ಬೆಂಗಳೂರು: ಕೋವಿಡ್ ಅಬ್ಬರದ ಹಿನ್ನೆಲೆ ಕಳೆಗುಂದಿದ್ದ ಗಣೇಶೋತ್ಸವ ಈ ಬಾರಿ ವಿಶೇಷ ಮೆರುಗು ಪಡೆಯಲಿದೆ. ಭರ್ಜರಿ ಮೆರವಣಿಗೆ, ದೊಡ್ಡ ದೊಡ್ಡ ಪೆಂಡಾಲ್ಗಳಲ್ಲಿ ಆಳೆತ್ತರದ ಗಣೇಶ ವಿಗ್ರಹ ಪ್ರತಿಷ್ಠಾಪನೆ, ಸಂಗೀತ ಕಚೇರಿ ಅದ್ಧೂರಿ ಗಣೇಶೋತ್ಸವ ಇತ್ಯಾದಿ ವಿಶೇಷ ಕಾರ್ಯಕ್ರಮಗಳು ಗಮನ ಸೆಳೆಯಲಿವೆ.
ಕಳೆದ 2 ವರ್ಷಗಳಿಂದ ವಿಘ್ನನಿವಾರಕನಿಗೆ ಕೋವಿಡ್ ಅಡ್ಡಿಯಾಗಿತ್ತು. ಸರ್ಕಾರದ ನಿಯಮ, ನಿರ್ಬಂಧ ಅದ್ಧೂರಿ ಆಚರಣೆಗೆ ತಡೆಯಾಗಿತ್ತು. ಆದರೆ, ಈ ಸಾರಿ ಅಂತಹ ಆತಂಕ ಇಲ್ಲವಾಗಿದೆ. ಕೋವಿಡ್ ಮೂರನೇ ಹಾಗೂ ನಾಲ್ಕನೇ ಅಲೆ ಅಷ್ಟಾಗಿ ಜನರನ್ನು ಕಂಗೆಡಿಸಿಲ್ಲ. ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ಕಡಿಮೆ ಮಾಡಿದೆ. ನಾಡಿನಲ್ಲಿ ಸಾವುನೋವು ಕಡಿಮೆ ಆಗಿದೆ. ಜನರ ಆರ್ಥಿಕ ಸ್ಥಿತಿ ಸಹ ನಿಧಾನವಾಗಿ ತಹಬಂದಿಗೆ ಬರುತ್ತಿದ್ದು, ವಿನಾಯಕನ ಆರಾಧನೆ ಮೂಲಕ ಇನ್ನಷ್ಟು ಸುಭೀಕ್ಷತೆ ಬರಲಿ ಎಂದು ಜನ ಪ್ರಾರ್ಥಿಸಲು ಮುಂದಾಗಿದ್ದಾರೆ.
ಬೆಂಗಳೂರಲ್ಲಿ ಅದ್ಧೂರಿ ಗಣೇಶೋತ್ಸವಕ್ಕೆ ಬಿಬಿಎಂಪಿ ಒಪ್ಪಿಗೆ ನಾಡಿನ ವಿವಿಧೆಡೆ ಬಣ್ಣ ಬಣ್ಣದ ಗಣೇಶ ವಿಗ್ರಹಗಳು ಗಮನ ಸೆಳೆಯುತ್ತಿವೆ. ಬೀದಿ ಬದಿಗಳಲ್ಲಿ, ಮನೆಗಳಲ್ಲಿ ಗಣೇಶ ಕೂರಿಸಲು ಬಿಬಿಎಂಪಿ ಯಾವುದೇ ನಿರ್ಬಂಧ ವಿಧಿಸಿಲ್ಲ. ಜನ ನಿರ್ಭೀತಿಯಿಂದ ತಮಗಿಷ್ಟವಾದ ರೀತಿ ಹಬ್ಬ ಆಚರಿಸಬಹುದು. ವಿಶೇಷವಾಗಿ ಹಬ್ಬ ಆಚರಿಸುವಲ್ಲಿ ಸಿದ್ಧಹಸ್ತರಾಗಿರುವ ಬೆಂಗಳೂರಿಗರಿಗೆ ಗಣೇಶನ ಹಬ್ಬ ವರವಾಗಿ ಲಭಿಸಿದೆ. ವಿಶೇಷ ಅಲಂಕಾರ, ಬಣ್ಣ ಬಣ್ಣದ ಬೆಳಕಿನ ವ್ಯವಸ್ಥೆ, ಸಂಗೀತ, ಸಂಜೆ ಆರ್ಕೆಸ್ಟ್ರಾ, ಭರ್ಜರಿ ಮೆರವಣಿಗೆ ಸೇರಿದಂತೆ ಹಳೆಯ ವೈಭವವನ್ನು ಮತ್ತೆ ಬೆಂಗಳೂರಿಗೆ ನೀಡುವ ಉತ್ಸುಕತೆಯಲ್ಲಿ ಜನರಿದ್ದಾರೆ.
ಬೆಂಗಳೂರಲ್ಲಿ ಅದ್ಧೂರಿ ಗಣೇಶೋತ್ಸವಕ್ಕೆ ಬಿಬಿಎಂಪಿ ಒಪ್ಪಿಗೆ ಬೆಂಗಳೂರಲ್ಲಿ ಅದ್ಧೂರಿ ಗಣೇಶೋತ್ಸವಕ್ಕೆ ಬಿಬಿಎಂಪಿ ಒಪ್ಪಿಗೆ: ಮಹಾನಗರದ ಯುವಕರು ಹಬ್ಬದ ದಿನಕ್ಕಾಗಿ ಕಾಯುತ್ತಿದ್ದಾರೆ. ಮನೆ ಮನೆಗೆ ತೆರಳಿ ಮಕ್ಕಳು ಗಣೇಶನನ್ನು ಕೂರಿಸುವುದಾಗಿ ಚಂದಾ ಸಹ ಸ್ವೀಕರಿಸಿದ್ದಾರೆ. ಕೋಬಿಡ್ ಕಾಡಿದ ವರ್ಷ ಗಣೇಶನ ಹಬ್ಬವೇ ನಡೆಯಲಿಲ್ಲ. ಕಳೆದ ವರ್ಷ ವಾರ್ಡಿಗೆ ಒಂದು ಗಣೇಶೋತ್ಸವ ಅಂತ ನಿಗದಿಪಡಿಸಲಾಗಿತ್ತು. ಮೂರು ದಿನ ಮಾತ್ರ ಆಚರಣೆಗೆ ಅವಕಾಶ ನೀಡಲಾಗಿತ್ತು. ಆದರೆ, ಈ ಸಾರಿ 15 ದಿನಗಳವರೆಗೂ ಗಣೇಶ ಕೂರಿಸಲು ಬಿಬಿಎಂಪಿಯಿಂದ ಅನುಮತಿ ನೀಡಲಾಗ್ತಿದೆ. ಗಣೇಶ ಕೂರಿಸಲು ಇಚ್ಛಿಸುವವರು ಏಕ ಗವಾಕ್ಷಿ ಪದ್ಧತಿಯಲ್ಲಿ ಅನುಮತಿ ಪಡೆಯಬೇಕಿದೆ. ಪೊಲೀಸ್ ಇಲಾಖೆ, ಬಿಬಿಎಂಪಿ ಹಾಗೂ ಬೆಸ್ಕಾಂ ಇಲಾಖೆಗಳಿಗೆ ಸಂಬಂಧಿಸಿದಂತೆ ಒಂದೇ ಅನುಮತಿ ಪಡೆಯಲು ಏರ್ಪಾಡು ಮಾಡಲಾಗಿದ್ದು, ವಲಯ ಕಚೇರಿಗಳಲ್ಲಿ ಅನುಮತಿ ಕೋರಬೇಕಾಗಿದೆ.
ಅನುಮತಿ ಪಡೆದವರು ಅದ್ಧೂರಿಯಾಗಿ ಸಾಂಸ್ಕೃತಿಕ ಹಾಗೂ ಕಲಾ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಬಹುದು. ಆದರೆ, ಯಾರೇ ಗಣೇಶ ಕೂರಿಸಬೇಕೆಂದರೂ ಕಡ್ಡಾಯವಾಗಿ ಅನುಮತಿ ಪಡೆಯೋದರ ಜೊತೆಗೆ ಶಾಂತಿ ಭಂಗವಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಆಗಸ್ಟ್ 30 ರಿಂದ ಸೆಪ್ಟೆಂಬರ್ 15ರವರೆಗೆ ಮಾತ್ರ ಗಣೇಶ ಕೂರಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಗಣೇಶ ನಿಮಜ್ಜನಕ್ಕೆ ವಿಶೇಷ ವ್ಯವಸ್ಥೆ:ಇನ್ನೂ ಗಣೇಶ ವಿಸರ್ಜನೆಗಾಗಿ ನಗರದ ನಾಲ್ಕು ಕಲ್ಯಾಣಿಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಮನೆ ಮನೆಗಳಲ್ಲಿ ಇರಿಸುವ ಚಿಕ್ಕ ಪುಟ್ಟ ಗಣೇಶ ನಿಮಜ್ಜನಕ್ಕೆ ಎಲ್ಲ ವಾರ್ಡ್ಗಳಲ್ಲಿಯೂ ಟ್ಯಾಂಕರ್ ವ್ಯವಸ್ಥೆ ಸಹ ಮಾಡಲಾಗುವುದು. ಮಣ್ಣಿನ ಗಣಪತಿ ಹೊರತು ಪಡಿಸಿ ಪಿಓಪಿ ಗಣೇಶನಿಗೆ ನಿರ್ಬಂಧವಿದೆ. ಹಲಸೂರು ಕೆರೆ, ಸ್ಯಾಂಕಿಕೆರೆ, ಹೆಬ್ಬಾಳ ಹಾಗೂ ಯಡಿಯೂರು ಕೆರೆಗಳಲ್ಲಿ ಗಣೇಶ ನಿಮಜ್ಜನಕ್ಕೆ ಅವಕಾಶವಿದೆ.
(ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಕ್ಷಣಗಣನೆ: ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ)