ಕರ್ನಾಟಕ

karnataka

ETV Bharat / state

ಪಾಲಿಕೆ ಆಡಳಿತ ವಿಕೇಂದ್ರೀಕರಣ: ನಾಲ್ವರು ವಿಶೇಷ ಆಯುಕ್ತರ ನೇಮಕಕ್ಕೆ ಸರ್ಕಾರದ ನಿರ್ಧಾರ

15 ದಿನಗಳಲ್ಲಿ ಬೆಂಗಳೂರು ಶಾಸಕರ ಜತೆ ಸಭೆ ನಡೆಸಲು ತೀರ್ಮಾನಿಸಿದ್ದು, ಬೆಂಗಳೂರು ಅಭಿವೃದ್ಧಿ ಬಗ್ಗೆ ಸಮಗ್ರವಾಗಿ ಸಮಾಲೋಚನೆ ನಡೆಸಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಏನೆಲ್ಲಾ ಕಾರ್ಯಕ್ರಮಗಳನ್ನು ರೂಪಿಸಬೇಕು ಅದನೆಲ್ಲ ಮಾಡುತ್ತೇವೆ‌ ಎಂದು ಸಿಎಂ ಬಿಎಸ್​​​ವೈ ಹೇಳಿದ್ದಾರೆ.

ಪಾಲಿಕೆ ಆಡಳಿತ ವಿಕೇಂದ್ರೀಕರಣ: ನಾಲ್ವರು ವಿಶೇಷ ಆಯುಕ್ತರ ನೇಮಕಕ್ಕೆ ಸರ್ಕಾರ ನಿರ್ಧಾರ

By

Published : Sep 6, 2019, 9:24 PM IST

ಬೆಂಗಳೂರು:ಪಾಲಿಕೆ ಆಡಳಿತ ವಿಕೇಂದ್ರೀಕರಣಕ್ಕೆ ಮುಂದಾಗಿರುವ ಸರ್ಕಾರ ಎರಡು ವಲಯಗಳಂತೆ ಎಂಟು ವಲಯಗಳಿಗೆ ತಲಾ ನಾಲ್ಕು ವಿಶೇಷ ಆಯುಕ್ತರನ್ನು ನೇಮಿಸಲು ನಿರ್ಧರಿಸಿದೆ.

ಪಾಲಿಕೆ ಆಡಳಿತ ವಿಕೇಂದ್ರೀಕರಣ: ನಾಲ್ವರು ವಿಶೇಷ ಆಯುಕ್ತರ ನೇಮಕಕ್ಕೆ ಸರ್ಕಾರ ನಿರ್ಧಾರ

ವಿಧಾನಸೌಧದಲ್ಲಿ ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಸಭೆ ನಡೆಸಿದ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, ಎರಡು ವಲಯಗಳಂತೆ ಎಂಟು ಪಾಲಿಕೆ ವಲಯಗಳಿಗೆ ಒಟ್ಟು ನಾಲ್ಕು ವಿಶೇಷ ಆಯುಕ್ತರನ್ನು ನೇಮಿಸಲು ನಿರ್ಧರಿಸಲಾಗಿದೆ. ಆ ಮೂಲಕ ವಲಯವಾರು ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಲು ಯೋಜಿಸಿದ್ದೇವೆ ಎಂದು ತಿಳಿಸಿದರು.

ಜತೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಸಹಾಯ ವಾಣಿ ಪ್ರಾರಂಭಿಸಲು ನಿರ್ಧರಿಸಲಾಗಿದೆ. ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಅಧಿಕಾರಿಗಳು ವಾರ್ಡುವಾರು ಜನ ಸಂಪರ್ಕ ಸಭೆ ನಡೆಸಲು ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ಪ್ರತಿ ವಾರ ಜನಸ್ಪಂದನ ಕಾರ್ಯಕ್ರಮ:

ಪ್ರತಿ ವಾರ ವಾರ್ಡ್​​ಗಳಲ್ಲಿ ಅಧಿಕಾರಿಗಳು ನಾಗರಿಕರ ಜತೆ ಜನಸ್ಪಂದನ ಕಾರ್ಯಕ್ರಮ ನಡೆಸಿ ಸಾರ್ವಜನಿಕರ ಕುಂದು ಕೊರತೆ ನೀಗಿಸಲು ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ತಿಳಿಸಿದರು.

ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳು ಆಗದಂತೆ ಕ್ರಮ ವಹಿಸಲು ಸಿಎಂ ಸೂಚನೆ ನೀಡಿದ್ದಾರೆ. ತ್ಯಾಜ್ಯ ಸಂಸ್ಕರಣಾ ಘಟಕಗಳು ತಮ್ಮ ಸಾಮರ್ಥ್ಯದ ಶೇ.10 ರಷ್ಟು ಪ್ರಮಾಣದಲ್ಲಿ ಮಾತ್ರ ಕೆಲಸ ಮಾಡುತ್ತಿದೆ. ಇದನ್ನು ಘಟಕಗಳ ಗರಿಷ್ಠ ಸಾಮರ್ಥ್ಯವಾದ 2000 ಟನ್ ರಷ್ಟು ತ್ಯಾಜ್ಯ ವಿಲೇವಾರಿ ಮಾಡಲು ಸೂಚನೆ ನೀಡಲಾಗಿದೆ. ಜತೆಗೆ ಈಗ 3 ಸಾವಿರ ರೂ.ಗೆ ಗೊಬ್ಬರ ಮಾರಾಟ ಮಾಡಲಾಗುತ್ತಿದ್ದು, ಸಂಸ್ಕರಣಾ ಘಟಕಗಳಲ್ಲಿ ಉತ್ಪಾದಿಸುವ ಗೊಬ್ಬರದ ದರವನ್ನು 1 ಸಾವಿರಕ್ಕೆ ಇಳಿಸಿ ರೈತರಿಗೆ ಸರಬರಾಜು ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಇನ್ನು ಸಬ್ ಅರ್ಬನ್ ರೈಲ್ವೆ ಯೋಜನೆಯ ಮೇಲ್ವಿಚಾರಣೆ ಜವಾಬ್ದಾರಿಯನ್ನು ಸಂಸದ ಪಿ.ಸಿ.ಮೋಹನ್ ಅವರಿಗೆ ನೀಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಆರ್.ಅಶೋಕ್ ಇಲ್ಲ:

ಇಂದು ನಡೆದ ಬೆಂಗಳೂರು ಅಭಿವೃದ್ಧಿ ಸಭೆಯಲ್ಲಿ ಸಚಿವ ಆರ್.ಅಶೋಕ್​ಗೆ ಆಹ್ವಾನ ಇದ್ದಿಲ್ಲ. ಬೆಂಗಳೂರು ಅಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿದ್ದ ಬೆಂಗಳೂರಿನ ಪ್ರಭಾವಿ ನಾಯಕ ಆರ್.ಅಶೋಕ್ ರನ್ನು ಸಭೆಗೆ ಕರೆಯದೇ ಇರುವುದು ಅಚ್ಚರಿ ಮೂಡಿಸಿದೆ.

ಡಿಸಿಎಂ ಅಶ್ವತ್ಥ್ ನಾರಾಯಣ್ ಸಕ್ರಿಯವಾಗಿ ಬೆಂಗಳೂರು ಸಂಬಂಧಿತ ಸಭೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಅಶ್ವತ್ಥ್ ನಾರಾಯಣ್, ಸಂಸದ ಪಿ.ಸಿ.ಮೋಹನ್, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹಾಗೂ ಶಾಸಕ ಎಸ್.ಆರ್.ವಿಶ್ವನಾಥ್ ಬೆಂಗಳೂರು ಸಂಬಂಧ ಸಿಎಂ ಬಳಿ ಅಹವಾಲು ತೋಡಿಕೊಂಡಿದ್ದರು. ಈ ಸಂಬಂಧ ಅವರನ್ನು ಕರೆಸಿ ಸಿಎಂ ಸಭೆ ನಡೆಸಿದ್ದಾರೆ. ಇಲ್ಲಿ ಯಾರನ್ನೂ ಬಿಟ್ಟು ಸಭೆ ಮಾಡಿಲ್ಲ. 15 ದಿನದಲ್ಲಿ ಬೆಂಗಳೂರಿನ ಎಲ್ಲ ಶಾಸಕರನ್ನು ಕರೆದು ಸಭೆ ನಡೆಸಲಾಗುತ್ತದೆ. ಇದರ ಹಿಂದೆ ಯಾವುದೇ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು.

ABOUT THE AUTHOR

...view details