ಬೆಂಗಳೂರು:ಮಾಜಿ ಸಚಿವ ಪ್ರಿಯಾಂಕ್ ಖರ್ಗೆಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ವಿಷಯವನ್ನು ಟ್ವಿಟರ್ ಮೂಲಕ ಅವರೇ ಖಚಿತಪಡಿಸಿದ್ದಾರೆ.
ನಾನು ಇಂದು ಕೋವಿಡ್-19 ತಪಾಸಣೆಗೆ ಒಳಗಾಗಿದ್ದು ವರದಿ ಪಾಸಿಟಿವ್ ಬಂದಿದೆ. ಯಾವುದೇ ರೋಗ ಲಕ್ಷಣ ಇಲ್ಲದ ಹಿನ್ನೆಲೆ ಮನೆಯಲ್ಲೇ ಇದ್ದು ವಿಶ್ರಾಂತಿ ಪಡೆಯಲಿದ್ದೇನೆ. ಕಳೆದ 2 ದಿನಗಳಿಂದ ಈಚೆಗೆ ನನ್ನನ್ನು ಸಂಪರ್ಕಿಸಿರುವ ಯಾವುದೇ ವ್ಯಕ್ತಿಗಳು ಮುಂಜಾಗೃತ ಕ್ರಮವಾಗಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ರಾಜ್ಯದ ಹಲವು ರಾಜಕಾರಣಿಗಳು ಕೊರೊನಾ ಮಹಾ ಮಾರಿಗೆ ಇತ್ತೀಚಿನ ದಿನಗಳಲ್ಲಿ ತುತ್ತಾಗುತ್ತಿದ್ದಾರೆ. ಸೆಪ್ಟೆಂಬರ್ 21 ರಿಂದ ಆರಂಭವಾಗುವ ವಿಧಾನಸಭೆ ಅಧಿವೇಶನದಲ್ಲಿ ಒಂದಿಬ್ಬರು ಶಾಸಕರು ಕೊರೊನಾ ಕಾರಣದಿಂದ ದೂರ ಉಳಿಯುವ ಅನಿವಾರ್ಯತೆ ಎದುರಿಸುತ್ತಿದ್ದು, ಇದೀಗ ಇವರ ಸಾಲಿಗೆ ಪ್ರಿಯಾಂಕ ಖರ್ಗೆ ಕೂಡ ಸೇರ್ಪಡೆಯಾಗಿದ್ದಾರೆ. ಪ್ರಸಕ್ತ ವಿಧಾನಮಂಡಲ ಮಳೆಗಾಲದ ಅಧಿವೇಶನದಲ್ಲಿ ಅವರಿಗೆ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ.
ಖಾದರ್, ಖಂಡ್ರೆ ಹಾರೈಕೆ :ಪ್ರಿಯಾಂಕ್ ಖರ್ಗೆ ಶೀಘ್ರ ಗುಣಮುಖರಾಗಿ ಬರಲಿ ಎಂದು ಮಾಜಿ ಸಚಿವ ಯು ಟಿ ಖಾದರ್ ಹಾರೈಸಿದ್ದಾರೆ. ಟ್ವೀಟ್ ಮೂಲಕ ಅವರು ಪ್ರಿಯಾಂಕ ಖರ್ಗೆ ಅವರಿಗೆ ಧೈರ್ಯ ತುಂಬಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕೂಡ ಟ್ವೀಟ್ ಮಾಡುವ ಮೂಲಕ ಪ್ರಿಯಾಂಕ್ ಖರ್ಗೆ ಶೀಘ್ರ ಗುಣಮುಖರಾಗಲಿ ಸೇವೆಗೆ ಮರಳಲಿ ಎಂದು ಹಾರೈಸಿದ್ದಾರೆ.