ಬೆಂಗಳೂರು: ಕೇಂದ್ರ ಸರ್ಕಾರ ಹಾಗು ಬಿಜೆಪಿ ರಾಷ್ಟ್ರೀಯ ನಾಯಕರ ವಿರುದ್ಧ ಕೇಳಿ ಬಂದಿರುವ ಫೋನ್ ಟ್ಯಾಪಿಂಗ್ ಆರೋಪವನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಮೂಲಕ ತನಿಖೆ ನಡೆಸಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆಗ್ರಹಿಸಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಹೆಚ್.ಎಂ. ರೇವಣ್ಣ ಅವರೊಂದಿಗೆ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಅವರು ಮಾತನಾಡಿದರು. ಪೆಗಾಸಸ್(Pegasus) ಮೂಲಕ ಫೋನ್ ಟ್ಯಾಪಿಂಗ್ ಮಾಡಿದೆ ಎಂದರೆ ಕೇಂದ್ರ ಸರ್ಕಾರ ಎಂತಹ ಹೀನಾಯ ಸ್ಥಿತಿಗೆ ಇಳಿದಿದೆ. ಸಂಸತ್ತಿನ ಜಂಟಿ ಸದನ ಸಮಿತಿಯಿಂದ ಈ ಕುರಿತು ತನಿಖೆಯಾಗಬೇಕು. ಇದಕ್ಕಿಂತ ಮುಖ್ಯವಾಗಿ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ಆಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪೆಗಾಸಸ್ ಫೋನ್ ಟ್ಯಾಪಿಂಗ್ ವಿಚಾರ ತನಿಖೆ ಆಗಲಿ. ಸತ್ಯ ಹೊರ ಬರಲಿ. ಫೋನ್ ಟ್ಯಾಪಿಂಗ್ ಆಗಿದೆ ಎಂಬುದಕ್ಕೆ ಆಧಾರ ಇಲ್ಲ ಎಂದು ವಾದ ಮಾಡಿರಬಹುದು. ಆದರೆ ತನಿಖೆಯಿಂದ ಎಲ್ಲವೂ ಬೆಳಕಿಗೆ ಬರಲಿದೆ. ಮೋದಿ ಸರ್ಕಾರದ ಬೇಹುಗಾರಿಕೆಯ ಭಾಗವಾಗಿ ಫೋನ್ ಟ್ಯಾಪಿಂಗ್ ನಡೆದಿದೆ. ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಹೆಚ್.ಡಿ. ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗು ಮಾಜಿ ಪ್ರಧಾನಿ ದೇವೇಗೌಡರ ಫೋನ್ ಟ್ಯಾಪ್ ಮಾಡಿಸಿದ್ದಾರೆ ಎಂದು ಆರೋಪಿಸಿದರು.