ಬೆಂಗಳೂರು: 'ಕಾಂತಾರ' ಚಿತ್ರದ ಮೂಲಕ ಭೂತಾರಾಧನೆ ವಿಶ್ವದ ಮೂಲೆ ಮೂಲೆಯಲ್ಲಿ ಸುದ್ದಿಯಾದ ಬೆನ್ನಲ್ಲೇ ಭೂತಾರಾಧನೆ ಮಾಡುವ ದೈವನರ್ತಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ದೈವ ನರ್ತನ ಮಾಡುವ 60 ವರ್ಷ ತುಂಬಿದ ದೈವ ನರ್ತಕರಿಗೆ ಪ್ರತಿ ತಿಂಗಳು 2 ಸಾವಿರ ರೂ.ಗಳ ಮಾಸಾಶನ ನೀಡುವ ತೀರ್ಮಾನ ಪ್ರಕಟಿಸಿದೆ.
ನಗರದ ವೈಯಾಲಿಕಾವಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್, ದೈವ ನರ್ತನೆ, ಭೂತಾರಾಧನೆ ಮಾಡುವವರ ದೊಡ್ಡ ಸಂಖ್ಯೆಯೇ ಇದೆ. ಪ್ರತಿ ವರ್ಷ ದೈವಾರಾಧನೆ ಮಾಡಿಕೊಳ್ಳುತ್ತಲೇ ತಮ್ಮ ಕಸುಬು ನಡೆಸುತ್ತಿರುವ ಜನ ಇದ್ದಾರೆ. ಹಾಗಾಗಿ ದೈವ ನರ್ತನ ಮಾಡುತ್ತಿರುವ 60 ವರ್ಷ ಮೀರಿದವರಿಗೆ ಮಾಸಾಶನ ನೀಡುವ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ. ಸಂಬಂಧಪಟ್ಟ ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದರೆ ಪ್ರತಿ ತಿಂಗಳು 2 ಸಾವಿರ ರೂ. ಮಾಸಾಶನ ನೀಡಲಾಗುತ್ತದೆ ಎಂದು ತಿಳಿಸಿದರು.
ಸಂಸ್ಕೃತಿ ಇಲ್ಲದವರು ಸಂಸ್ಕೃತಿ ಬಗ್ಗೆ ಮಾತನಾಡಬಾರದು:ಸಂಸ್ಕೃತಿ ಇಲ್ಲದವರು ಸಂಸ್ಕೃತಿ ಬಗ್ಗೆ ಮಾತನಾಡಬಾರದು ಎಂದು ನಟ ಚೇತನ್ಗೆ ಟಾಂಗ್ ನೀಡಿದ ಸಚಿವ ಸುನೀಲ್ ಕುಮಾರ್, ದೈವಾರಾಧನೆ ನಮ್ಮ ತುಳುನಾಡಿನ ಸಾಂಸ್ಕೃತಿಕ ಪ್ರತಿಬಿಂಬ, ನಮ್ಮ ನಂಬಿಕೆ, ಶ್ರದ್ಧೆಯ ಪ್ರಶ್ನೆ. ತುಳುನಾಡಿನ ಜನರು ಭಾವನಾತ್ಮಕವಾಗಿ ಎಲ್ಲ ಸಂದರ್ಭದಲ್ಲಿಯೂ ಈ ಸಂಬಂಧವನ್ನು ಜೋಡಿಸಿಕೊಂಡಿದ್ದಾರೆ. ದೈವಾರಾಧನೆ, ದೈವಗಳಿಗೆ ನಡೆದುಕೊಳ್ಳುವ ಮೂಲಕವೇ ಆ ಭಾಗದಲ್ಲಿ ನಮ್ಮ ದಿನಚರಿ ಆರಂಭವಾಗುತ್ತದೆ ಎಂದು ಹೇಳಿದರು.
ಅಂತಹ ದೈವಾರಾಧನೆ ಬಗ್ಗೆ ಯಾರೂ ಕೂಡ ಬೇರೆ ಅರ್ಥದಲ್ಲಿ ನೋಡಬಾರದು, ತಪ್ಪು ಅರ್ಥದಲ್ಲಿ ಅರ್ಥೈಸಬಾರದು. ನಮ್ಮ ತುಳುನಾಡಿನ ಸಾಂಸ್ಕೃತಿಕ ಪ್ರತಿಬಿಂಬವದು. ತಲತಲಾಂತರದಿಂದ ಅದನ್ನು ನಡೆಸಿಕೊಂಡು ಬರಲಾಗುತ್ತಿದೆ. ಯಾರೋ ಒಬ್ಬ ವ್ಯಕ್ತಿ ಹಾಗೆ ಹೇಳಿದರೆ, ಆ ಸಂಸ್ಕೃತಿಯಿಂದ ಯಾರೂ ದೂರ ಆಗಲ್ಲ. ಭೂತಾರಾಧನೆ ಹಿಂದೂ ಸಂಸ್ಕೃತಿಯ ಗಟ್ಟಿಯಾದ ಭಾಗ. ದೈವ ನರ್ತನೆ ಹಿಂದೂ ಸಂಸ್ಕೃತಿಯ ಭಾಗ. ಇದನ್ನು ಮತ್ತಷ್ಟು ಗಟ್ಟಿ ಮಾಡುತ್ತೇವೆ ಎಂದರು.
ತುಳುನಾಡಿನ ಜನತೆ ಸಂಸ್ಕೃತಿಯನ್ನು ದೀಪಾರಾಧನೆ ಮಾಡುವ ಮೂಲಕ ದೈವಾರಾಧನೆ ಮಾಡುತ್ತಾರೆ, ನಾಗಾರಾಧನೆ ಮಾಡುತ್ತಾರೆ ಎಂದರೆ ಒಂದೊಂದು ಕಡೆ ಹಿಂದೂ ಸಂಸ್ಕೃತಿಯ ಚಟುವಟಿಕೆಯನ್ನು ಅಳವಡಿಸಿಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಈ ಎಲ್ಲ ಚಟುವಟಿಕೆಗಳು ಹಿಂದೂ ಸಂಸ್ಕೃತಿಯ ಗಟ್ಟಿಯಾದ ಭಾಗ ಎಂದು ತಿರುಗೇಟು ನೀಡಿದರು.