ಕರ್ನಾಟಕ

karnataka

ETV Bharat / state

ಸಹಕಾರಿ ಸಂಘ, ಬ್ಯಾಂಕ್​ಗಳಿಗೆ ಆಡಳಿತಾಧಿಕಾರಿ ನೇಮಕ ಆದೇಶಕ್ಕೆ ಹೈಕೋರ್ಟ್ ತಡೆ

ಅವಧಿ ಮುಗಿದಿರುವ ಸಹಕಾರ ಸಂಘಗಳು ಮತ್ತು ಬ್ಯಾಂಕ್​ಗಳಿಗೆ ಚುನಾವಣೆ ನಡೆಸುವ ಬದಲು ಆಡಳಿತಾಧಿಕಾರಿ ನೇಮಕ ಮಾಡಲು ಮುಂದಾಗಿರುವ ಸರ್ಕಾರದ ಆದೇಶಕ್ಕೆ ಹೈಕೋರ್ಟ್​ ತಡೆಯಾಜ್ಞೆ ನೀಡಿದೆ.

ಹೈಕೋರ್ಟ್
ಹೈಕೋರ್ಟ್

By

Published : Aug 3, 2020, 11:19 PM IST

ಬೆಂಗಳೂರು: ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಸಹಕಾರ ಸಂಘಗಳು ಮತ್ತು ಬ್ಯಾಂಕ್​​ಗಳ ಚುನಾವಣೆ ಮುಂದೂಡಿ, ಆಡಳಿತ ಅಧಿಕಾರಿ ನೇಮಿಸಲು ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಅವಧಿ ಮುಗಿದಿರುವ ಸಹಕಾರ ಸಂಘಗಳು ಮತ್ತು ಬ್ಯಾಂಕ್​ಗಳಿಗೆ ಚುನಾವಣೆ ನಡೆಸುವ ಬದಲು ಆಡಳಿತಾಧಿಕಾರಿ ನೇಮಕ ಮಾಡಲು ಮುಂದಾಗಿರುವ ಸರ್ಕಾರದ ಆದೇಶವನ್ನು ರದ್ದುಪಡಿಸುವಂತೆ ಕೋರಿ ಪುತ್ತೂರಿನ ದಕ್ಷಿಣ ಕನ್ನಡ ಕೇಂದ್ರ ಸಹಕಾರಿ ಸಗಟು ಮಾರಾಟ ಸಂಘದ ಅಧ್ಯಕ್ಷ ಮಾದೋರಿ ಮತ್ತಿತರರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಗೌಡ ಅವರಿದ್ದ ಏಕಸದಸ್ಯ ಪೀಠ, ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಹಾಗೆಯೇ, ಪ್ರತಿವಾದಿಗಳಾದ ರಾಜ್ಯ ಸಹಕಾರ ಇಲಾಖೆ ಕಾರ್ಯದರ್ಶಿ, ಸಹಕಾರ ಸಂಘಗಳ ನಿಬಂಧಕರು, ಮೈಸೂರು ಪ್ರಾಂತ್ಯ ಸಹಕಾರ ಸಂಘಗಳ ಜಂಟಿ ನಿಬಂಧಕರು ಮತ್ತು ರಾಜ್ಯ ಸಹಕಾರ ಸಂಘಗಳ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ :ರಾಜ್ಯದ ಹಲವು ಸಹಕಾರ ಸಂಘಗಳು ಮತ್ತು ಸಹಕಾರಿ ಬ್ಯಾಂಕುಗಳ ಆಡಳಿತ ಅವಧಿ ಮುಗಿದಿದ್ದು ಅವುಗಳಿಗೆ ಚುನಾವಣೆ ನಡೆಸಬೇಕಿದೆ. ಆದರೆ ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸಹಕಾರ ಇಲಾಖೆಯ ಜಂಟಿ ಕಾರ್ಯದರ್ಶಿ ಕೆ.ಎಂ.ಆಶಾ ಜುಲೈ 14ರಂದು ಆದೇಶ ಹೊರಡಿಸಿ, ಚುನಾವಣೆಗಳನ್ನು 2020ರ ಡಿಸೆಂಬರ್ ಅಂತ್ಯದವರೆಗೂ ಮುಂದೂಡಬೇಕು. ಈಗಾಗಲೇ ಚುನಾವಣಾ ವೇಳಾಪಟ್ಟಿ ಪ್ರಕಟಿಸಿ ಪ್ರಕ್ರಿಯೆ ಆರಂಭಗೊಂಡಿದ್ದರೂ ರದ್ದುಗೊಳಿಸಬೇಕು. ಆಡಳಿತ ಅವಧಿ ಮುಗಿದಿರುವ ಮತ್ತು ಪೂರ್ಣಗೊಳ್ಳಲಿರುವ ಸಹಕಾರ ಸಂಘ ಮತ್ತು ಬ್ಯಾಂಕ್ ಗಳಿಗೆ ಆಡಳಿತ ಅಧಿಕಾರಿಗಳನ್ನು ನೇಮಕ ಮಾಡಲು ಸಂಬಂಧಪಟ್ಟ ಪ್ರಾಧಿಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದರು.

ಈ ಆದೇಶದ ಮೇರೆಗೆ ಮೈಸೂರು ಪ್ರಾಂತ ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಕಾಶ್ ರಾವ್ ಜು.20ರಂದು ದಕ್ಷಿಣ ಕನ್ನಡ ಕೇಂದ್ರ ಸಹಕಾರ ಸಗಟು ಮಾರಾಟ ಸಂಘದ ಚುನಾವಣೆ ಮುಂದೂಡಿ, ಸಂಘಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಸಹಕಾರ ಸಂಘಗಳ ಉಪನಿಬಂಧಕರನ್ನು ಆಡಳಿತ ಅಧಿಕಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದರು.

ಈ ಎರಡು ಆದೇಶಗಳನ್ನು ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್​ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ವಕೀಲ ಅರುಣ್ ಶಾಮ್ ಅವರು ವಾದ ಮಂಡಿಸಿ, ಸರ್ಕಾರದ ಆದೇಶವು ಕಾನೂನುಬಾಹಿರವಾಗಿದೆ. ಅಲ್ಲದೆ ಸಹಕಾರ ಸಂಘಗಳ ಆಡಳಿತದಲ್ಲಿ ಮಧ್ಯ ಪ್ರವೇಶ ಮಾಡಿದಂತಾಗಿದೆ. ಮುಖ್ಯವಾಗಿ ಸಂವಿಧಾನದ ವಿಧಿ 243( ಝೆಡ್) (ಎಲ್) ಉಲ್ಲಂಘನೆಯಾಗಿದೆ. ಆದ್ದರಿಂದ ಸರ್ಕಾರದ ಆದೇಶವನ್ನು ಸಂವಿಧಾನ ಬಾಹಿರ ಎಂದು ಘೋಷಿಸಬೇಕು. ಕೂಡಲೇ ಚುನಾವಣೆ ಮುಂದೂಡುವ ಮತ್ತು ಆಡಳಿತಾಧಿಕಾರಿ ನೇಮಕ ಮಾಡುವ ಸರ್ಕಾರದ ಆದೇಶಕ್ಕೆ ತಡೆ ನೀಡಬೇಕು ಮತ್ತು ದಕ್ಷಿಣ ಕನ್ನಡ ಕೇಂದ್ರ ಸಹಕಾರ ಸಗಟು ಮಾರಾಟ ಸಂಘಕ್ಕೆ ಚುನಾವಣೆ ನಡೆಸುವಂತೆ ಸಹಕಾರ ಸಂಘಗಳ ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದರು.

ABOUT THE AUTHOR

...view details