ಬೆಂಗಳೂರು:ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡ ನಂತರದ ರಾಜಕೀಯ ಬೆಳವಣಿಗೆ, ಕಾಂಗ್ರೆಸ್ ನಾಯಕರ ವಾಗ್ಬಾಣಗಳಿಂದ ಬೇಸರಗೊಂಡಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇದೀಗ ವಿದೇಶಿ ಪ್ರವಾಸ ಕೈಗೊಂಡಿದ್ದಾರೆ.
ರಾಜಕೀಯ ಜಂಜಾಟದಿಂದ ಸ್ವಲ್ಪ ದಿನ ದೂರ ಉಳಿದು ವಿಶ್ರಾಂತಿ ಪಡೆಯಲು ನಿರ್ಧರಿಸಿದ ಕುಮಾರಸ್ವಾಮಿ, ಆಪ್ತರ ಜೊತೆ ನಿನ್ನೆ ತಡರಾತ್ರಿ ಮಲೇಷ್ಯಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ನಾಲ್ಕೈದು ದಿನ ಅಲ್ಲೇ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಹೆಚ್ ಡಿಕೆ ಸಾರ್ವಜನಿಕ ಜೀವನದಿಂದ ಸ್ವಲ್ಪ ದಿನ ದೂರವೇ ಉಳಿದಿದ್ದರು. ಅಷ್ಟರಲ್ಲೇ ಅವರಿಗೆ ಆರೋಗ್ಯ ಕೈಕೊಟ್ಟಿತು. ಇದರ ಮಧ್ಯೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ ಅಪಾರ ಪ್ರಮಾಣದಲ್ಲಿ ನಷ್ಟವಾಯಿತು. ಆರೋಗ್ಯ ಸರಿ ಇಲ್ಲದಿದ್ದರೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ನೆರೆ ಸಂತ್ರಸ್ತರ ಕುಂದು ಕೊರತೆಗಳನ್ನು ಆಲಿಸಿದ್ದರು. ಜೊತೆಗೆ ಪಕ್ಷದ ವತಿಯಿಂದ ಹಲವು ಜಿಲ್ಲೆಗಳಿಗೆ ನೆರವು ಸಹ ಕೊಡಿಸಿದ್ದರು.
ನೆರೆ ಕಡಿಮೆಯಾಗುತ್ತಿದ್ದಂತೆಯೇ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನೀಡಿದ ಒಂದು ಹೇಳಿಕೆಗೆ ರಾಷ್ಟ್ರಮಟ್ಟದವರೆಗೂ ಚರ್ಚೆಯಾಯಿತು. ಈ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯನವರು, ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ವಿರುದ್ಧ ಆರೋಪ ನಡೆಸಿದರು.ಈಗ ಇದ್ದಕ್ಕಿದ್ದಂತೆಯೇ ವಿಶ್ರಾಂತಿ ಪಡೆಯಲು ಕುಮಾರಸ್ವಾಮಿ ಅವರು ಮಲೇಷ್ಯಾ ಪ್ರವಾಸ ಕೈಗೊಂಡಿರುವುದು ರಾಜ್ಯದೆಲ್ಲೆಡೆ ಕುತೂಹಲ ಮೂಡಿಸಿದೆ.