ಬೆಂಗಳೂರು:ಪದವಿ ಕಾಲೇಜು, ಡಿಪ್ಲೋಮಾ, ವಿಶ್ವವಿದ್ಯಾಲಯಗಳಿಗೆ ನಾಳೆಯಿಂದ ಫೆ.16ರವರೆಗೆ ರಜೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ. ಹಿಜಾಬ್ ಗಲಾಟೆ ಹಿನ್ನೆಲೆಯಲ್ಲಿ ಈಗಾಗಲೇ ಮೂರು ದಿನಗಳ ಕಾಲ ರಜೆ ಘೋಷಿಸಲಾಗಿತ್ತು. ಅದರಂತೆ ಫೆ.11ರವರೆಗೆ ರಜೆ ನೀಡಲಾಗಿತ್ತು. ಇದೀಗ ಮತ್ತೆ ಬುಧವಾರದವರೆಗೆ ರಜೆ ಮುಂದುವರಿಸಲಾಗಿದೆ.
ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮುಂಜಾಗ್ರತ ಕ್ರಮವಾಗಿ ಫೆ.12, 13ರ ಭಾನುವಾರ ರಜಾ ದಿನ ಸಹಿತವಾಗಿ 14, 15 ಮತ್ತು 16ರಂದು ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೊಳಪಡುವ ಎಲ್ಲ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಗೊಳಪಡುವ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪದವಿ ಕಾಲೇಜುಗಳು, ಡಿಪ್ಲೋಮಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಲಾಗಿದೆ.