ಬೆಂಗಳೂರು:''ನಾಳೆ ಉದ್ಘಾಟನೆಯಾಗಲಿರುವ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ದಶಪಥ ಹೆದ್ದಾರಿಯ ಸಂಪೂರ್ಣ ಕ್ರೆಡಿಟ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಯೋಜನೆ ಘೋಷಿಸಿ, ಉದ್ಘಾಟನೆ ಮಾಡುವ ಮೂಲಕ ಮೋದಿ ಈ ಯೋಜನೆಯ ರುವಾರಿಯಾಗಿದ್ದಾರೆ'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಬೆಂಗಳೂರು ಮೈಸೂರು ನಡುವಿನ ರಾಜ್ಯ ಹೆದ್ದಾರಿಯನ್ನು 2004ರಲ್ಲಿ ನಾಲ್ಕು ಪಥದ ರಸ್ತೆಯಾಗಿ ನಿರ್ಮಿಸಲು ಆರಂಭಿಸಲಾಯಿತು. ನಂತರ ಕೇಂದ್ರ ಸರ್ಕಾರ ಈ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿ ಎಂದು 2014ರಲ್ಲಿ ಘೋಷಣೆ ಮಾಡಿತು. ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಎಂದು ಘೋಷಣೆ ಮಾಡಿ 10ರಿಂದ 15 ವರ್ಷವಾದರೂ ಹಾಗೆಯೇ ಉಳಿದಿತ್ತು'' ಎಂದರು.
ಮೋದಿಗೆ ಸಂಪೂರ್ಣ ಕ್ರೆಡಿಟ್:''ನಮ್ಮ ಕಡೆಯೂ ಯುಪಿಎ ಘೋಷಿಸಿದ್ದ ಹೆದ್ದಾರಿ ಈವರೆಗೂ ಆಗಿಲ್ಲ. ಆದರೆ, ಬೆಂಗಳೂರು ಮೈಸೂರು ದಶಪಥ ರಸ್ತೆಗೆ 2014ರಲ್ಲಿ ಡಿಪಿಆರ್ ಮಾಡಲಾಯಿತು. 2015ರಲ್ಲಿ ರಸ್ತೆಯನ್ನು ಅಲೈನ್ಮೆಂಟ್ ಆಯಿತು. ಆಗ ಎನ್ಡಿಎ ಸರ್ಕಾರ ಇತ್ತು. ಬೆಂಗಳೂರು ಮೈಸೂರು ರಸ್ತೆ 2016ಕ್ಕೆ ಹೆದ್ದಾರಿ ಪ್ರಾಧಿಕಾರದ ಸ್ವಾಧೀನವಾಯಿತು ಆಗಲೂ ಎನ್ಡಿಎ ಸರ್ಕಾರವಿತ್ತು. ನಂತರ ಬೇರೆ ಬೇರೆ ಹಂತದಲ್ಲಿ ಟೆಂಡರ್ಆಗಿ 2,190 ಕೋಟಿ ಸಿವಿಲ್ ಕೆಲಸಗಳಿಗೆ ಹಾಗೂ ಭೂಸ್ವಾಧೀನಕ್ಕೆ 2,036 ಕೋಟಿ ನೀಡಲಾಯಿತು. ನಂತರ 4,429 ಕೋಟಿ ರಿವೈಸ್ಡ್ ಎಸ್ಟಿಮೇಟ್ ಆಯಿತು. ಮೋದಿ ಪ್ರಧಾನಿಯಾದ ಅವಧಿಯಲ್ಲಿಯೇ ಯೋಜನೆ ಆರಂಭವಾಗಿ ಮುಗಿದಿದೆ. ಹೀಗಾಗಿ ಇದರ ಸಂಪೂರ್ಣ ಕ್ರೆಡಿಟ್ ಮೋದಿಗೆ ಸಲ್ಲಬೇಕು'' ಎಂದರು.