ಬೆಂಗಳೂರು :ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಮಲ್ಲೇಶ್ವರಂ 13ನೇ ಕ್ರಾಸ್‌ನಲ್ಲಿ ಬಹುಶಿಸ್ತೀಯ ಮಹಿಳಾ ಘಟಕ ಕಾಲೇಜಿನಲ್ಲಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪದವಿ ವಿದ್ಯಾರ್ಥಿಗಳಿಗೆ ಫ್ರೆಂಚ್ ಭಾಷೆ ಕಲಿಕೆಯನ್ನು ಐಚ್ಛಿಕ ವಿಷಯವನ್ನಾಗಿ ಅಧ್ಯಯನ ಮಾಡಲು ಅವಕಾಶ ಆರಂಭಿಸಲಾಗಿದೆ. ಬೆಂಗಳೂರು ನಗರ ವಿಶ್ವವಿದ್ಯಾಲಯ(ಬಿಸಿಯು)ನಿಂದ ಇದು ಆರಂಭವಾಗಿದೆ.
ಪ್ರಥಮ ವರ್ಷದ ಬಿಎ ಪದವಿ ವಿದ್ಯಾರ್ಥಿಗಳು ಫ್ರೆಂಚ್ ಭಾಷೆಯನ್ನು ಕೋರ್ ವಿಷಯವಾಗಿ ತೆಗೆದುಕೊಂಡು ಅಧ್ಯಯನ ಮಾಡಬಹುದಾಗಿದೆ. ಈ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದ ಪದವಿಗೆ ಸರ್ಟಿಫಿಕೇಟ್ ಕೋರ್ಸ್, ದ್ವಿತೀಯ ವರ್ಷದ ಪದವಿಗೆ ಡಿಪ್ಲೊಮಾ, ತೃತೀಯ ವರ್ಷಕ್ಕೆ ಹಾಗೂ 4ನೇ ವರ್ಷಕ್ಕೆ ಆನರ್ಸ್ ಪದವಿ ನೀಡಲಾಗುತ್ತದೆ.