ಕರ್ನಾಟಕ

karnataka

ETV Bharat / state

ಮಂಗಳೂರು ಜಿ ಆರ್ ವೈದ್ಯಕೀಯ ಕಾಲೇಜಿನ 99 ಮೆಡಿಕಲ್​ ವಿದ್ಯಾರ್ಥಿಗಳ ಪ್ರವೇಶಾತಿ ಅಕ್ರಮ.. ಬೇರೆ ಕಾಲೇಜುಗಳಲ್ಲಿ ಸೀಟು ನೀಡಲು ಸರ್ಕಾರದ ಭರವಸೆ - High Court

ಜಿ ಆರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ಇತರೆ ಕಾಲೇಜುಗಳಲ್ಲಿ ಸೀಟು ನೀಡಲು ಕ್ರಮವಹಿಸುವುದಾಗಿ ರಾಜ್ಯ ಸರ್ಕಾರವು ಹೈಕೋರ್ಟ್​ಗೆ ತಿಳಿಸಿದೆ.

High Court
ಹೈಕೋರ್ಟ್​

By ETV Bharat Karnataka Team

Published : Sep 30, 2023, 7:04 AM IST

ಬೆಂಗಳೂರು:ಮಂಗಳೂರಿನ ಜಿ ಆರ್ ವೈದ್ಯಕೀಯ ಕಾಲೇಜಿನ 99 ವಿದ್ಯಾರ್ಥಿಗಳ 2023- 24ನೇ ಸಾಲಿನ ಎಂಬಿಬಿಎಸ್ ಪದವಿಗೆ ಪ್ರವೇಶಾತಿ ಅಕ್ರಮವೆಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಘೋಷಿಸಿರುವ ಹಿನ್ನೆಲೆಯಲ್ಲಿ ಆ ವಿದ್ಯಾರ್ಥಿಗಳಿಗೆ ಮತ್ತೊಂದು ಕಾಲೇಜಿನಲ್ಲಿ ಪ್ರವೇಶಾತಿ ಕಲ್ಪಿಸುವ ಸಂಬಂಧ ಕ್ರಮ ವಹಿಸುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮಾಹಿತಿ ನೀಡಿದೆ.

2023- 24ನೇ ಸಾಲಿನ ಎಂಬಿಬಿಎಸ್ ಪದವಿಗೆ ತಾವು ಪಡೆದಿರುವ ಪ್ರವೇಶಾತಿ ಅಕ್ರಮ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಘೋಷಿಸಿರುವ ಹಿನ್ನೆಲೆಯಲ್ಲಿ ಬೇರೊಂದು ಕಾಲೇಜಿಗೆ ವರ್ಗಾವಣೆಗೆ ನಿರ್ದೇಶನ ನೀಡಬೇಕು. ಜೊತೆಗೆ, ಇದೇ ಅಕ್ಟೋಬರ್ ತಿಂಗಳಿನಿಂದ ಪ್ರಾರಂಭವಾಗುತ್ತಿರುವ ಪರೀಕ್ಷೆಗೆ ಅವಕಾಶ ನೀಡಬೇಕು ಎಂದು ವಿದ್ಯಾರ್ಥಿನಿ ಧಾತ್ರಿ ಎಂಬುವರು ಸೇರಿದಂತೆ ಹಲವರು ಅರ್ಜಿಗಳನ್ನು ಸಲ್ಲಿಸಿದ್ದರು. ಈ ಅರ್ಜಿಗಳನ್ನು ವಿಚಾರಣೆ ನಡೆಸಿದ ಜಿ. ನರೇಂದರ್ ಮತ್ತು ವಿಜಯ್ ಕುಮಾರ್ ಎ. ಪಾಟೀಲ್ ಅವರಿದ್ದ ವಿಭಾಗೀಯ ಪೀಠಕ್ಕೆ ಸರ್ಕಾರದ ಪರ ವಕೀಲರು ಈ ಮಾಹಿತಿ ನೀಡಿದರು.

24 ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸೀಟು ಮರು ವಿತರಣೆ:ವಿಚಾರಣೆ ವೇಳೆ ರಾಜ್ಯ ಸರ್ಕಾರಿ ವಕೀಲರು ಹಾಜರಾಗಿ, ಅರ್ಜಿದಾರ ವಿದ್ಯಾರ್ಥಿಗಳನ್ನು ಖಾಸಗಿ ಕಾಲೇಜಿಗೆ ದಾಖಲಿಸಿಕೊಳ್ಳಲಾಗಿದೆ. ಸರ್ಕಾರಿ ಕಾಲೇಜು ಮತ್ತು ಖಾಸಗಿ ಕಾಲೇಜುಗಳಲ್ಲಿನ ಶುಲ್ಕ ಬಹಳ ವ್ಯತ್ಯಾಸವಾಗಿದೆ. ವಿದ್ಯಾರ್ಥಿಗಳು ಪ್ರವೇಶ ಪಡೆದಿರುವ ಕೋಟಾದ ಪ್ರಕಾರ ಬೇರೊಂದು ಖಾಸಗಿ ಕಾಲೇಜಿನಲ್ಲಿ ಪ್ರವೇಶಾತಿ ಕಲ್ಪಿಸಲಾಗುತ್ತದೆ. ರಾಜ್ಯದಲ್ಲಿ ಸುಮಾರು 24 ಖಾಸಗಿ ಕಾಲೇಜುಗಳಿವೆ. ವಿದ್ಯಾರ್ಥಿಗಳಿಗೆ ಸೀಟು ಮರು ವಿತರಣೆ ಪ್ರಕ್ರಿಯೆ ಪೂರ್ಣಗೊಳಿಸಲು ಸ್ವಲ್ಪ ಕಾಲಾವಕಾಶಬೇಕಿದೆ. 24 ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸೀಟು ಮರು ವಿತರಣೆ ಅಂತಿಮಗೊಳಿಸಿ ಪ್ರಮಾಣಪತ್ರ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆಗೆ ನಿರ್ದೇಶನ:ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ವಿದ್ಯಾರ್ಥಿಗಳ ಸೀಟು ಮರು ವಿತರಣೆಯ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಮುಂದಿನ ವಿಚಾರಣೆಯ ದಿನಾಂಕದೊಳಗೆ ವಿದ್ಯಾರ್ಥಿಗಳ ಹೆಸರುಗಳು, ಅವರನ್ನು ಮುಂಬರುವ ಪರೀಕ್ಷೆ ಬರೆಯುವ ಉದ್ದೇಶಕ್ಕಾಗಿ ತಾತ್ಕಾಲಿಕವಾಗಿ ಯಾವ ಕಾಲೇಜಿಗೆ ವರ್ಗಾಯಿಸಲಾಗುತ್ತದೆ ಎಂಬುದನ್ನು ವಿವರಿಸಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ನಿರ್ದೇಶನ ನೀಡಿದೆ. ವಿಚಾರಣೆಯನ್ನು ಅ.3ಕ್ಕೆ ಮುಂದೂಡಿಕೆ ಮಾಡಲಾಗಿದೆ.

ಇದನ್ನೂ ಓದಿ:ಅಪರಾಧ ಪ್ರಕರಣ, ಸರ್ಕಾರವೇ ಸಂತ್ರಸ್ತರ ಸ್ಥಾನದಲ್ಲಿ ನಿಂತು ಸಿಆರ್‌ಪಿಸಿ 372ರಡಿ ಮೇಲ್ಮನವಿ ಸಲ್ಲಿಸಲಾಗದು: ಹೈಕೋರ್ಟ್

ಕೋರ್ಟ್​​ ಆದೇಶ ಉಲ್ಲಂಘನೆ: ಆರು ತಿಂಗಳಲ್ಲಿ ಪ್ರತಿ ತಿಂಗಳ ಒಂದು ದಿನ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಮಾಡಲು ಮುಚ್ಚಳಿಕೆ ನೀಡಿದ ವೈದ್ಯೆ

ABOUT THE AUTHOR

...view details