ಬೆಂಗಳೂರು:ವಿಶ್ವಾಸಮತ ಯಾಚನೆ ಸಂಬಂಧ ಸದನದಲ್ಲಿ ನಡೆದ ವಿದ್ಯಮಾನಗಳ ಕುರಿತು ರಾಜ್ಯಪಾಲರು ಕೇಂದ್ರಕ್ಕೆ ವರದಿ ನೀಡಿದ್ದಾರೆ. ಮುಂದೇನು ಎನ್ನುವುದರ ಕುರಿತು ರಾಜ್ಯಪಾಲರು ನಿರ್ಧರಿಸಲಿದ್ದಾರೆ. ನಾವು ಸೋಮವಾರದವರೆಗೂ ಕಾದು ನೋಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಸರ್ಕಾರಕ್ಕೆ ಬಹುಮತವಿಲ್ಲ ಎಂದು ಸ್ಪಷ್ಟವಾದರೂ ಕೂಡ ರಾಜ್ಯಪಾಲರರು ಮೂರನೇ ಬಾರಿಗೆ ನಿರ್ದೇಶನ ನೀಡಿ ಇವತ್ತಾದರೂ ವಿಶ್ವಾಸಮತ ಮಂಡಿಸಬೇಕು ಎಂದು ತಿಳಿಸಿದ್ದರು. ಆದರೂ ಸಹ ಸ್ಪೀಕರ್ ಸದನದಲ್ಲಿ ಕೆಲ ಸದಸ್ಯರಿಗೆ ಹೆಚ್ಚು ಸಮಯ ನೀಡಿ ಕಾಲಹರಣ ಮಾಡಿದರು. ರಾತ್ರಿ 8.15 ಕ್ಕೆ ಸ್ಪೀಕರ್ ಸದನಕ್ಕೆ ಬಂದು ಸೋಮವಾರ ವಿಶ್ವಾಸಮತ ಪೂರ್ಣ ಮಾಡುತ್ತೇವೆ. ಸಿದ್ದರಾಮಯ್ಯ ಮತ್ತು ಸಿಎಂ ಕುಮಾರಸ್ವಾಮಿ ಕೂಡ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಸಭಾಧ್ಯಕ್ಷರ ಹೇಳಿದ್ದಾರೆ. ಅಲ್ಲದೆ, ಸೋಮವಾರ ಇದಕ್ಕೆಲ್ಲಾ ಮಂಗಳ ಹಾಡುವುದಾಗಿ ತಿಳಿಸಿ ಕಲಾಪ ಸೋಮವಾರಕ್ಕೆ ಮುಂದೂಡಿದ್ದಾರೆ. ನಾವು ಸೋಮವಾರದವರೆಗೂ ಕಾದು ನೋಡುತ್ತೇವೆ. ಸಧ್ಯಕ್ಕೆ ಮತ್ತೆ ರಾಜ್ಯಪಾಲರನ್ನು ಭೇಟಿಯಾಗಲ್ಲ ಎಂದರು.