ಕರ್ನಾಟಕ

karnataka

ETV Bharat / state

ಆರ್ಟ್ ಆಫ್ ಲಿವಿಂಗ್ ಅವರಣದಲ್ಲಿ ಡಿ.9 ರಿಂದ 'ಸಿರಿಧಾನ್ಯ, ಸಾವಯವ ಮತ್ತು ನೈಸರ್ಗಿಕ ಕೃಷಿ ಉತ್ಪನ್ನಗಳ ಮೇಳ'

ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನು ಜನಾಂದೋಲನವನ್ನಾಗಿಸಲು ಬೆಂಗಳೂರು ಕೃಷಿ ವಿವಿ ಆಶ್ರಯದಲ್ಲಿ ನೈಸರ್ಗಿಕ ಕೃಷಿ ಉತ್ಪನ್ನಗಳ ಮೇಳವನ್ನು ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಅವರಣದಲ್ಲಿ ಡಿಸೆಂಬರ್ 9ರಿಂದ 11ರವರೆಗೆ ಹಮ್ಮಿಕೊಳ್ಳಲಾಗಿದೆ.

cereal-fair
ಸಿರಿಧಾನ್ಯ ಪ್ರದರ್ಶನ ಮಾಡಿದ ಕೃಷಿ ವಿವಿ ಕುಲಪತಿ ಸುರೇಶ,ಡಾ. ಬಿ.ಬೋರಯ್ಯ ಮತ್ತಿತರರು.

By ETV Bharat Karnataka Team

Published : Dec 7, 2023, 7:46 PM IST

ಬೆಂಗಳೂರು: ಅಂತರರಾಷ್ಟ್ರೀಯ ಸಿರಿಧಾನ್ಯದ ವರ್ಷದ ಹಿನ್ನೆಲೆಯಲ್ಲಿ ಮತ್ತು ಸುರಕ್ಷಿತ ಸುಸ್ಥಿರ, ಆರೋಗ್ಯಕರ ಭವಿಷ್ಯದೆಡೆಗೆ ಜನಾಂದೋಲನ ಮಾಡುವ ನಿಟ್ಟಿನಲ್ಲಿ ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಅವರಣದಲ್ಲಿ ಡಿಸೆಂಬರ್ 9ರಿಂದ 11ರವರೆಗೆ ಜಾಗತಿಕ ಮಟ್ಟದ ಸಿರಿಧಾನ್ಯ, ಸಾವಯವ ಮತ್ತು ನೈಸರ್ಗಿಕ ಕೃಷಿ ಉತ್ಪನ್ನಗಳ ಮೇಳ ಆಯೋಜಿಸಲಾಗುತ್ತಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ವಿ.ಸುರೇಶ ಹೇಳಿದರು.

ಬೆಂಗಳೂರಿನ ಪ್ರೆಸ್ ಕ್ಲಬ್​​​ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶ್ರೀ ರವಿಶಂಕರ್ ಗುರೂಜಿಯವರ ಸಾನ್ನಿಧ್ಯದಲ್ಲಿ ಸಿರಿಧಾನ್ಯಗಳ ಚಿಂತನ, ಮಂಥನಕ್ಕೆ ಅಗತ್ಯ ಸಿದ್ಧತೆ ನಡೆಯುತ್ತಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಮೇಳ ಆಯೋಜಿಸುತ್ತಿದ್ದು, ಸಿರಿಧಾನ್ಯಗಳನ್ನು ತಮ್ಮ ಆಹಾರದ ಒಂದು ಭಾಗವಾಗಿ ಮಾಡುವ ಜೊತೆಗೆ ಆರೋಗ್ಯ ಪ್ರಜ್ಞೆ ಮತ್ತು ಭೂಸ್ನೇಹಿ ವಾತಾವರಣ ಸೃಷ್ಟಿಸುವ ಉದ್ದೇಶವಿದೆ.

ಸಿರಿಧಾನ್ಯಗಳು ಸಣ್ಣ ಉದ್ದಿಮೆಗಳು, ರೈತರು ಮತ್ತು ಸಮುದಾಯಗಳನ್ನು ಒಳಗೊಳ್ಳುವ ಮೂಲಕ ಉನ್ನತ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವ ಗುರಿ ಇದೆ. ವಾಣಿಜ್ಯದ ದೃಷ್ಟಿಯಿಂದ ಮಾರಾಟಗಾರರು ಮತ್ತು ಖರೀದಿದಾರರಿಗೆ ಇದು ಸೂಕ್ತ ವೇದಿಕೆಯಾಗಲಿದೆ ಎಂದು ತಿಳಿಸಿದರು.

180ಕ್ಕೂ ಅಧಿಕ ಮಳಿಗೆ: ಸಿರಿಧಾನ್ಯ ಮೇಳದಲ್ಲಿ 180ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಿದೆ. ಕೃಷಿ ವಿಜ್ಞಾನಿಗಳು ಮತ್ತು ರೈತರ ನಡುವೆ ಸಂವಾದ ಏರ್ಪಡಿಸಲಾಗಿದೆ. ಸಿರಿಧಾನ್ಯಗಳ ಸಂಸ್ಕರಣೆ ಮಾಡುವ ಆಧುನಿಕ ಯಂತ್ರೋಪಕರಣ ತಂತ್ರಜ್ಞಾನ ಪ್ರದರ್ಶಿಸುತ್ತಿದ್ದು, ಸಿರಿಧಾನ್ಯಗಳ ಚಿಲ್ಲರೆ, ಸಗಟು ಮಾರಾಟಗಾರರು, ವ್ಯಾಪಾರಿಗಳು, ಆಹಾರ ಉತ್ಪಾದಕರಿಗೆ ಇದು ಉಜ್ವಲ ಅವಕಾಶ ಎಂದು ವಿವರಿಸಿದರು.

ಡಿಸೆಂಬರ್‌ 9ರಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಮೇಳವನ್ನು ಉದ್ಘಾಟಿಸುವರು. ಡಿಸೆಂಬರ್ 10ರಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಿರಿಧಾನ್ಯ ಸಾವಯವ ಮತ್ತು ನೈಸರ್ಗಿಕ ಕೃಷಿಯ ಕುರಿತು ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸುವರು ಎಂದು ಹೇಳಿದರು.

ಸಿರಿಧಾನ್ಯ ವರ್ಷಾಚರಣೆ: ವಿಶ್ವದಾದ್ಯಂತ 70ಕ್ಕೂ ಅಧಿಕ ರಾಷ್ಟ್ರಗಳು ಸಿರಿಧಾನ್ಯ ವರ್ಷಾಚರಣೆಗೆ ಬೆಂಬಲ ಸೂಚಿಸಿವೆ. ಸುಸ್ಥಿರ ಕೃಷಿಯಲ್ಲಿ ಸಿರಿಧಾನ್ಯಗಳ ಮಹತ್ವದ ಪಾತ್ರ ಮತ್ತು ಸ್ಮಾರ್ಟ್ ಸೂಪರ್ ಫುಡ್ ಆಗಿ ಅದರ ಪ್ರಯೋಜನಗಳ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸಲು ಮೇಳ ಸಹಾಯ ಮಾಡಲಿದೆ. ಭಾರತ 170 ಲಕ್ಷ ಟನ್ ಗಳಿಗಿಂತ ಅಧಿಕ ಉತ್ಪಾದನೆಯೊಂದಿಗೆ ಸಿರಿಧಾನ್ಯಗಳ ಜಾಗತಿಕ ಕೇಂದ್ರವಾಗಲೂ ಪ್ರಯತ್ನಿಸುತ್ತಿದೆ. ಇದು ಏಷ್ಯಾದಲ್ಲಿ ಉತ್ಪಾದಿಸುವ ಸಿರಿಧಾನ್ಯಗಳ ಶೇ.80ಕ್ಕೂ ಹೆಚ್ಚು ಭಾಗವಾಗಿದೆ. ಭಾರತಕ್ಕೆ ಸಿರಿಧಾನ್ಯಗಳ ಬಳಕೆಯ ಭವ್ಯ ಪರಂಪರೆ ಸಂಪ್ರದಾಯ ಇತಿಹಾಸವಿದೆ ಎಂದು ಹೇಳಿದರು.

ಸಂಸ್ಕೃತಿ, ಸಾಹಿತ್ಯದಲ್ಲಿ ಸಿರಿಧಾನ್ಯ: ಈ ವೇಳೆ ಶ್ರೀ ನೈಸರ್ಗಿಕ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಂಗನಾಥ್ ಪ್ರಸಾದ್ ಮಾತನಾಡಿ, ನಮ್ಮ ಆಹಾರ ಪದ್ಧತಿಗಳಲ್ಲಿ ಸಿರಿಧಾನ್ಯ ಬಳಕೆ ಹಾಸುಹೊಕ್ಕಾಗಿರುವುದನ್ನು ನಮ್ಮ ಸಾಹಿತ್ಯ, ದಾಖಲೆಗಳು ಸಾರುತ್ತವೆ. ಕಾಳಿದಾಸನ ಅಭಿಜ್ಞಾನ ಶಾಕುಂತಲದಲ್ಲಿ ಕಣ್ವ ಮಹರ್ಷಿಗಳು ಶಾಕುಂತಲೆಯನ್ನು ದುಷ್ಯಂತನ ಆಸ್ಥಾನಕ್ಕೆ ಬೀಳ್ಕೊಡುವಾಗ ನವಣೆ ಸುರಿದರೆಂಬ ಉಲ್ಲೇಖವಿದೆ. ಯಜುರ್ವೇದದಲ್ಲಿ ಉರುಟು ಧಾನ್ಯಗಳ ಪ್ರಸ್ತಾಪವಿದೆ. ಸುಶ್ರುತ ವರ್ಗೀಕರಿಸಿದ ಧಾನ್ಯವರ್ಗದಲ್ಲಿ ಒರಟು ಧಾನ್ಯಗಳು ಬರುತ್ತವೆ. ಕನ್ನಡದ ಸುಪ್ರಸಿದ್ಧ ರಚನೆ, ಪುರಂದರದಾಸರ 'ರಾಗಿ ತಂದೀರಾ ನಿತ್ಯಕೆ' ಕೃತಿಯಲ್ಲಿ ರಾಗಿಗೆ ಇದ್ದ ಮಹತ್ವವನ್ನು ತಿಳಿಸುತ್ತದೆ. ಕನಕದಾಸರು ರಾಮದಾನ ಚರಿತ್ರೆಯಲ್ಲಿ ರಾಗಿಯ ಪ್ರಸ್ತಾವ ಮಾಡಿರುವುದನ್ನು ನಾವು ಕಾಣುತ್ತೇವೆ ಎಂದರು.

ರೈತರ ವರಮಾನ ಹೆಚ್ಚಿಸುವ ಸಿರಿಧಾನ್ಯ: ಪರಿಸರಸ್ನೇಹಿ, ಕೃಷಿ, ಜಲದಕ್ಷತೆಯ ಬೆಳೆ, ಪೌಷ್ಟಿಕಾಂಶ ದೃಷ್ಟಿಗಳಿಂದಲೂ ಸಿರಿಧಾನ್ಯಗಳು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ ಅನೇಕ ಅಂಶಗಳಿಗೆ ಪೂರಕವಾಗಿವೆ. ರೈತರ ವರಮಾನ ಹೆಚ್ಚಿಸುವ, ಜೀವನೋಪಾಯ ಕಲ್ಪಿಸುವ, ಸರ್ವರಿಗೂ ಆಹಾರ ಮತ್ತು ಪೌಷ್ಟಿಕಾಂಶಗಳನ್ನು ಒದಗಿಸುವ ಸಾಮರ್ಥ್ಯ ಸಿರಿಧಾನ್ಯಗಳಿಗಿದೆ.

ಸಿಂಧೂ ನಾಗರಿಕತೆಯಲ್ಲಿ ಈ ಧಾನ್ಯಗಳ ಆರಂಭಿಕ ಪುರಾವೆಗಳು ದೊರೆತಿವೆ. ಭಾರತೀಯ ಸಿರಿಧಾನ್ಯಗಳು, ಪಾಕವಿಧಾನಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಜನಾಂದೋಲನವನ್ನಾಗಿ ಮಾಡಲು ಸರ್ಕಾರದ ಜೊತೆ ನಾವು ಕೈಜೋಡಿಸಿದ್ದೇವೆ. ಸಿರಿಧಾನ್ಯಗಳಿಗೆ ಸಂಬಂಧಿಸಿದ ಜಾಗತಿಕ ಆಂದೋಲನ ಆಹಾರ ಭದ್ರತೆಯ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಕೆವಿಕೆ ಸಾವಯವ ಕೃಷಿ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಬಿ.ಬೋರಯ್ಯ, ಪ್ರಾಧ್ಯಾಪಕರಾದ ಡಾ.ಟಿ.ಈ.ನಾಗರಾಜ ಮತ್ತು ನೈಸರ್ಗಿಕ ಸಂಸ್ಥೆಯ ಸಿರಿಧಾನ್ಯ ಮತ್ತು ತೈಲ ಬೀಜ ಪರಿಣಿತ ಉದಯ ಕುಮಾರ ಕೊಳ್ಳಿಮಠ ಉಪಸ್ಥಿತರಿದ್ದರು.

ಇದನ್ನೂಓದಿ:ಬೆಳಗಾವಿ ಚೆನ್ನಮ್ಮ ವೃತ್ತದಿಂದ ರೈತರ ಪಾದಯಾತ್ರೆ ಆರಂಭ: ರೈತರಿಗೆ ಸಾಥ್ ಕೊಟ್ಟ ದರ್ಶನ್​ ಪುಟ್ಟಣ್ಣಯ್ಯ

ABOUT THE AUTHOR

...view details