ಬೆಂಗಳೂರು: ರಾಜ್ಯದಲ್ಲಿ ಸಿರಿಧಾನ್ಯ ಬೆಳೆಗೆ ಹೆಚ್ಚು ಪ್ರಾಮುಖ್ಯತೆ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ಸಿರಿಧಾನ್ಯ ವರ್ಷ ಘೋಷಣೆಯ ಲಾಭ ಪಡೆಯಲು ಅಣಿಯಾಗುತ್ತಿದೆ. ಬಜೆಟ್ನಲ್ಲಿ ವಿಶೇಷ ಅನುದಾನ ಘೋಷಣೆ ಮಾಡದಿದ್ದರೂ ವಿಶೇಷ ಕಾರ್ಯಕ್ರಮಗಳ ಮೂಲಕ ಸಿರಿಧಾನ್ಯ ಉತ್ಪಾದನೆ ಹೆಚ್ಚಿಸುವ ಉದ್ದೇಶ ಸರ್ಕಾರ ಹೊಂದಿದೆ.
ಸಿರಿಧಾನ್ಯಕ್ಕೆ ಇತಿಹಾಸವೇ ಇದೆ. ಪೂರ್ವಜರ ಆಹಾರವೂ ಇದೇ ಆಗಿತ್ತು. ಸಿರಿಧಾನ್ಯಗಳೆಂದರೆ ನಮಗೆ ಗೊತ್ತಿರುವಂತೆ ಸಜ್ಜೆ, ರಾಗಿ, ನವಣೆ, ಸಾವೆ, ಬರಗು, ಊದಲು, ಕೊರಲೆ, ಹಾರಕ, ಜೋಳವಾಗಿದೆ. ಸಿರಿಧಾನ್ಯಗಳನ್ನು ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಈ ಬೆಳೆಗಳನ್ನು ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿಯೂ ಬೆಳೆಯಬಹುದು.
ಈ ಸಿರಿಧಾನ್ಯಗಳಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ಇವು ಪ್ರಾಣಿಗಳಿಗೂ ಉತ್ತಮ ಆಹಾರವಾಗಿವೆ. ಜನರಲ್ಲಿ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಬೊಜ್ಜು, ಕ್ಯಾನ್ಸರ್‌ನಂತ ರೋಗಗಳ ತಡೆಗೆ ಸಿರಿಧಾನ್ಯಗಳ ಬಳಕೆ ಉತ್ತಮವಾಗಿವೆ.
ರಾಜ್ಯದಲ್ಲಿ ಬೆಳೆಯುವುದೆಷ್ಟು?
ರಾಜ್ಯದಲ್ಲಿ ಸುಮಾರು 29 ಸಾವಿರ ಹೆಕ್ಟೇರ್ನಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿದೆ. ರಾಜ್ಯ ಸರ್ಕಾರ ಹೆಕ್ಟೇರ್ಗೆ 10 ಸಾವಿರ ರೂ.ಗಳಂತೆ 12,750 ಹೆಕ್ಟೇರ್ಗೆ 12.50 ಕೋಟಿ ರೂ.ನೆರವು ನೀಡುತ್ತದೆ. ಕೊರೊನಾ ಸೋಂಕಿನಿಂದಾಗಿ ನೂರಾರು ಯುವಕರು ಕೃಷಿಯ ಕಡೆ ಮುಖಮಾಡಿದ್ದು, ಈ ಸಂದರ್ಭದಲ್ಲೇ ಇಡೀ ದೇಶದಲ್ಲೇ ಹೆಚ್ಚಿನ ಉತ್ಪಾದನೆಯಾಗುವ ಕರ್ನಾಟಕದಲ್ಲಿ ಸಾವಯವ ಹಾಗೂ ಸಿರಿಧಾನ್ಯ ಕೃಷಿ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮನ್ನಣೆ ಸಿಗುವ ಕಾಲ ಹತ್ತಿರವಾಗುತ್ತಿದೆ.
ರಾಜ್ಯ ಸರ್ಕಾರ 2017ರಿಂದ ನಡೆಸಿದ ಪ್ರಯತ್ನದಿಂದಾಗಿ ವಿಶ್ವಸಂಸ್ಥೆ 2023ನ್ನು 'ಸಿರಿಧಾನ್ಯಗಳ ವರ್ಷ'ವೆಂದು ಘೋಷಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರಿಂದಾಗಿ ಸಾವಯವ, ಸಿರಿಧಾನ್ಯ ಉತ್ಪನ್ನ ಹಾಗೂ ಹೆಚ್ಚು ಪೌಷ್ಟಿಕಾಂಶ ಇರುವ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಸಿಗುವಂತಾಗುತ್ತದೆ. ಆ ಮೂಲಕ ರೈತರ ಆದಾಯವೂ ಹೆಚ್ಚುತ್ತದೆ ಎಂಬ ವಿಶ್ವಾಸ ಮೂಡಿದೆ.
ಸಿರಿಧಾನ್ಯಗಳ ಮಹತ್ವವೇನು?
ದಿನನಿತ್ಯ ಬಳಸುವ ಅಕ್ಕಿ ಮತ್ತು ಗೋಧಿಗೆ ಹೋಲಿಸಿದರೆ ಸಿರಿಧಾನ್ಯಗಳಲ್ಲಿ ಪ್ರೋಟಿನ್, ಕೊಬ್ಬು, ಸುಣ್ಣ, ನಾರು, ಖನಿಜ ಮತ್ತು ರಂಜಕ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತದೆ. ಸಿರಿಧಾನ್ಯಗಳಲ್ಲಿ ನಾರಿನ ಅಂಶ ಶೇ.1ರಿಂದ 9ರಷ್ಟು ಇದ್ದು, ದೇಹದಲ್ಲಿರುವ ಕೊಲೆಸ್ಟಾಲ್, ಟ್ರೈಗ್ಲಿಸಾರಾಯ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುವುದಕ್ಕೆ ಸಹಾಯಕಾರಿಯಾಗಿದೆ.