ಕರ್ನಾಟಕ

karnataka

ETV Bharat / state

ನಾಡಗೀತೆ ಗೊಂದಲಕ್ಕೆ ತೆರೆ: 2.30 ನಿಮಿಷಕ್ಕೆ ನಾಡಗೀತೆ ಕಡಿತಗೊಳಿಸಲು ಸರ್ಕಾರ ಸಮ್ಮತಿ - ಈಟಿವಿ ಭಾರತ್​ ಕರ್ನಾಟಕ

ನಾಡಗೀತೆ ದಾಟಿ ಮತ್ತು ನಿರ್ದಿಷ್ಟ ಸಮಯ ನಿಗದಿ. ಎರಡು ನಿಮಿಷ ಮೂವತ್ತು ಸೆಕೆಂಡ್​ಗಳಲ್ಲಿ ನಾಡಗೀತೆ ಹಾಡುವುದಕ್ಕೆ ಸರ್ಕಾರ ಸಮ್ಮತಿ.

government-agrees-to-cut-state-anthem-c-m-bommai-tweet
ನಾಡಗೀತೆ ಗೊಂದಲಕ್ಕೆ ತೆರೆ

By

Published : Sep 23, 2022, 8:18 PM IST

ಬೆಂಗಳೂರು: ನಾಡಗೀತೆಗೆ ನಿರ್ದಿಷ್ಟ ಸಮಯ ಹಾಗೂ ದಾಟಿ ನಿಗದಿ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ದಶಕಗಳಿಂದ ಇದ್ದ ಗೊಂದಲಕ್ಕೆ ರಾಜ್ಯ ಸರಕಾರ ಪೂರ್ಣ ವಿರಾಮ ಹಾಕಿದೆ. ಯಾವುದೇ ಆಲಾಪ ಹಾಗೂ ಪುನರಾವರ್ತನೆ ಇಲ್ಲದಂತೆ ಎರಡು ನಿಮಿಷ ಮೂವತ್ತು ಸೆಕೆಂಡ್​ಗಳಲ್ಲಿ ನಾಡಗೀತೆ ಹಾಡಲು ಸಾಧ್ಯ ಎಂದು ತಜ್ಞರು ನೀಡಿದ ವರದಿ ಆಧರಿಸಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಲ್ಲಿಸಿದ್ದ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುಮೋದನೆ ನೀಡಿದ್ದಾರೆ.

ಖ್ಯಾತ ರಾಗ ಸಂಯೋಜಕ ದಿ. ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ದಾಟಿಯಲ್ಲಿ ಕುವೆಂಪು ವಿರಚಿತ ನಾಡಗೀತೆಯ ಒಂದಕ್ಷರವನ್ನೂ ಬಿಡದಂತೆ ಹಾಡುವುದಕ್ಕೆ ಸರ್ಕಾರ ಸಮ್ಮತಿ ಸೂಚಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಬೊಮ್ಮಾಯಿ, ರಾಷ್ಟ್ರಕವಿ ಕುವೆಂಪು ವಿರಚಿತ ನಾಡಿನ ಹೆಮ್ಮೆಯ ನಾಡಗೀತೆ ಜಯಭಾರತ ಜನನಿಯ ತನುಜಾತೆಗೆ ದಾಟಿ ಹಾಗೂ ಕಾಲಮಿತಿಯನ್ನು ನಿಗದಿ ಮಾಡಿದ್ದೇವೆ. ಸಂಗೀತ ವಿದೂಷಿ ಎಸ್ ಆರ್. ಲೀಲಾವತಿ ಅಧ್ಯಕ್ಷತೆ ಸಮಿತಿ ಶಿಫಾರಸು ಮಾಡಿದ ಪ್ರಕಾರ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯಲ್ಲಿ, ಇನ್ನು ಮುಂದೆ ನಾಡಗೀತೆಯನ್ನು 2 ನಿಮಿಷ 30 ಸೆಕೆಂಡ್​ಗಳಲ್ಲಿ ಹಾಡಲಾಗುತ್ತದೆ ಎಂದಿದ್ದಾರೆ.

ಹೀಗಾಗಿ ಇನ್ನು ಮುಂದೆ ರಾಷ್ಟ್ರಕವಿ ಕುವೆಂಪು ರಚಿಸಿರುವ "ಜಯಭಾರತ ಜನನಿಯ ತನುಜಾತೆ" ನಾಡಗೀತೆಯಾಗಿ ಅಂಗೀಕೃತಗೊಂಡ ರೂಪದಲ್ಲೇ ಹಿಂದಿನ ಒಂದಕ್ಷರವನ್ನೂ ಬಿಡದಂತೆ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆ ಮಾಡಿದ ದಾಟಿಯಲ್ಲೇ ಹಾಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ :ಗಾಂಧಿ ಜಯಂತಿಯೊಳಗೆ ನಾಡಗೀತೆ ಅವಧಿ, ರಾಗ ಸಂಯೋಜನೆ ಪರಿಷ್ಕರಣೆ ಬಗ್ಗೆ ನಿರ್ಧಾರ: ಸಚಿವ ಸುನಿಲ್ ಕುಮಾರ್

ಏನಿದು ನಾಡಗೀತೆ ವಿವಾದ?:ನಾಡಗೀತೆಗೆ ದಾಟಿ ಹಾಗೂ ಕಾಲಮಿತಿ ನಿಗದಿ ಮಾಡುವ ವಿಚಾರ 2005 ರಿಂದಲೂ ನನೆಗುದಿಗೆ ಬಿದ್ದಿತ್ತು. ಕೆಲವು ಕಾರ್ಯಕ್ರಮಗಳಲ್ಲಿ ಏಳರಿಂದ ಎಂಟು ನಿಮಿಷಗಳ ಕಾಲ ನಾಡಗೀತೆ ಹಾಡುತ್ತಿದ್ದರು. ಇದು ಅಶಕ್ತರು, ವಿಕಲಚೇತನರಿಗೆ ಅನಾನುಕೂಲವಾಗುತ್ತಿತ್ತು. ಹೀಗಾಗಿ ದಾಟಿ ಹಾಗೂ ಕಾಲ ಮಿತಿಯ ಬಗ್ಗೆ ಸ್ಪಷ್ಟತೆ ತರಬೇಕೆಂಬ ಒತ್ತಾಯ ಸರಕಾರದ ಮುಂದೆ ಇತ್ತು.

2006ರಲ್ಲಿ ಸಾಹಿತಿ ವಸಂತ ಕನಕಾಪುರ ನೇತೃತ್ವದಲ್ಲಿ ಸರ್ಕಾರ ಒಂದು ಸಮಿತಿ ರಚಿಸಿತ್ತು. ಆದರೆ ಅವರ ಅಕಾಲಿಕ ಮರಣದ ಹಿನ್ನೆಲೆಯಲ್ಲಿ ಚನ್ನವೀರ ಕಣವಿ ಅಧ್ಯಕ್ಷತೆಯಲ್ಲಿ ಸರ್ಕಾರ ಮತ್ತೊಂದು ಸಮಿತಿ ರಚನೆ ಮಾಡಿತ್ತು. ಆದರೆ ಈ ಸಮಿತಿಯ ಸದಸ್ಯರಲ್ಲೇ ಸ್ಪಷ್ಟತೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಹಿರಿಯ ಸಂಗೀತ ವಿದೂಷಿ ಎಸ್.ಆರ್.ಲೀಲಾವತಿ ಅಧ್ಯಕ್ಷತೆಯಲ್ಲಿ 18 ಜನರ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಮೈಸೂರು ಅನಂತಸ್ವಾಮಿ ರಾಗಸಂಯೋಜನೆಯಲ್ಲಿ ಎರಡು ನಿಮಿಷ ಮೂವತ್ತು ಸೆಕೆಂಡ್​ಗಳಲ್ಲಿ ನಾಡಗೀತೆ ಹಾಡಬೇಕೆಂದು ಶಿಫಾರಸು ಮಾಡಿದೆ.

ಕುವೆಂಪು ವಿರಚಿತ ನಾಡಗೀತೆ 'ಜಯಭಾರತ ಜನನಿಯ ತನುಜಾತೆ'ಗೆ ದಾಟಿ ಹಾಗೂ ಕಾಲಮಿತಿಯನ್ನು ನಿಗದಿ ಮಾಡಲಾಗಿದೆ ಎಂಬುದನ್ನು ತಿಳಿಸಲು ಹರ್ಷವೆನಿಸುತ್ತಿದೆ. ಎಸ್.ಆರ್.ಲೀಲಾವತಿ ಅಧ್ಯಕ್ಷತೆಯ ಸಮಿತಿ ಶಿಫಾರಸು ಮಾಡಿದ ಪ್ರಕಾರ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯಲ್ಲಿ ಇನ್ನು ಎರಡು ನಿಮಿಷ ಮೂವತ್ತು ಸೆಕೆಂಡ್​​ಗಳಲ್ಲಿ ನಾಡಗೀತೆ ಹಾಡಲಾಗುತ್ತದೆ ಎಂದು ಟ್ವೀಟ್ ಮೂಲಕ ಸಿಎಂ ತಿಳಿಸಿದ್ದಾರೆ.

ಇದನ್ನೂ ಓದಿ :ನಾಡಗೀತೆ ಅವಧಿ ಕಡಿತಗೊಳಿಸುವ ಪ್ರಸ್ತಾವ: ಕಸಾಪದಿಂದ ಸಚಿವರಿಗೆ ಪತ್ರ

ABOUT THE AUTHOR

...view details