ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದ ಪ್ರಮಾಣ ಹೆಚ್ಚಿಸಲು ಈ ವರ್ಷವೂ ಶೇ. 10 ರಷ್ಟು ಕೃಪಾಂಕ ನೀಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್‌ಇಎಬಿ) ನಿರ್ಧರಿಸಿದೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಕ್ಕೂ ಕಡಿಮೆ ಅಥವಾ ಒಟ್ಟಾರೆ ಕನಿಷ್ಠ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಶೇ.10 ರಷ್ಟು ಕೃಪಾಂಕವನ್ನು ನೀಡುವ ಮೂಲಕ ಉತ್ತೀರ್ಣದ ಸಮೀಪಕ್ಕೆ ಬಂದು ಅನುತ್ತೀರ್ಣಗೊಳ್ಳುವ ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗಲು ಅವಕಾಶ ಕಲ್ಪಿಸಿದೆ.
ಕೋವಿಡ್ ಕಾರಣದಿಂದಾಗಿ 2020ರಲ್ಲಿ ಪರೀಕ್ಷೆ ನಡೆಸದೆ ಎಲ್ಲ ವಿದ್ಯಾರ್ಥಿಗಳನ್ನೂ ಉತ್ತೀರ್ಣಗೊಳಿಸಲಾಗಿತ್ತು. ಆದರೆ 2021 ಮತ್ತು 2022 ರಲ್ಲಿ ಶೇ. 10 ರಷ್ಟು ಕೃಪಾಂಕ ನೀಡಿ ಅನುತ್ತೀರ್ಣಗೊಳ್ಳುವ ಹಂತದಲ್ಲಿದ್ದ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ನಿರ್ಧಾರ ಮಾಡಲಾಗಿತ್ತು. ಕೋವಿಡ್ ಚೇತರಿಕೆ ನಂತರವೂ ಕಲಿಕೆ ಮೇಲೆ ಕೋವಿಡ್ ನಿಂದಾದ ಪರಿಣಾಮದಿಂದ ಮಕ್ಕಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳದ ಕಾರಣ ಈ ವರ್ಷವೂ ಕೃಪಾಂಕ ನೀಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ.
ಕೃಪಾಂಕ ನೀಡುವ ಕುರಿತು ಮೌಲ್ಯಮಾಪಕರಿಗೆ ಮೌಖಿಕ ಸೂಚನೆ ನೀಡಲಿದ್ದು, ಅದರಂತೆ ಮೌಲ್ಯಮಾಪನ ಕಾರ್ಯ ಮುಗಿದ ಫಲಿತಾಂಶ ಪ್ರಕಟಿಸಲು ಸಿದ್ಧತೆ ನಡೆಸುವ ವೇಳೆ ಉತ್ತೀರ್ಣಕ್ಕೆ ಬೇಕಾದ ಕನಿಷ್ಠ ಅಂಕ ಪಡೆಯುವ ಸಮೀಪದ ಅಂಕ ಗಳಿಸಿದವರಿಗೆ ಕೃಪಾಂಕ ಸೇರಿಸಿ ಫಲಿತಾಂಶ ಪ್ರಕಟಿಸಲಾಗುತ್ತದೆ.