ಕರ್ನಾಟಕ

karnataka

ETV Bharat / state

ಕೋಳಿಯನ್ನು ಕೇಳಿ ಮಸಾಲೆ ಅರೆಯಲ್ಲ: ಬಿಜೆಪಿಗೆ ಡಿ.ಕೆ.ಶಿವಕುಮಾರ್ ಟಾಂಗ್ - ಕೆಪಿಸಿಸಿ

ಮಾಜಿ ಸಂಸದ, ಮಾಜಿ ಶಾಸಕ ಆಯನೂರು ಮಂಜುನಾಥ್ ಅವರು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಇಂದು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

Ayanur Manjunath meets Dcm DK Shivakumar
ಆಯನೂರು ಮಂಜುನಾಥ್ ಅವರು ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಮಾಲೋಚಿಸಿದರು.

By

Published : Aug 20, 2023, 1:50 PM IST

Updated : Aug 20, 2023, 2:19 PM IST

ಬಿಜೆಪಿಗೆ ಡಿ.ಕೆ.ಶಿವಕುಮಾರ್ ಟಾಂಗ್

ಬೆಂಗಳೂರು: ನಾವು ಕೋಳಿಯನ್ನು ಕೇಳಿ ಮಸಾಲೆ ಅರಿಯಬೇಕಾ? ಮಸಾಲೆ ಅರೆಯಲು ನಾವು ಯಾವ ಕೋಳಿಯನ್ನೂ ಕೇಳುವುದಿಲ್ಲ. ಆಪರೇಷನ್ ಕಮಲ ಮಾಡಿದಾಗ ಏನಾಗಿತ್ತು?, ಜನತಾದಳದ ಶಾಸಕರನ್ನು, ಕಾಂಗ್ರೆಸ್ ಶಾಸಕರನ್ನು ಕರೆದುಕೊಂಡು ಮಜಾ ಮಾಡಿದ್ದರಲ್ಲ ಆಗ ಏನಾಗಿತ್ತು? ಎಂದು ಸಿ.ಟಿ.ರವಿ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ನೈರುತ್ಯ ಪದವೀಧರ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಆಯನೂರು ಮಂಜುನಾಥ್ ಶಿವಮೊಗ್ಗ ನಾಯಕರ ಜೊತೆ ಮಾತುಕತೆ ನಡೆಸಿ ಒಪ್ಪಿಗೆ ಪಡೆದ ನಂತರ ಡಿ.ಕೆ.ಶಿವಕುಮಾರ್‌ರೊಂದಿಗೆ ಸಮಾಲೋಚನೆ ನಡೆಸಿದರು. ಪಕ್ಷಕ್ಕೆ ಬರುವ ವಿಚಾರದ ಕುರಿತು ಚರ್ಚಿಸಿದರು.

ಆಯನೂರು ಭೇಟಿ ಬಳಿಕೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಅವರವರ ಬದುಕು, ಅವರವರ ಭವಿಷ್ಯ, ಅವರವರು ನೋಡಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಸೇರ್ಪಡೆ ಹಾಗೂ ಬಿಜೆಪಿಯ ಕೆಲ ಸ್ಥಳೀಯ ನಾಯಕರ ಕಾಂಗ್ರೆಸ್ ಸೇರ್ಪಡೆ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಸಿ.ಟಿ.ರವಿ ಬಹಳ ಹಿರಿಯರು, ರಾಷ್ಟ್ರೀಯ ನಾಯಕರು, ನಮಗೆ ಬೆದರಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್‌ನವರು ಆಪರೇಷನ್ ಹಸ್ತ ಮಾಡಿದರೆ ಅದಕ್ಕೆ ಪ್ರತಿಯಾಗಿ ಏನು ಮಾಡಬೇಕು ಎಂದು ನಮಗೂ ಗೊತ್ತು. ಕೈ ಕತ್ತರಿಸುತ್ತೇವೆ ಎಂದಿದ್ದಾರೆ, ಆದರೆ ಅವರು ಆಪರೇಷನ್ ಮಾಡಿದಾಗ ಏನಾಗಿತ್ತು? ಜನತಾದಳದ ಶಾಸಕರನ್ನು, ಕಾಂಗ್ರೆಸ್ ಶಾಸಕರನ್ನು ಕರೆದುಕೊಂಡು ಮಜಾ ಮಾಡಿದ್ದರಲ್ಲ ಆಗ ಏನಾಗಿತ್ತು ಎಂದು ಪ್ರಶ್ನಿಸಿದರು.

ಬಿಜೆಪಿಯವರು ರಾಜಕಾರಣ ಮಾಡಲಿ, ನನಗೆ ಬೇಜಾರಿಲ್ಲ. ಆದರೆ ನಿಮಗೆ ಬೆದರಿಕೆ ಹಾಕಲು ಬಂದಂತೆ ಬೇರೆಯವರಿಗೂ ಬೆದರಿಕೆ ಹಾಕಲು ಬರುತ್ತದೆಯಲ್ಲವೇ? ನಾವು ಯಾರನ್ನೂ ಕರೆಯುತ್ತಿಲ್ಲ. ನಮಗೆ ಇರುವ ಸಂಖ್ಯೆಗೆ ನಮಗೆ ಅದರ ಯಾವ ಅವಶ್ಯಕತೆಯೂ ಇಲ್ಲ. ಯಾವ ಭೀತಿಗೂ ನಾವು ಜಗ್ಗಲ್ಲ. ಇಡೀ ದೇಶದ ಉದ್ದಗಲ, ರಾಜ್ಯದ ಉದ್ದಗಲಕ್ಕೂ ಈ ದೇಶ ಉಳಿಸಬೇಕು. ಭಾರತವನ್ನು ಉಳಿಸಬೇಕು ಎಂದು ಜನ ಪ್ರಯತ್ನಪಡುತ್ತಿದ್ದಾರೆ, ಜನ ನಮ್ಮ ಪಕ್ಷಕ್ಕೆ ಬರುತ್ತೇವೆ ಎಂದರೆ ನಾನು ಹೇಗೆ ತಡೆಯಲಾಗುತ್ತದೆ ಎಂದರು.

ಬಿಜೆಪಿಯಿಂದ ಹಲವು ನಾಯಕರು ಕಾಂಗ್ರೆಸ್ ಸೇರಲು ಮುಂದಾಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಡಿಕೆಶಿ, ಪಕ್ಷ ಸೇರುತ್ತೇವೆ ಎಂದು ನನಗೆ ಯಾವುದೇ ಅರ್ಜಿಗಳು ಬಂದಿಲ್ಲ, ಮೊದಲು ಅರ್ಜಿಗಳು ಬರಲಿ ನಂತರ ಆ ಬಗ್ಗೆ ಮಾತನಾಡುತ್ತೇನೆ ಎಂದರು.

ಬುಧವಾರ ಸರ್ವಪಕ್ಷ ಸಭೆ: ಬುಧವಾರ ಕಾವೇರಿ, ಮಹದಾಯಿ ಅಂತಾರಾರಾಜ್ಯ ಜಲವ್ಯಾಜ್ಯ ಸಂಬಂಧ ಸರ್ವ ಪಕ್ಷ ಸಭೆ ಕರೆದಿದ್ದೇವೆ, ಸಂಸದರಿಗೂ ಆಹ್ವಾನ ಕೊಟ್ಟಿದ್ದೇವೆ, ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯಲಿದೆ. ಆ ಸಭೆಯಲ್ಲಿ ಅನೇಕ ವಿಚಾರಗಳ ಚರ್ಚೆ ಮಾಡುತ್ತೇವೆ. ನೀರು ಬಿಡುವ ಆದೇಶದ ಕುರಿತು ಮರು ಪರಿಶೀಲನೆ ಮಾಡಬೇಕು ಎಂದು ಪತ್ರ ಬರೆದಿದ್ದೇವೆ, ಮೇಲ್ಮನವಿ ಹಾಕಲು ಕೂಡ ಚಿಂತನೆ ನಡೆಸಿದ್ದೇವೆ. ಕಾನೂನು ತಜ್ಞರು ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ನಮ್ಮ ಜಲಾಶಯಗಳ ಒಳಹರಿವು ಕಡಿಮೆ ಇದೆ. ಇಡೀ ರಾಜ್ಯದಲ್ಲಿ ಮಳೆ ಕಡಿಮೆಯಾಗಿದೆ ಹಾಗಾಗಿ ಈ ವಿಚಾರದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳುವ ಕುರಿತು ವರ್ಣಿಸಲಾಗುತ್ತದೆ ಎಂದು ಹೇಳಿದರು.

ಪಕ್ಷದ ನಿರ್ಧಾರಕ್ಕೆ ಎಲ್ಲರೂ ಬದ್ದ: ಎರಡೂವರೆ ವರ್ಷದ ನಂತರ ಹಿರಿಯರು ಸಚಿವ ಸ್ಥಾನ ತೊರೆದು ಹೊಸಬರಿಗೆ ಅವಕಾಶ ನೀಡಬೇಕು ಎನ್ನುವ ಕೆ.ಹೆಚ್.ಮುನಿಯಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಪಕ್ಷದ ಹೈಕಮಾಂಡ್ ಏನು ಹೇಳುತ್ತದೆಯೋ ಅದಕ್ಕೆ ಎಲ್ಲರೂ ಬದ್ದರಾಗಿರಬೇಕು. ಯಾರೂ ಆ ವಿಚಾರದಲ್ಲಿ ಬಹಿರಂಗವಾಗಿ ಚರ್ಚೆ ಮಾಡುವಂತಿಲ್ಲ. ಅದೆಲ್ಲಾ ಪಕ್ಷಕ್ಕೆ ಬಿಟ್ಟಿದ್ದು. ನಮ್ಮ ರಾಷ್ಟ್ರೀಯ ನಾಯಕರು ಅದನ್ನೆಲ್ಲಾ ನಿರ್ಧರಿಸುತ್ತಾರೆ ಎಂದು ತಿಳಿಸಿದರು.

ಇದನ್ನೂಓದಿ: ಬೆಂಗಳೂರು: ವಿವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್​

Last Updated : Aug 20, 2023, 2:19 PM IST

ABOUT THE AUTHOR

...view details