ಬೆಂಗಳೂರು:ಐಟಿ ಪ್ರಾಜೆಕ್ಟ್‌ಗಳನ್ನು ಕೊಡಿಸುವುದಾಗಿ ಹೈಟೆಕ್ ದೋಖಾ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ. ಅಕ್ಕ-ತಮ್ಮನ ಮೋಸದ ಜಾಲಕ್ಕೆ ಬಿದ್ದ ಸಾಲು ಸಾಲು ನವೋದ್ಯಮಿಗಳು ಲಕ್ಷಾಂತರ ರೂ. ಉಂಡೆನಾಮ ತಿಕ್ಕಿಸಿಕೊಂಡಿದ್ದಾರೆ.
ಖತರ್ನಾಕ್ ಸಹೋದರ-ಸಹೋದರಿಯರ ವಿರುದ್ಧ ನಗರದ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತಮ್ಮನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದು, ಪರಾರಿಯಾಗಿರುವ ಅಕ್ಕನಿಗಾಗಿ ಬಲೆ ಬೀಸಿದ್ದಾರೆ.
ನಗರದ ಬಾಗಲಗುಂಟೆ ಎಂಇಐ ಬಡಾವಣೆಯ ನಿವಾಸಿಗಳಾದ ರೂಪೇಶ್ ಮತ್ತು ಕಾವ್ಯಾರಿಂದ ವಂಚನೆ ಆರೋಪ ಕೇಳಿ ಬಂದಿದೆ. ಅಮೆರಿಕ ಮೂಲದ ಪ್ರಾಜೆಕ್ಟ್‌ಗಳನ್ನು ಕೊಡಿಸುವುದಾಗಿ ನಂಬಿಸಿ 50 ಲಕ್ಷಕ್ಕೂ ಹೆಚ್ಚು ಹಣ ಪಡೆದು ವಂಚಿಸಿದ್ದಾರೆ ಎಂದು 8ಕ್ಕೂ ಹೆಚ್ಚು ಉದ್ಯಮಿಗಳು ದೂರು ನೀಡಿದ್ದಾರೆ.
ಲಾಕ್‌ಡೌನ್‌ನಲ್ಲಿ ಕೊಂಚ ನೆಲಕಚ್ಚಿದ್ದ ಐಟಿ ಉದ್ಯಮವನ್ನೇ ಟಾರ್ಗೆಟ್ ಮಾಡಿದ್ದ ಅಕ್ಕ-ತಮ್ಮ, ಚೇತರಿಸಿಕೊಳ್ಳಲು ಅಮೆರಿಕ ಮೂಲದ ಪ್ರಾಜೆಕ್ಟ್ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ದೂರಲಾಗಿದೆ.
ಉದ್ಯಮಿ ಗಂಗಾಧರ್, ಹೈದರಾಬಾದ್ ಮೂಲದ ರಣಬೀರ್ ಸಿಂಗ್ ಸೇರಿದಂತೆ ಐದಾರು ಉದ್ಯಮಿಗಳು ವಂಚನೆಗೆ ಒಳಗಾಗಿದ್ದಾರೆ. ಉದ್ಯಮಿಗಳಿಂದ ಹಂತ ಹಂತವಾಗಿ 50 ಲಕ್ಷಕ್ಕೂ ಹೆಚ್ಚು ಹಣ ಪಡೆದು ಪರಾರಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರೂಪೇಶ್ನನ್ನು ಬಂಧಿಸಿದ್ದೇವೆ. ತಲೆಮರೆಸಿಕೊಂಡಿರುವ ಸಹೋದರಿ ಕಾವ್ಯಾಗಾಗಿ ಶೋಧ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.