ಸರ್ಕಾರ ಹಿಜಾಬ್ ನಿಷೇಧ ವಾಪಸ್ ನಿರ್ಧಾರದಿಂದ ಹಿಂದೆ ಸರಿಯಬೇಕು: ಯಡಿಯೂರಪ್ಪ ಆಗ್ರಹ ಬೆಂಗಳೂರು : ಶಾಲಾ ಮಕ್ಕಳ ನಡುವೆ ಯಾವುದೇ ತಾರತಮ್ಯ ಇರಬಾರದು ಎನ್ನುವ ಕಾರಣಕ್ಕೆ ಸಮವಸ್ತ್ರ ಜಾರಿಗೆ ತರಲಾಗಿದೆ. ಎಲ್ಲಾ ಮಕ್ಕಳು ಯಾವುದೇ ವ್ಯತ್ಯಾಸ ಇರದೆ ಸಮವಸ್ತ್ರವನ್ನು ಧರಿಸಬೇಕು ಎನ್ನುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಆದರೆ ಅದನ್ನು ಧಿಕ್ಕರಿಸಿ ಕೇವಲ ಅಲ್ಪಸಂಖ್ಯಾತರನ್ನು ತೃಪ್ತಿಪಡಿಸಲು ಹಿಜಾಬ್ ನಿಷೇಧ ವಾಪಸ್ ಪಡೆಯುವ ತೀರ್ಮಾನವನ್ನು ಸಿದ್ದರಾಮಯ್ಯ ತೆಗೆದುಕೊಂಡಿದ್ದಾರೆ. ಕೂಡಲೇ ಸಿಎಂ ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಒತ್ತಾಯಿಸಿದರು.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಧರ್ಮದವರೂ ಒಂದೇ ತಾಯಿ ಮಕ್ಕಳಂತೆ ಬಾಳಬೇಕು ಎನ್ನುವುದು ಭಾರತೀಯ ಜನತಾ ಪಕ್ಷ ಆಶಯವಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆಯು ನಮ್ಮ ಆಶಯಕ್ಕೆ ವಿರುದ್ಧವಾಗಿದೆ. ಹಾಗಾಗಿ ಸರ್ಕಾರದ ನಿಲುವನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದರು.
ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಯಾರು ಕೇಳಿದ್ದರು. ಈ ರೀತಿಯ ರಾಜಕೀಯ ಮಾಡುವುದನ್ನು ಮುಖ್ಯಮಂತ್ರಿಗಳು ಬಿಡಬೇಕು. ಈ ರೀತಿ ಮಾಡುವುದರಿಂದ ಅಲ್ಪಸಂಖ್ಯಾತರನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ. ಲೋಕಸಭಾ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎನ್ನುವುದನ್ನು ಮರೆತು ಈ ರೀತಿ ಮಾತನಾಡುತ್ತಿದ್ದಾರೆ. ಇದನ್ನು ಖಂಡಿಸುತ್ತೇನೆ ಎಂದರು.
ಸರ್ಕಾರದ ಈ ನಿರ್ಧಾರದ ವಿರುದ್ಧ ಹೋರಾಟ ಮಾಡುವ ಅಗತ್ಯವಿಲ್ಲ. ಇದೊಂದು ಭಂಡ ಸರ್ಕಾರ. ಅವರ ಫ್ರೀ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತರಲು ಸಾಧ್ಯವಾಗದೆ ಜನರ ದಿಕ್ಕು ಗಮನ ಬೇರೆ ಕಡೆ ಸೆಳೆಯಲು ಈ ರೀತಿಯ ತೀರ್ಮಾನವನ್ನು ತೆಗೆದುಕೊಳ್ಳುತ್ತಿದ್ದಾರೆ. ಇದನ್ನು ಯಾರೂ ಕೂಡ ಒಪ್ಪುವುದಿಲ್ಲ. ಈಗಲಾದರೂ ಸಿದ್ದರಾಮಯ್ಯ ರಾಜ್ಯದ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಿ, ತಮ್ಮ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಬೇಕು ಆಗ್ರಹಿಸಿದರು.
ದಾವಣಗೆರೆಯಲ್ಲಿ ನಡೆಯಲಿರುವ ವೀರಶೈವ ಲಿಂಗಾಯತ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದ್ದಾರೆ. ಸಮಾವೇಶದಲ್ಲಿ ಭಾಗಿಯಾಗುವುದು ನನ್ನ ಜವಾಬ್ದಾರಿ ಹಾಗಾಗಿ ಹೋಗುತ್ತಿದ್ದೇನೆ. ಇಂದು ಹೋಗಿ ನಾಳೆ ವಾಪಸ್ ಬರಲಿದ್ದೇನೆ. ಜಾತಿ ಗಣತಿಯ ವರದಿ ವಿಚಾರ ಎಲ್ಲ ಅವರಿಗೆ ಬಿಟ್ಟದ್ದು, ಶಾಮನೂರು ಶಿವಶಂಕರಪ್ಪ ಏನೇನು ಮಾಡಿದ್ದಾರೆ ಅಂತ ನನಗೆ ಗೊತ್ತಿಲ್ಲ. ಅಲ್ಲಿಗೆ ಹೋದ ನಂತರ ಅವರ ಜೊತೆ ಮಾತುಕತೆ ನಡೆಸುತ್ತೇನೆ ಎಂದರು.
ಹಿಜಾಬ್ ವಾಪಸ್ ವಿರುದ್ಧ ಬಿಜೆಪಿ ಹೋರಾಟ ಎಂದ ಅಶೋಕ್ :ವೈಫಲ್ಯ, ಕೆಲವು ಮುಜುಗರ ತರುವ ಘಟನೆಗಳಿಂದ ಸರ್ಕಾರಕ್ಕೆ ಡ್ಯಾಮೇಜ್ ಆಗಿದೆ. ಇದನ್ನೆಲ್ಲ ಮರೆಸಲು ಹಿಜಾಬ್ ನಿಷೇಧ ವಾಪಸ್ ಪಡೆಯುವ ನಿರ್ಧಾರ ಪ್ರಕಟಿಸಿದ್ದಾರೆ. ಹಿಜಾಬ್ ವಿಚಾರ ಕೋರ್ಟ್ನಲ್ಲಿದ್ದರೂ ಈ ನಿರ್ಣಯ ಘೋಷಿಸಿರೋದು ಸರಿಯಲ್ಲ. ಇದರ ವಿರುದ್ಧ ಬಿಜೆಪಿ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಜಾಲಹಳ್ಳಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ತಿಂಗಳಿಂದ ರಾಜ್ಯದ ಘನತೆಗೆ ಪೆಟ್ಟು ಬೀಳುವ ಪ್ರಕರಣಗಳು ನಡೆಯುತ್ತಿವೆ. ಈಗ ಮಕ್ಕಳಲ್ಲಿ ಧರ್ಮ ಭೇದಭಾವ ಮೂಡಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಈ ಸರ್ಕಾರ ಸತ್ತಿದೆ, ನಿಷ್ಕ್ರಿಯ ಆಗಿದೆ. ಈ ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲ. ಸರ್ಕಾರದ ವೈಫಲ್ಯ, ಕೆಲವು ಮುಜುಗರ ತರುವ ಘಟನೆಗಳಿಂದ ಸರ್ಕಾರಕ್ಕೆ ಡ್ಯಾಮೇಜ್ ಆಗಿದೆ. ಇದನ್ನೆಲ್ಲ ಮರೆಸಲು ಈ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಆರೋಪಿಸಿದರು.
ಸಿಎಂ ವಿರುದ್ಧ ಈಶ್ವರಪ್ಪ ವಾಗ್ದಾಳಿ: ಹಿಜಾಬ್ ವಿಚಾರ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ನ್ಯಾಯಾಲಯ ಏನು ಹೇಳುತ್ತೆ ಎಂಬುದು ಗೊತ್ತಿಲ್ಲ ಎಂದು ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಹಿಜಾಬ್ ವಿಚಾರದಲ್ಲಿ ಶಿಕ್ಷಣ ಸಚಿವರು ಈ ವಿಚಾರ ಕೋರ್ಟ್ನಲ್ಲಿದೆ ಎಂದಿದ್ದಾರೆ. ಮುಖ್ಯಮಂತ್ರಿ ಆಗಿ ಕಾನೂನು ಬಗ್ಗೆ ತಿಳಿದುಕೊಳ್ಳಬೇಕು ಎಂದು ಟೀಕಿಸಿದರು.
ಇದನ್ನೂ ಓದಿ :ಹಿಜಾಬ್ ನಿಷೇಧ ವಾಪಸ್: ರಾಜ್ಯ ಸರ್ಕಾರದಿಂದ ಯುವ ಮನಸ್ಸುಗಳ ವಿಭಜನೆ ಎಂದ ವಿಜಯೇಂದ್ರ