.ಪಾಟೀಲ್ ತಿಳಿಸಿದರು.

ಮಳೆಯ ಕೊರತೆ ಹಿನ್ನೆಲೆ ರಾಜ್ಯದ ರೈತರಿಗೆ ನೀರು ಪೂರೈಕೆಯೇ ಕಷ್ಟಕರವಾಗಿದ್ದು, ತಮಿಳುನಾಡಿಗೆ ಪೂರೈಸಲಾಗುತ್ತಿಲ್ಲ. ಹಂಚಿಕೆ ಮತ್ತು ಸಂಕಷ್ಟವನ್ನು ಸಮನಾಗಿ ಹಂಚಿಕೊಳ್ಳಲು ರಾಜ್ಯ ಬಯಸುತ್ತದೆ. ನಿರೀಕ್ಷೆಯಂತೆ ನೀರಿನ ಲಭ್ಯತೆಯಿದ್ದಿದ್ದರೆ ನೀರು ಹಂಚಿಕೆ ಸೂತ್ರ ಪಾಲನೆಗೆ ಕಷ್ಟವೇ ಆಗುತ್ತಿದ್ದಿಲ್ಲ ಎಂದು ಸುಪ್ರೀಂಗೆ ರಾಜ್ಯ ಸರ್ಕಾರ ನಿವೇದಿಸಿಕೊಳ್ಳಲಿದೆ. ಅಲ್ಲದೆ, ಜೂನ್‌ನಿಂದ ಈವರೆಗೆ ಸುರಿದ ಮಳೆ, ಜಲಾಶಯದ ಒಳ-ಹೊರಹರಿವು, ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ದಾಖಲಾದ ಪ್ರಮಾಣ, ಮೆಟ್ಟೂರು ಜಲಾಶಯದ ಸಂಗ್ರಹ ಅಂಕಿ-ಅಂಶಗಳು ಈ ಮನವಿಯಲ್ಲಿ ಅಡಕವಾಗಿರಲಿವೆ ಎಂದು ಮೂಲಗಳು ತಿಳಿಸಿವೆ.

ಪ್ರತಿಭಟನೆ ಬೇಡ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಸರ್ವಪಕ್ಷಗಳ ಸಭೆ ಕರೆಯುವ ಇಂಗಿತ ವ್ಯಕ್ತಪಡಿಸಿದ್ದು, ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಗಳು ಪ್ರತಿಭಟನೆ ಮಾಡುವುದು ಬೇಡವೆಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ವಿನಂತಿಸಿದರು. ತಮಿಳುನಾಡಿಗೆ ಕಾವೇರಿ ಬಿಟ್ಟಿರುವುದನ್ನು ಖಂಡಿಸಿ ಪ್ರತಿಪಕ್ಷ ಬಿಜೆಪಿ ಸೋಮವಾರ ಮಂಡ್ಯ ಜಿಲ್ಲೆ ಬಂದ್‌ಗೆ ಕರೆ ಕೊಟ್ಟಿದ್ದರತ್ತ ಗಮನಸೆಳೆದಾಗ ಉತ್ತರಿಸಿದ ಅವರು, ಸರ್ವಪಕ್ಷ ಸಭೆಯನ್ನು ಸಿಎಂ ಆದಷ್ಟು ಬೇಗನೆ ಕರೆಯಲಿದ್ದು, ಬಂದ್ ಚಳವಳಿ ಕೈಬಿಡಬೇಕೆಂಬ ವಿನಂತಿ ಪುನರುಚ್ಚರಿಸಿದರು.

ಇದನ್ನೂ ಓದಿ:ಮಳೆಗಾಲದಲ್ಲಿ ರೈತರ ನಿದ್ದೆ ಕದ್ದ ಬೆಣ್ಣೆಹಳ್ಳ: ಶಾಶ್ವತ ಪರಿಹಾರಕ್ಕೆ ಮತ್ತೊಂದು ಹೋರಾಟಕ್ಕೆ ಸಿದ್ಧವಾದ ರೈತ ಸಮುದಾಯ

ABOUT THE AUTHOR

...view details