ಕರ್ನಾಟಕ

karnataka

By ETV Bharat Karnataka Team

Published : Sep 19, 2023, 7:06 PM IST

ETV Bharat / state

132 ಸಹಾಯಕ ಅಭಿಯೋಜಕರಿಗೆ ನೇಮಕಾತಿ ಆದೇಶ ಹೊರಡಿಸಿರುವುದಾಗಿ ಸರ್ಕಾರ ಹೈಕೋರ್ಟ್​ಗೆ ಮಾಹಿತಿ

132 ಅಭಿಯೋಜಕರಿಗೆ ನೇಮಕಾತಿ ಆದೇಶ ಕಳುಹಿಸಿರುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮಾಹಿತಿ ನೀಡಿದೆ.

High Court
ಹೈಕೋರ್ಟ್

ಬೆಂಗಳೂರು: ರಾಜ್ಯದಲ್ಲಿ ಖಾಲಿ ಇದ್ದ ಸಹಾಯಕ ಸರ್ಕಾರಿ ಅಭಿಯೋಜಕರ ನೇಮಕ ಸಂಬಂಧ 132 ಅಭಿಯೋಜಕರಿಗೆ ನೇಮಕಾತಿ ಆದೇಶ ಕಳುಹಿಸಿರುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮಾಹಿತಿ ನೀಡಿದೆ.

ರಾಜ್ಯಾದ್ಯಂತ ಖಾಲಿ ಇರುವ ಸರ್ಕಾರಿ ಅಭಿಯೋಜಕರ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌ ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರಿ ವಕೀಲರು ಮಾಹಿತಿ ನೀಡಿದರು. ಅಲ್ಲದೇ, 49 ಸಹಾಯಕ ಸರ್ಕಾರಿ ಅಭಿಯೋಜಕರಿಗೆ ಹಿರಿಯ ಸರ್ಕಾರಿ ಅಭಿಯೋಜಕ ಹುದ್ದೆಗೆ ಬಡ್ತಿ ನೀಡಿರುವುದಾಗಿ ಸರ್ಕಾರ ವಿವರಣೆ ನೀಡಿದೆ.

ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯ ಪೀಠವು, ಜೂನ್ 20ರ ನ್ಯಾಯಾಲಯದ ಆದೇಶಕ್ಕೆ ಸಂಬಂಧಿಸಿದಂತೆ ಸರ್ಕಾರವು ಮೆಮೊ ಸಲ್ಲಿಸಿದೆ. ದಾಖಲೆಗಳ ಪರಿಶೀಲನೆ ಮತ್ತು ಪೊಲೀಸರ ವರದಿ ಆಧರಿಸಿ 132 ಅಂತಿಮ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅವರಿಗೆಲ್ಲರಿಗೂ ಸೆಪ್ಟೆಂಬರ್ 15 ರಂದು ನೇಮಕಾತಿ ಆದೇಶವನ್ನು ಅಭಿಯೋಜನಾ ಇಲಾಖೆ ಕಳುಹಿಸಿದೆ. ದಾಖಲೆ ಪರಿಶೀಲನೆ ಇತರೆ ಕಾರಣಗಳಿಗಾಗಿ 143 ಅಭ್ಯರ್ಥಿಗಳ ಪೈಕಿ 11 ಮಂದಿಗೆ ನೇಮಕಾತಿ ಆದೇಶ ನೀಡಲಾಗಿಲ್ಲ ಎಂದು ತಿಳಿಸಲಾಗಿದೆ ಎಂದು ವಕೀಲರು ವಿವರಿಸಿದರು.

ಇದನ್ನೂ ಓದಿ:ದೊಡ್ಡ ಮಟ್ಟದ ಒಳ್ಳೆಯ ಕಾರ್ಯಗಳನ್ನು ಮಾಡುವಾಗ ಸಣ್ಣ ಕೆಡಕುಗಳು ಸಾಮಾನ್ಯ : ಹೈಕೋರ್ಟ್

ಜೊತೆಗೆ ರಾಜ್ಯ ಸರ್ಕಾರವು 49 ಮಂದಿ ಸಹಾಯಕ ಸರ್ಕಾರಿ ಅಭಿಯೋಜಕರಿಗೆ ಹಿರಿಯ ಸರ್ಕಾರಿ ಅಭಿಯೋಜಕರ ಹುದ್ದೆಗೆ ಪದೋನ್ನತಿ ನೀಡಿರುವುದರಿಂದ ಖಾಲಿಯಾದ ಹುದ್ದೆ ತುಂಬಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದ್ದು, ಈ ಪ್ರಕ್ರಿಯೆಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಗೃಹ ಇಲಾಖೆಯ ಅಧೀನ ಕಾರ್ಯದರ್ಶಿಯ ಪರವಾಗಿ ಪ್ರಮಾಣಪತ್ರವನ್ನು ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು.

ಅಷ್ಟೇ ಅಲ್ಲದೇ, ಅಂತಿಮವಾಗಿ ಕ್ರಮ ಕೈಗೊಂಡ ವರದಿಯನ್ನು ಮುಂದಿನ ಮೂರು ವಾರಗಳ ನಂತರ ಪ್ರಮಾಣ ಪತ್ರದ ಮೂಲಕ ಸಲ್ಲಿಸುವಂತೆ ಸೂಚನೆ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿದೆ.

ಇದನ್ನೂ ಓದಿ:ಪೋಷಕರ ತಪ್ಪಿನಿಂದ ಮಗು ತೊಂದರೆ ಅನುಭವಿಸಬಾರದು: ಜನನ ಪ್ರಮಾಣ ಪತ್ರ ಸರಿಪಡಿಸಲು ಹೈಕೋರ್ಟ್​ ಸೂಚನೆ

ABOUT THE AUTHOR

...view details