ಬೆಂಗಳೂರು:ಸ್ತನ ಕ್ಯಾನ್ಸರ್ ವಿಕಿರಣ ಚಿಕಿತ್ಸೆಗಾಗಿ ಫೋರ್ಟಿಸ್ ಆಸ್ಪತ್ರೆ ಕರ್ನಾಟಕದಲ್ಲೇ ಮೊದಲ ಬಾರಿಗೆ 'ಇಂಟ್ರಾ ಆಪರೇಟಿವ್ ರೇಡಿಯೋ ಥೆರಪಿ'(ಐಓಆರ್‌ಟಿ) ಚಿಕಿತ್ಸಾ ತಂತ್ರಜ್ಞಾನ ಪರಿಚಯಿಸಿದೆ. ಈ ಚಿಕಿತ್ಸೆಯ ಮೂಲಕ 30 ದಿನಗಳು ತೆಗೆದುಕೊಳ್ಳಬೇಕಾದ ವಿಕಿರಣ ಚಿಕಿತ್ಸೆ ಕೇವಲ 30 ನಿಮಿಷದೊಳಗೆ ಪೂರ್ಣಗೊಳ್ಳಲಿದೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಫೋರ್ಟಿಸ್ ಆಸ್ಪತ್ರೆ ಸರ್ಜಿಕಲ್ ಆಂಕೋಲಜಿ ನಿರ್ದೇಶಕ ಡಾ. ಸಂದೀಪ್ ನಾಯಕ್, ಸ್ತನ ಕ್ಯಾನ್ಸರ್ ಹೊಂದಿರುವವರಿಗಾಗಿ ಇಂಟ್ರಾ ಆಪರೇಟಿವ್ ರೇಡಿಯೋ ಥೆರಪಿ ಪರಿಚಯಿಸಿದ್ದೇವೆ. ಐಓಆರ್‌ಟಿ ಇದೊಂದು ವಿಕಿರಣ ಚಿಕಿತ್ಸಾ ತಂತ್ರಜ್ಞಾನವಾಗಿದೆ. ಸ್ತನ ಕ್ಯಾನ್ಸರ್ ಹೊಂದಿದವರಿಗೆ ಗಡ್ಡೆ ತೆಗೆದ ನಂತರ ರೇಡಿಯೋಥರಪಿ ನಡೆಸಲು 30 ರಿಂದ 40 ದಿನಗಳ ಕಾಲ ತೆಗೆದುಕೊಳ್ಳಲಾಗುತ್ತದೆ.
ಇದು ಅತ್ಯಂತ ದೀರ್ಘಾವಧಿಯಾಗಿರುವುದರಿಂದ ರೋಗಿಯೂ ಇದರಿಂದ ಬಳಲಬಹುದು. ಇಂಟ್ರಾಆಪರೇಟಿವ್ ರೇಡಿಯೋ ಥೆರಪಿ ಚಿಕಿತ್ಸಾ ತಂತ್ರಜ್ಞಾನದಿಂದ ಕೇವಲ 30 ರಿಂದ 40 ನಿಮಿಷಗಳಲ್ಲಿ ಈ ಥೆರಪಿ ಪೂರ್ಣ ಮಾಡಬಹುದು. ಇದು ಅತ್ಯಂತ ಪರಿಣಾಮಕಾರಿ ಎಂದು ಈಗಾಗಲೇ ಸಾಬೀತಾಗಿದೆ. ದೇಶದಲ್ಲಿ ಕೆಲವು ಆಸ್ಪತ್ರೆಗಳು ಮಾತ್ರ ಈ ಚಿಕಿತ್ಸಾ ವಿಧಾನವನ್ನು ಹೊಂದಿವೆ.