ಬೆಂಗಳೂರು: ಖಾಸಗಿ ಬಿಲ್ಡರ್ಗಳ ಬಡಾವಣೆ ನಿರ್ಮಿಸಿ ಮಾರಾಟ ಮಾಡುವ ಸಂಬಂಧ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಜ್ಯಪಾಲ ವಜುಭಾಯಿ ವಾಲಾ ಅಂಕಿತ ಹಾಕಿದ್ದಾರೆ.
ಕರ್ನಾಟಕ ಪಟ್ಟಣ ಹಾಗೂ ಗ್ರಾಮಾಂತರ ಯೋಜನೆಗೆ (ತಿದ್ದುಪಡಿ) ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಇದೀಗ ರಾಜ್ಯಪಾಲರು ತಿದ್ದುಪಡಿ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ. ಲಾಕ್ಡೌನ್ ವೇಳೆ ಸಂಕಷ್ಟಕ್ಕೊಳಗಾಗಿರುವ ಲೇಔಟ್ ಡೆವಲಪರ್ಸ್ಗಳಿಗೆ ತಮ್ಮ ಬಡಾವಣೆಯಲ್ಲಿನ ನಿವೇಶನಗಳನ್ನು ಮಾರಾಟ ಮಾಡಲು ಇನ್ನು ಮುಂದೆ, ತಮ್ಮ ಬಡಾವಣೆಯ ಪೂರ್ತಿ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿ ಮಾಡುವ ಅಗತ್ಯವಿಲ್ಲ. ಈ ಆಧ್ಯಾದೇಶದ ಮೂಲಕ ಅಭಿವೃದ್ಧಿಯಾದ ಪ್ರದೇಶವನ್ನು ಹಂತ- ಹಂತವಾಗಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ.
ಮೂಲ ಕಾಯ್ದೆ ಪ್ರಕಾರ, ಬಡವಾಣೆ ಅಭಿವೃದ್ಧಿಗೊಳಿಸಿ ಯೋಜನಾ ಅನುಮೋದನೆ ಪಡೆದ ಬಳಿಕ ಪೂರ್ತಿ ಬಡಾವಣೆಯ ಸಂಪೂರ್ಣ ಮೂಲಭೂತ ಸೌಕರ್ಯ ಅಭಿವೃದ್ಧಿಗೊಳಿಸದ ಹೊರತು ನಿವೇಶನವನ್ನು ಮಾರಾಟ ಮಾಡುವ ಹಾಗಿರಲಿಲ್ಲ. ಈಗ ಅದಕ್ಕೆ ತಾತ್ಕಾಲಿಕ ಸಡಿಲಿಕೆ ಮಾಡಲಾಗಿದೆ. ಈ ಹೊಸ ಸುಗ್ರೀವಾಜ್ಞೆ ಪ್ರಕಾರ ಬಡಾವಣೆ ಪ್ರದೇಶವನ್ನು ಬ್ಲಾಕ್ಗಳನ್ನಾಗಿ ವಿಂಗಡಿಸಿ ನಿವೇಶನಗಳನ್ನು ಮೂರು ಹಂತಗಳಲ್ಲಿ ಮಾರಾಟ ಮಾಡ ಬಹುದಾಗಿದೆ. ಮೊದಲ ಹಂತದಲ್ಲಿ ಶೇ 40ರಷ್ಟು ನಿವೇಶನ ಮಾರಾಟ ಮಾಡಬಹುದು. ಎರಡನೇ ಹಂತದಲ್ಲಿ ಶೇ 30ರಷ್ಟು ಮತ್ತು ಮೂರನೇ ಹಂತದಲ್ಲಿ ಉಳಿದ ನಿವೇಶನಗಳನ್ನು ಮಾರಾಟ ಮಾಡಬಹುದಾಗಿದೆ.