ಬೆಂಗಳೂರು: ಕಾಂಗ್ರೆಸ್ನಿಂದ ಬಿಜೆಪಿಗೆ ವಲಸೆ ಬಂದವರ ವಿರುದ್ಧ ನಾನು ಒಂದು ಪದವನ್ನೂ ಬಳಸಿಲ್ಲ. ಅವರೆಲ್ಲರಲ್ಲೂ ಶಿಸ್ತು ಇದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಸ್ಪಷ್ಟನೆ ನೀಡಿದರು. ಕಾಂಗ್ರೆಸ್ನಿಂದ ಬಂದವರಿಂದ ಬಿಜೆಪಿಯಲ್ಲಿ ಅಶಿಸ್ತು ಉಂಟಾಗಿದೆ ಎಂಬ ವಿವಾದಾತ್ಮಕ ಹೇಳಿಕೆಗೆ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ಮೂಲಕ ಅವರು ಸ್ಪಷ್ಟನೆ ನೀಡಿದರು.
ಬಾಂಬೆ ಬಾಯ್ಸ್ ಅವರ ವಿಚಾರ ನಾನು ಪ್ರಸ್ತಾಪನೇ ಮಾಡಿಲ್ಲ. ಬಿಜೆಪಿಯಲ್ಲಿ ತುಂಬಾ ಅಶಿಸ್ತು ಇದೆ ಎಂದು ಪತ್ರಕರ್ತರು ಪ್ರಶ್ನೆ ಕೇಳಿದ್ದರು. ಮುಂದುವರೆದು ಅವರೇ ಕಾಂಗ್ರೆಸ್ ಗಾಳಿ ನಿಮ್ಮಲ್ಲಿ ಬೀಸಿದೆಯಾ? ಅಂತ ಕೇಳಿದ್ರು. ಕಾಂಗ್ರೆಸ್ ಅಶಿಸ್ತು ಹೊಸತಲ್ಲ, ಬಿಜೆಪಿ ಮೇಲೆ ಕಾಂಗ್ರೆಸ್ ಗಾಳಿ ಬೀಸಿದೆ ಎಂದಷ್ಟೇ ನಾನು ಹೇಳಿದ್ದು ನಿಜ. ಆದರೆ, ಅದನ್ನು ಯಾರು 17 ಜನ ಬಿಜೆಪಿ ಸೇರಿಸಿದ್ದಾರೆ ಅವರ ಜೊತೆ ಜೋಡಿಸುವ ಕೆಲಸ ನಡೆಯಿತು ಎಂದು ತಿಳಿಸಿದರು.
17 ಜನ ಕಾಂಗ್ರೆಸ್ನಿಂದ ಬಂದವರಿಂದಲೇ ನಾವು ಅಧಿಕಾರ ಹಿಡಿದಿದ್ದು. ಅದರಿಂದಲೇ ನಾನು ಮಂತ್ರಿಯಾಗಿದ್ದೆ. ಬಾಂಬೆ ಬಾಯ್ಸ್ ಪದವನ್ನೂ ನಾನು ಬಳಸಿಲ್ಲ. ಕಾಂಗ್ರೆಸ್ ಜೆಡಿಎಸ್ ಯಾವ ಶಾಸಕರು ಬಿಜೆಪಿಗೆ ಬಂದರು ಅವರು ಯಾರಿಂದಲೂ ನಮ್ಮ ಪಕ್ಷಕ್ಕೆ ಅಶಿಸ್ತು ಆಗಿಲ್ಲ. ಇದರಿಂದ ನನಗೆ ಬೇಜಾರಾಗಿದೆ. ಅವರ ವಿರುದ್ಧ ನಾನು ಯಾವುದೇ ಆಪಾದನೆ ಮಾಡಿಲ್ಲ. ಅವರು ಈಗಲೂ ಶಿಸ್ತಿನಿಂದ ಇದ್ದಾರೆ ಎಂದರು.
ಚುನಾವಣೆ ಬಳಿಕ ಬಿಜೆಪಿ ನಾಯಕರು ಆರೋಪ ಪ್ರತ್ಯಾರೋಪ ಮಾಡುತ್ತಿರುವುದು ದುರಾದೃಷ್ಟ. ಪಕ್ಷದ ಹಿಂದೆ ರಾಜ್ಯದ ಲಕ್ಷ ಲಕ್ಷ ಕಾರ್ಯಕರ್ತರ ಶ್ರಮ ಇದೆ. ಕಾಂಗ್ರೆಸ್ ಮೋಸದ ಗ್ಯಾರಂಟಿಗಳು ವರ್ಕೌಟ್ ಆಯಿತು. ಚುನಾವಣೆ ಫಲಿತಾಂಶ ಬಿಜೆಪಿಗೆ ಕೆಟ್ಟ ಕನಸು ಎಂದು ತಿಳಿದಿದ್ದೇವೆ. ಮುಂದೆ ಲೋಕಸಭೆ ಚುನಾವಣೆಯಲ್ಲಿ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡುವುದು ನಮ್ಮ ಗುರಿ. ಈ ಸಂಬಂಧ ರಾಜ್ಯ ಪ್ರವಾಸ ಯಶ ಕಾಣುತ್ತಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ತನಕ ನಾವು ವಿರಮಿಸಲ್ಲ ಎಂದು ಹೇಳಿದರು.
ಕೆಲವರು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷರು ಎಲ್ಲರನ್ನೂ ಕರೆದು ಮಾತುಕತೆ ಮಾಡಿದ್ದಾರೆ. ಇನ್ನು ಮುಂದೆ ಯಾವುದೇ ಗೊಂದಲ ಇರಲ್ಲ. ಯಾರೂ ಬಹಿರಂಗ ಹೇಳಿಕೆ ನೀಡುವುದಿಲ್ಲ. ನಮ್ಮ ಪಕ್ಷದಲ್ಲಿ ಅಶಿಸ್ತು ಇರಲ್ಲ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.
ಕಾಂಗ್ರೆಸ್ ಐದು ಗ್ಯಾರಂಟಿ ಘೋಷಣೆ ಮಾಡಿದೆ. ಅದನ್ನು ಜನರಿಗೆ ತಲುಪಿಸಲು ವಿಫಲವಾಗಿದೆ. ಜನ ಅಪಹಾಸ್ಯ ಮಾಡುತ್ತಿದ್ದಾರೆ. ಇದೀಗ ವಿದ್ಯುತ್ ದರ ಹೆಚ್ಚಿಸಿ ರಾಜ್ಯದ ಜನರಿಗೆ ಬರೆ ಎಳೆದಿದೆ. ಜನ ಜೀವನ ಕಷ್ಟ ಸಾಧ್ಯಾವಾಗಿದೆ. ಮನೆ ಯಜಮಾನಿಗೆ 2000 ರೂ. ಇನ್ನೂ ಕೊಟ್ಟಿಲ್ಲ. 10 ಕೆ.ಜಿ ಅಕ್ಕಿ ಭರವಸೆ ನಿಮ್ಮದು. ಅಕ್ಕಿ ಸಿಗಲಿಲ್ಲ ಎಂದು ಕೇಂದ್ರ ಸರ್ಕಾರದ ಅಕ್ಕಿಯನ್ನು ನಿಮ್ಮ ಪ್ರಣಾಳಿಕೆಯಲ್ಲಿ ಏಕೆ ಸೇರಿಸಿದ್ದೀರ? ಹಾಗಾಗಿ ಅಕ್ಕಿ ಬದಲು ಹಣ ಕೊಡಿ ಅಂದ್ವಿ. ಹಣ ಕೊಡುವುದಾದರೆ 10 ಕೆ.ಜಿಗೆ ಹಣ ಕೊಡಿ. ಮಾರುಕಟ್ಟೆ ದರದ ಪ್ರಕಾರ ಕುಟುಂಬದ ಪ್ರತಿ ವ್ಯಕ್ತಿಗೆ ಹಣ ಕೊಡಿ. ರಾಜ್ಯದ ಜನರಿಗೆ ಟೋಪಿ ಹಾಕಬೇಡಿ. ಹೇಳಿದಂತೆ ನಡೆದು ಕೊಳ್ಳಿ ಎಂದು ಆಗ್ರಹಿಸಿದರು.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಿನ್ನೆಲೆ ಬಸ್ಗಳು ರಶ್ ಆಗುತ್ತಿದೆ. ಈ ಹಿನ್ನೆಲೆ ಎಷ್ಟೋ ಜನ ಖಾಸಗಿ ಬಸ್ನಲ್ಲಿ ಓಡಾಡುತ್ತಿದ್ದಾರೆ. ಅವರು ನಿಮಗೆ ಓಟ್ ಹಾಕಿಲ್ಲವಾ? ಆಟೋದವರು, ಖಾಸಗಿ ಬಸ್ ಮಾಲೀಕರು ಸಂಕಷ್ಟ ಪಡುತ್ತಿದ್ದಾರೆ. ನೀವು ಮೋಸ ಮಾಡಿ ಆಡಳಿತಕ್ಕೆ ಬಂದಿದ್ದು ಸತ್ಯ. ಸೋಲನ್ನು ಖಂಡಿತವಾಗಿ ನಾವು ಒಪ್ಪುತ್ತೇವೆ. ನೀವು ಕೊಟ್ಟಿರುವ ಭರವಸೆ ಈಡೇರಿಸುವ ತನಕ ನಾವು ಬಿಡಲ್ಲ. ಮಂಗಳವಾರದಿಂದ ವಿಧಾನಮಂಡಲದ ಒಳಗಡೆ ಶಾಸಕರು ಗ್ಯಾರಂಟಿ ಜಾರಿ ಸಂಬಂಧ ಧರಣಿ ಮಾಡುತ್ತಾರೆ. ವಿಧಾನಸೌಧದ ಮಹಾತ್ಮಾ ಗಾಂಧಿ ಪ್ರತಿಮೆ ಮುಂದೆ ನಾವೆಲ್ಲರೂ ಬಿಎಸ್ ವೈ ನೇತೃತ್ವದಲ್ಲಿ ಧರಣಿ ಕೂರುತ್ತೇವೆ ಎಂದರು.
ಧರ್ಮ ವಿರೋಧಿ ನಿಲುವು ತೆಗೆದುಕೊಳ್ಳಬೇಡಿ:ರಾಜ್ಯದಲ್ಲಿ ಮತಾಂತರ ಹಾಗೂ ಗೋಹತ್ಯೆ ನಿಲುವು ಬಗ್ಗೆ ರಾಜ್ಯದ ಸಾಧು ಸಂತರು ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಯಾರನ್ನೋ ಸಂತೃಪ್ತಿ ಮಾಡಬೇಕು ಅಂತ ಧರ್ಮ ವಿರೋಧಿ ನಿಲುವು ತೆಗೆದುಕೊಳ್ಳಬೇಡಿ. ಎಲ್ಲದರಲ್ಲೂ ದ್ವೇಷ ರಾಜಕಾರಣ ಒಳ್ಳೆಯದಲ್ಲ. ಧರ್ಮಕ್ಕೆ, ರಾಜ್ಯಕ್ಕೆ, ದೇಶಕ್ಕೆ ಒಳ್ಳೆಯದಾಗುತ್ತೆ, ಅದನ್ನು ಮಾಡಿ ಎಂದು ಒತ್ತಾಯಿಸಿದರು.
ಜು.3 ರಂದು ಪದಾಧಿಕಾರಿಗಳು, ಪ್ರಮುಖ ಶಾಸಕರ ಸಭೆ:ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಜು.3ಕ್ಕೆ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಪದಾಧಿಕಾರಿಗು, ಪ್ರಮುಖ ಶಾಕಸರು, ಕಾರ್ಯಕರ್ತರ ಜೊತೆ ಸಭೆ ನಡೆಯಲಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಜಾರಿಗಾಗಿನ ಪ್ರತಿಭಟನೆ ಸಂಬಂಧ ಚರ್ಚೆ ನಡೆಯಲಿದೆ. ಸಭೆಯಲ್ಲಿ ಲೋಕಾಸಭೆ ಚುನಾವಣೆ, ಜಿ.ಚು, ತಾ.ಚುನಾವಣೆ ಸಂಬಂಧವೂ ಸಭೆಯಲ್ಲಿ ಚರ್ಚೆ ಮಾಡಲಿದ್ದೇವೆ ಎಂದರು.
ಪಕ್ಷದೊಳಗಿರುವ ಗೊಂದಲಕ್ಕೆ ಮಾಧ್ಯಮದಲ್ಲಿ ಪರಿಹಾರ ಸಿಗಲ್ಲ. ಪಕ್ಷದೊಳಗಡೆ ಚರ್ಚೆ ಮಾಡಿ. ಬಹಿರಂಗ ಹೇಳಿಕೆ ಕೊಡಬೇಡಿ ಎಂದು ವರಿಷ್ಟರು ಸೂಚನೆ ನೀಡಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ: 'ಕೆಲವರಿಗೆ ಮಾತನಾಡುವ ಚಟ..': ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಶಾಸಕ ಶಿವರಾಮ ಹೆಬ್ಬಾರ್ ಗರಂ