ಬೆಂಗಳೂರು: ಜನ ಸಂಕಷ್ಟದಲ್ಲಿದ್ದಾರೆ. ಜನರ ನೆರವಿಗೆ ನಿಲ್ಲುವ ಈ ಸಂದರ್ಭದಲ್ಲಿ ಲೂಟಿ ಹೊಡೆಯೋ ಕೆಲಸ ಮಾಡಬೇಡಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ದಿನಸಿ ಕಿಟ್ ವಿತರಣೆ ವೇಳೆ ಮಾತನಾಡಿದ ಅವರು, ಸರ್ಕಾರ ಹಲವು ವರ್ಗಗಳಿಗೆ ಪರಿಹಾರ ಘೋಷಣೆ ಮಾಡಿದೆ. ಆದರೆ, ಆ ವರ್ಗದ ಜನರನ್ನು ಗುರುತಿಸೋ ಕೆಲಸ ಆಗಿದ್ಯಾ? ಅವರಿಗೆ ಹೇಗೆ ಪರಿಹಾರ ತಲುಪಿಸುತ್ತೀರಾ? ಇವತ್ತು ದಾನಿಗಳಿಂದ ಬಡವರು ಉಳಿದಿದ್ದಾರೆಯೇ ಹೊರತು, ಸರ್ಕಾರದಿಂದಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಶೇಷ ಪ್ಯಾಕೇಜ್ ಘೋಷಣೆ ಕುರಿತಂತೆ ಮಾಜಿ ಸಿಎಂ ಪ್ರತಿಕ್ರಿಯೆ.. ಕೊರೊನಾ ಲಾಕ್‌ಡೌನ್ ವಿಚಾರದಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸ ಮಾಡಬೇಕು. ಜನರಿಗೆ ಧೋಖಾ ಮಾಡುವ ಕೆಲಸ ನಡೆಯುತ್ತಿದೆ. ವಿಶೇಷ ಪ್ಯಾಕೇಜ್‌ನಿಂದ ನಿಜವಾದ ಫಲಾನುಭವಿಗಳಿಗೆ ಲಾಭ ದೊರೆಯಲ್ಲ. ಈ ಯೋಜನೆ ಯಶಸ್ಸು ಕಾಣಲ್ಲ. ಇದು ಕೇವಲ ಪ್ರಚಾರದ ಘೋಷಣೆ ಅಷ್ಟೇ ಎಂದು ಆರೋಪಿಸಿದ್ದಾರೆ.
1,600 ಕೋಟಿ ಪ್ಯಾಕೇಜ್ ಘೋಷಣೆ ಮುನ್ನ ಪೂರ್ವ ತಯಾರಿ ಮಾಡ್ಕೊಂಡಿದ್ದೀರಾ? ಇದು ಕೂಡ ನೆರೆ ಪರಿಹಾರದ ರೀತಿಯಲ್ಲೇ ಆಗುತ್ತದೆ. ನೆರೆಯಿಂದ ಮನೆ ಕಳೆದುಕೊಂಡವರಿಗೆ ₹5 ಲಕ್ಷ ಪರಿಹಾರ ಕೊಡ್ತೀವಿ ಅಂದ್ರು, ಎಷ್ಟು ಜನರಿಗೆ ಕೊಟ್ಟಿದ್ದಾರೆ. ಅದೇ ರೀತಿ ವಿಶೇಷ ಪ್ಯಾಕೇಜ್ ಕೂಡ ಪ್ರಚಾರಕ್ಕೆ ಸೀಮಿತ ಆಗುತ್ತದೆ. ಜನರಿಗೆ ಟೋಪಿ ಹಾಕುವ, ಹೂ ಮುಡಿಸುವ ಕೆಲಸ ಆಗುತ್ತಿದೆ ಎಂದರು.
ಕೆಲಸದ ವಿಚಾರದಲ್ಲಿ ಒಕ್ಕಲಿಗರು, ಲಿಂಗಾಯಿತರು ಎಂಬ ಮಾತಿಲ್ಲ. ಅಧಿಕಾರಿಗಳು ಯಾರು ದುಡ್ಡು ಕೊಡ್ತಾರೋ ಅವರನ್ನು ಬೇಕಾದ ಜಾಗಗಳಿಗೆ ಕಳುಹಿಸುತ್ತಿದ್ದಾರೆ. ಅಬಕಾರಿ ಇಲಾಖೆಯಲ್ಲಿ ತರಾತುರಿಯಲ್ಲಿ 70 ರಿಂದ 80 ಜನರನ್ನು ವರ್ಗಾವಣೆ ಮಾಡಲಾಯ್ತು. ನಂತರ ಸಂಜೆ ವರ್ಗಾವಣೆಯನ್ನ ನಿಲ್ಲಿಸಲಾಯ್ತು. ವರ್ಗಾವಣೆಗೆ ದುಡ್ಡು ಕೊಟ್ಟವನ ಕಥೆ ಏನಾಯ್ತು ಅಂತಾ ಯೋಚಿಸಬೇಕು ಎಂದರು.