ಬೆಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ)ಕ್ಕೆ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಕುರಿತಂತೆ ಡಿಜಿ-ಐಜಿ ಜೊತೆಗೆ ಚರ್ಚೆ ಮಾಡಿದ್ದೇನೆ. ಪ್ರವೀಣ್ ಹತ್ಯೆ ಸಂಘಟಿತ ಅಪರಾಧವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೇ, ಈ ಪ್ರಕರಣವು ಅಂತಾರಾಜ್ಯ ವಿಚಾರವಾಗಿದೆ. ಇದರ ಸಂಪೂರ್ಣವಾದ ಮಾಹಿತಿಯನ್ನೂ ಸಂಗ್ರಹಿಸಲು ಹೇಳಿದ್ದೇನೆ.
ತನಿಖೆಯು ತ್ವರಿತಗತಿಯ ಪ್ರಗತಿಯಲ್ಲಿದ್ದು, ಎಲ್ಲ ಮಾಹಿತಿ ಪಡೆದ ಮೇಲೆ ಎನ್ಐಎಗೆ ಪತ್ರ ಬರೆಯುಲು ತಿಳಿಸಿದ್ದೇನೆ. ಎನ್ಐಎಗೆ ವಹಿಸಲು ನಾವು ತೀರ್ಮಾನಿಸಿದ್ದು, ಅಂತಿಮವಾಗಿ ಕೇಂದ್ರ ಗೃಹ ಇಲಾಖೆ ನಿರ್ಧರಿಸಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ದ-ಕಗೆ ಕೆಎಸ್ಆರ್ಪಿಯ ಇನ್ನೊಂದು ಬೆಟಾಲಿಯನ್ ಸ್ಥಳಾಂತರ: ಕೇರಳ ಬಾರ್ಡರ್ನಲ್ಲಿ ಸಂಪೂರ್ಣವಾಗಿ ಸಿಸಿಟಿವಿ ಮೂಲಕ ಕಣ್ಗಾವಲು ವಹಿಸಲಾಗುವುದು. ಎರಡು ರಾಜ್ಯಗಳ ಸಂಪರ್ಕ ಇರುವ ಕಡೆ ಚೆಕ್ ಪೋಸ್ಟ್ ಹಾಕಬೇಕು. ಸೂಕ್ಷ್ಮ ಊರುಗಳಲ್ಲಿ ಪೊಲೀಸರು ತಾತ್ಕಾಲಿಕ ಕ್ಯಾಂಪ್ ಮಾಡಬೇಕು. ಜೊತೆಗೆ ರಾತ್ರಿ ಗಸ್ತು ಹೆಚ್ಚಳ ಸೇರಿದಂತೆ ಹಲವು ಕ್ರಮಗಳಿಗೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಿಎಂ ತಿಳಿಸಿದರು.