ಬೆಂಗಳೂರು :ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ ಎರಡು ಸ್ವಾಮಿ ವಿವೇಕಾನಂದ ಸ್ವಸಹಾಯ ಗುಂಪುಗಳ ರಚನೆಗೆ ರಾಜ್ಯ ಸರ್ಕಾರ ಆದೇಶಿಸಿದೆ. ಗ್ರಾಮ ಪಂಚಾಯತ್‌ನಲ್ಲಿ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಯುವ ಸ್ವಸಹಾಯ ಸಂಘ ಸ್ಥಾಪಿಸಿ, ಸ್ವಯಂ ಉದ್ಯೋಗ ಕೈಗೊಳ್ಳುವುದಕ್ಕೆ ನೆರವು ನೀಡಲು ಈಗಾಗಲೇ ಆದೇಶ ಹೊರಡಿಸಲಾಗಿದೆ.
ಮೊದಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ಗುಂಪಿನಂತೆ 6000 ಗುಂಪುಗಳನ್ನು ರಚಿಸಲು ಆದೇಶಿಸಲಾಗಿತ್ತು. ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಗುಂಪುಗಳ ರಚನೆಗೆ ಉತ್ತಮ ಸ್ಪಂದನೆ ಸಿಕ್ಕಿದ್ದರಿಂದ ಇದೀಗ ಪ್ರತಿ ಪಂಚಾಯತ್‌ಗೆ ಎರಡರಂತೆ 12 ಸಾವಿರ ಗುಂಪುಗಳನ್ನು ರಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು. ಅದರಂತೆ ಸರ್ಕಾರದಿಂದ ಆದೇಶ ಹೊರಬಿದ್ದಿದೆ.
ಪ್ರಯೋಜನವೇನು?: ಪ್ರತಿ ಗುಂಪಿಗೆ 10 ಸಾವಿರ ರೂಪಾಯಿ ಸುತ್ತುನಿಧಿ, ಒಂದು ಲಕ್ಷ ಸಬ್ಸಿಡಿಯೊಂದಿಗೆ ಐದು ಲಕ್ಷ ರೂಪಾಯಿ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಸ್ಥಳೀಯ ಬೇಡಿಕೆಯನ್ನಾಧರಿಸಿ ಎಲ್ಲಾ ಸ್ವಸಹಾಯಗಳ ಕಾರ್ಯಚಟುವಟಿಕೆ ಆರಂಭಿಸಿ 12 ಸಾವಿರ ಯುವ ಸಂಘಗಳನ್ನು ನವೋದ್ಯಮಗಳಾಗಿ ಪರಿವರ್ತಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ 5 ಲಕ್ಷಕ್ಕೂ ಅಧಿಕ ಯುವಕರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ.
ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಗುಂಪುಗಳ ರಚನೆಗೆ ಸರ್ಕಾರ ಆದೇಶ ವಿಶೇಷವಾದ ಯೋಜನೆಯನ್ನು ನಮ್ಮ ಇಲಾಖೆ ನೇತೃತ್ವದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಯುವಕರ ಸಬಲೀಕರಣಕ್ಕೆ ಒತ್ತು ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮಕ್ಕೆ ಒಂದರಂತೆ ಸುಮಾರು 28 ಸಾವಿರ ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಗುಂಪುಗಳನ್ನು ರಚಿಸುವ ಗುರಿ ಹೊಂದಲಾಗಿದೆ ಎಂದು ರೇಷ್ಮೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣ ಗೌಡ ತಿಳಿಸಿದ್ದಾರೆ.
ಸಹಕಾರಿ ಸಂಘಗಳಿಗೆ ಒಂದೇ ತಂತ್ರಾಂಶ:ಮಾರ್ಚ್ 7ರಂದು ಮೈಸೂರಿನಲ್ಲಿ ನಡೆದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶ ಕಾರ್ಯಕ್ರಮದಲ್ಲಿ ಸಹಕಾರಿ ಸಂಘಗಳಿಗೆ ಒಂದೇ ತಂತ್ರಾಂಶ ಕುರಿತು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿದ್ದರು. ರಾಜ್ಯದಲ್ಲಿರುವ 5,700ಕ್ಕೂ ಅಧಿಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಒಂದೇ ತಂತ್ರಾಂಶ ಅಳವಡಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಸರ್ಕಾರ 40 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಹೇಳಿದ್ದರು.
ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮತ್ತಷ್ಟು ಅಧಿಕಾರ ನೀಡಲು ಒಂದೇ ಮಾಡೆಲ್ ಬೈಲಾ ತರಲಾಗುತ್ತಿದೆ. ಇದರಿಂದ ಪೆಟ್ರೋಲ್ ಬಂಕ್, ಕಲ್ಯಾಣ ಮಂಟಪ ಆರಂಭದ ಜೊತೆಗೆ ಹಲವು ರೀತಿಯ ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು. 33 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ. ಸಾಲ ವಿತರಣೆ ಮಾಡುವ ಗುರಿ ಹೊಂದಲಾಗಿದೆ. ಇದರಲ್ಲಿ 3 ಲಕ್ಷ ಹೊಸ ರೈತರಿಗೆ ಸಾಲ ನೀಡಲಾಗುತ್ತಿದೆ. ಸಾಲ ಮಿತಿ ಹೆಚ್ಚಿಸಬೇಕೆಂಬ ಬೇಡಿಕೆಗನುಗುಣವಾಗಿ ಈ ಸಾಲಿನ ಬಜೆಟ್‌ನಲ್ಲಿ ಸಾಲ ವಿತರಣೆ ಮೊತ್ತವನ್ನು 3 ಲಕ್ಷ ರೂ. ರಿಂದ 5 ಲಕ್ಷ ರೂ. ಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.
ಯಶಸ್ವಿನಿ ಯೋಜನೆ:ರಾಜ್ಯಾದ್ಯಂತ ರೈತರಿಗೆ ಹಲವು ಅನುಕೂಲ ಕಲ್ಪಿಸಲಾಗಿದ್ದು, ಸಾಲಕ್ಕಾಗಿ ಅಲೆದಾಡುವುದನ್ನು ತಪ್ಪಿಸಲು ಒಂದೇ ಬ್ಯಾಂಕ್‌ನಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡಲಾಗುತ್ತದೆ. ರೈತರ ಆರೋಗ್ಯದ ಹಿತದೃಷ್ಟಿಯಿಂದ ಯಶಸ್ವಿನಿ ಯೋಜನೆಯನ್ನು ಮರುಜಾರಿಗೊಳಿಸಲಾಗಿದೆ. ಯಶಸ್ವಿನಿ ಯೋಜನೆ ನೋಂದಣಿ ಅವಧಿಯನ್ನು ಮಾ.31ರವರೆಗೆ ವಿಸ್ತರಿಸಲಾಗಿದೆ.
ಕಷ್ಟಕ್ಕೆ ಸ್ಪಂದಿಸುವ ಕಾರ್ಯಕ್ರಮ:ಪ್ರತಿ ಜಿಲ್ಲೆಯಲ್ಲೂ ಈ ಕಾರ್ಯಕ್ರಮ ಆಯೋಜಿಸಲಾಗುವುದು. ಚಿತ್ರದುರ್ಗ, ತುಮಕೂರು ನಂತರ ಮೈಸೂರಿನಲ್ಲಿ ಮೂರನೇ ಕಾರ್ಯಕ್ರಮ ಇದಾಗಿದೆ. ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗುತ್ತಿದ್ದು, ಫಲಾನುಭವಿಗಳ ಬಗ್ಗೆ ಸಿಎಂ ವಿಶೇಷ ಗಮನ ಹರಿಸಿದ್ದಾರೆ. ಜನಸಾಮಾನ್ಯರ ನೋವಿಗೆ, ಕಷ್ಟಕ್ಕೆ ಸ್ಪಂದಿಸುವ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು. ಫಲಾನುಭವಿಗಳಿಗೆ ಸರ್ಕಾರದಿಂದ ಬಿಡುಗಡೆ ಆದ ಹಣ ನೂರಕ್ಕೆ ನೂರರಷ್ಟು ತಲುಪಬೇಕು. ಸರ್ಕಾರದ ಎಲ್ಲಾ ಸವಲತ್ತುಗಳು ಸಿಗಬೇಕು. ಯಾರಿಗೂ ತೊಂದರೆ ಆಗಬಾರದೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಚಿವರು ತಿಳಿಸಿದ್ದರು.
ಇದನ್ನೂ ಓದಿ :ಬಿಜೆಪಿ ಚುನಾವಣಾ ಪ್ರಚಾರ ಸಮಿತಿಗೆ ಸಿಎಂ ಬೊಮ್ಮಾಯಿ ಅಧ್ಯಕ್ಷ, ರಮೇಶ್ ಜಾರಕಿಹೊಳಿಗೂ ಸ್ಥಾನ