ಬೆಂಗಳೂರು: ರಾಜ್ಯದಲ್ಲಿ ನೆರೆ ಹಾವಳಿಯು ಸಾಕಷ್ಟು ನಷ್ಟ ಉಂಟು ಮಾಡಿದ್ದು, ಕೇಂದ್ರ ಸರ್ಕಾರ ವೈಮಾನಿಕ ಸಮೀಕ್ಷೆ ನಡೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯಸಭೆ ಸದಸ್ಯ ಜಿಸಿ ಚಂದ್ರಶೇಖರ್ ಮನವಿ ಮಾಡಿದ್ದಾರೆ.
ಪ್ರಧಾನಿಗೆ ಜಿಸಿ ಚಂದ್ರಶೇಖರ್ ವಿಡಿಯೋದಲ್ಲಿ ಮನವಿ ಈ ಸಂಬಂಧ ಮೂರು ಪುಟಗಳ ಸುದೀರ್ಘ ಪತ್ರ ಬರೆದ ಅವರು, ಕೇಂದ್ರ ಸರ್ಕಾರ ತ್ವರಿತವಾಗಿ ರಾಜ್ಯ ಅತಿವೃಷ್ಟಿಯಿಂದ ತತ್ತರಿಸುತ್ತಿದ್ದು ವೈಮಾನಿಕ ಸಮೀಕ್ಷೆ ನಡೆಸಿ ಆದಷ್ಟು ಕೂಡಲೇ ಪರಿಹಾರ ವಿತರಿಸುವಂತೆ ಕೋರಿದ್ದಾರೆ.
ಕಳೆದ ವರ್ಷ ಕೂಡ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಇದೀಗ ಕೋವಿಡ್ ಆತಂಕದಲ್ಲಿರುವ ಸಂದರ್ಭದಲ್ಲಿ ಮತ್ತೊಮ್ಮೆ ನೆರೆ ಸಮಸ್ಯೆ ರಾಜ್ಯದ ಹಲವು ಜಿಲ್ಲೆಗಳನ್ನು ಕಾಡಿದೆ. ಹೆಚ್ಚಾಗಿ ಅಭಿವೃದ್ಧಿ ಕಾಣದ ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳೆ ಹಾನಿಗೆ ಒಳಗಾಗಿವೆ. ಕೇಂದ್ರ ಸರ್ಕಾರ ಒಮ್ಮೆ ವೈಮಾನಿಕ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡುವ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯ ನೆರೆ ಹಾವಳಿಯಿಂದ ತತ್ತರಿಸಿ ಹೋಗಿರುವ ಈ ಸಂಕಟದ ಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಈ ಕೂಡಲೇ ವೈಮಾನಿಕ ಸಮೀಕ್ಷೆ ನಡೆಸಿ ನೊಂದ ಜನರಿಗೆ ಪರಿಹಾರ ಶೀಘ್ರವೇ ಘೋಷಿಸಬೇಕು. ಈ ನಿಟ್ಟಿನಲ್ಲಿ ಕನ್ನಡಿಗರ ಪರ ನಿಲ್ಲಬೇಕೆಂದು ಕೋರುತ್ತೇನೆ ಎಂದು ವಿಡಿಯೋ ಮೂಲಕವೂ ಕೇಂದ್ರಕ್ಕೆ ವಿನಂತಿಸಿಕೊಂಡಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ದಿನೇಶ್ ವಾಗ್ದಾಳಿ:
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ರಾಜ್ಯ ಸರ್ಕಾರ ನೆರೆಪೀಡಿತ ಪ್ರದೇಶಗಳ ಪರಿಹಾರಕ್ಕೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕದ ಜನ ಪ್ರವಾಹದಿಂದ ಕಣ್ಣೀರು ಹಾಕುತ್ತಿದ್ದಾರೆ. ಆದರೆ, ಅನೇಕ ಜಿಲ್ಲೆಗಳ ಉಸ್ತುವಾರಿ ಸಚಿವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿಯೇ ಕೊಟ್ಟಿಲ್ಲ. ಕೇವಲ ಅಧಿಕಾರಿಗಳೊಂದಿಗೆ ಸಭೆ ಮಾಡಿದ ಮಾತ್ರಕ್ಕೆ ಪ್ರವಾಹ ಪೀಡಿತರ ಸಂಕಷ್ಟ ನಿವಾರಣೆಯಾಗುವುದೆ? ಸಂತ್ರಸ್ತರ ಗೋಳು ಕೇಳದ ಮೇಲೆ ಉಸ್ತುವಾರಿಯಾದರೂ ಇವರಿಗ್ಯಾಕೆ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.