ಬೆಂಗಳೂರು: ನಗರದಲ್ಲಿ ಸಿಎಂ ಯಡಿಯೂರಪ್ಪ ಅವರ ಮನೆ ಮುಂದೆ ಪ್ರತಿಭಟನೆ ಮಾಡಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತೆಯರ ವಿರುದ್ಧ ಪ್ರಕರಣ ದಾಖಲಾಗಿದೆ.
ಕುಮಾರ ಕೃಪಾ ರಸ್ತೆಯಲ್ಲಿರುವ ಸಿಎಂ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತೆಯರನ್ನು ತಡೆದ ಪೊಲೀಸರು ಭಿತ್ತಿ ಪತ್ರ ಕಿತ್ತುಕೊಂಡು ಬಂಧಿಸಿದ್ದಾರೆ. ಯಾವುದೇ ಮುನ್ಸೂಚನೆ ನೀಡದೆ, ಪರವಾನಗಿ ಪಡೆಯದೆ ಸಿಎಂ ನಿವಾಸಕ್ಕೆ ಆಗಮಿಸಿದ ಕಾರ್ಯಕರ್ತೆಯರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಬೇಕು ಎಂದು ಪಟ್ಟು ಹಿಡಿದರು. ಆದರೆ ಭೇಟಿಗೆ ಸಿಎಂ ಪರವಾನಗಿ ಇಲ್ಲದ ಹಿನ್ನೆಲೆ ಪೊಲೀಸರು ಕೃಷ್ಣಾದ ಮುಂಭಾಗದಲ್ಲೇ ತಡೆದರು.
ಮೊದಲೇ ತಿಳಿಸದ ಹಿನ್ನೆಲೆ ಸೂಕ್ತ ಸಂಖ್ಯೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಸಹ ಅಲ್ಲಿ ಇರಲಿಲ್ಲ. ಕೆಲ ಕಾಲ ಪುರುಷ ಸಿಬ್ಬಂದಿಯೇ ಕಾರ್ಯಕರ್ತೆಯರನ್ನು ತಡೆಯುವ ಪ್ರಯತ್ನ ನಡೆಸಿ ಹೊರಗಿನಿಂದ ಮಹಿಳಾ ಸಿಬ್ಬಂದಿಯನ್ನು ಕರೆಸಿಕೊಂಡರು. ಅನಿರೀಕ್ಷಿತ ಬೆಳವಣಿಗೆಯ ಜೊತೆಗೆ ಅವಸರದಲ್ಲಿ ಕಾರ್ಯಕರ್ತೆಯರನ್ನು ಬಂಧಿಸಲು ಮುಂದಾದ ಸಂದರ್ಭ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಕೆಳಗೆ ಬಿದ್ದರು.