ಬೆಂಗಳೂರು: ಕೆ.ಆರ್ ಪುರಂನ ಎನ್ಆರ್ಐ ಬಡಾವಣೆಯ ಇಂದಿರಾ ಕ್ಯಾಂಟೀನ್ ಪಕ್ಕದಲ್ಲೇ ಕಸ ವಿಂಗಡಣೆ ಮಾಡುವುದರಿಂದ ಇಂದಿರಾ ಕ್ಯಾಂಟಿನ್ಗೆ ಬರುವ ಜನರು ಮೂಗು ಮುಚ್ಚಿಕೊಂಡು ಊಟ ಮಾಡುವಂತಾಗಿದೆ.
ಎನ್ಆರ್ಐ ಬಡಾವಣೆ ಇಂದಿರಾ ಕ್ಯಾಂಟೀನ್ ಹೌದು, ಕೆ ಆರ್ ಪುರಂನ ರಾಮಮೂರ್ತಿನಗರದ ಎನ್ಆರ್ಐ ಬಡಾವಣೆಯ ಇಂದಿರಾ ಕ್ಯಾಂಟೀನ್ ಪಕ್ಕದಲ್ಲಿ ದಿನನಿತ್ಯ ಬಿಬಿಎಂಪಿ ವಾಹನಗಳು ಮಹದೇವಪುರ ಹಾಗೂ ಹೊರಮಾವು ವಾರ್ಡ್ನಲ್ಲಿ ಕಸ ಸಂಗ್ರಹಿಸಿ ಎನ್ಆರ್ಐ ಬಡಾವಣೆಯಲ್ಲಿ ಕಸ ವಿಂಗಡಣೆ ಮಾಡಲಾಗುತ್ತಿದೆ. ಇಂದಿರಾ ಕ್ಯಾಂಟೀನ್ ಬಳಿ ಮಹದೇವಪುರ, ಹೊರಮಾವು ವಾರ್ಡ್ಗಳಿಂದ ಕಸವನ್ನು ತಂದು ಇಲ್ಲಿ ಸುರಿಯುತ್ತಿದ್ದಾರೆ.
ಇನ್ನು ಇಲ್ಲಿ ಪ್ರತಿನಿತ್ಯ ನೂರಾರು ಗಾಡಿಗಳು ಕಸ ತಂದು ಸುರಿಯುತ್ತಿರುವುದು ಇಂದಿರಾ ಕ್ಯಾಂಟೀನ್ಗೆ ಊಟ ಮಾಡಲು ಬರುವಂತಹ ಗ್ರಾಹಕರಿಗೆ ದುರ್ವಾಸನೆ ಬೀರುತ್ತಿದೆ. ಹೀಗಾಗಿ ಕ್ಯಾಂಟೀನ್ಗೆ ಬರಲು ಸಾರ್ವಜನಿಕರು ಹಿಂದೇಟು ಹಾಕುವಂತಾಗಿದೆ.
ಎನ್ಆರ್ಐ ಬಡಾವಣೆಯ ಮುಖ್ಯರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ಗೆ ದಿನನಿತ್ಯ ಕೆಲಸ ಮುಗಿಸಿಕೊಂಡು ಮಧ್ಯಾಹ್ನ ಊಟ ಮಾಡಲು ಬಂದರೆ, ಈ ಕಸದ ದುರ್ವಾಸನೆಯಿಂದ ಊಟ ತಿನ್ನಲು ಆಗುತ್ತಿಲ್ಲ. ಕಸ ಇಲ್ಲಿ ಡಂಪ್ ಮಾಡುವುದರಿಂದ ಸೊಳ್ಳೆಗಳ ಕಾಟ ಜಾಸ್ತಿಯಾಗಿ ಡೆಂಗ್ಯೂ, ಮಲೇರಿಯಾದಂತ ಖಾಯಿಲೆಗಳು ಬರುತ್ತಿವೆ ಎಂದು ಗ್ರಾಹಕರು ಹೇಳುತ್ತಿದ್ದಾರೆ.
ಸರಿಯಾಗಿ ಕಸ ವಿಲೇವಾರಿ ಮಾಡದೆ ಜನರ ಆರೋಗ್ಯದ ಜೊತೆ ಆಟವಾಡುತ್ತಿರುವ ಪಾಲಿಕೆ ಅಧಿಕಾರಿಗಳು, ಈಗ ಹಸಿದವರು ಊಟ ಮಾಡಲು ಸಹ ಆಗದಂತೆ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.