ಬೆಂಗಳೂರು: ಮೇ ಒಂದರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಸರ್ಕಾರ ಏದುಸಿರು ಬಿಡುತ್ತಿದೆ. 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಕೊಡಲು ಹೆಣಗಾಡುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರ್ಕಾರ ವೈಫಲ್ಯದ ಬಗ್ಗೆ ಟ್ವೀಟ್ ಮಾಡಿರುವ ಅವರು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಎಂದು ಬೊಬ್ಬೆ ಹೊಡೆದ ಕೇಂದ್ರ ಮತ್ತು ರಾಜ್ಯ ಸರ್ಕಾರ ಪುಕ್ಕಟೆ ಪುಂಗಿ ಊದಿದ್ದೇ ಬಂತು. ಲಸಿಕೆಯ ದಾಸ್ತಾನಿಲ್ಲದೇ, ಸೂಕ್ತ ಮುನ್ನೆಚ್ಚರಿಕೆ, ವ್ಯವಸ್ಥೆ ಮಾಡಿಕೊಳ್ಳದೆ ಬರೀ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ದೇಶದ ಕೋಟ್ಯಂತರ ಮಂದಿಗೆ ಲಸಿಕೆ ನೀಡುವುದಾಗಿ ಬಾಯಿಮಾತಿನ ಉಪಚಾರ ಮಾಡಿದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹೊಣೆಗೇಡಿತನ ಮತ್ತು ತಿಕ್ಕಲುತನವನ್ನು ದೇಶದ ಜನತೆ ಎಂದಿಗೂ ಕ್ಷಮಿಸರು. ಆತುರಗಾರನಿಗೆ ಬುದ್ಧಿ ಕಡಿಮೆ ಎಂಬಂತೆ ಕೇವಲ ಮಾತಿನಲ್ಲಿ ಜನರನ್ನು ಓಲೈಸುವ ಇಂತಹ ಬೂಟಾಟಿಕೆಯನ್ನು ಸರ್ಕಾರ ಬಿಡಬೇಕು ಎಂದು ಹೆಚ್ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಿಮ್ಮನ್ನು ನೀವೇ ಕಾಪಾಡಿಕೊಳ್ಳಿ" ಎನ್ನುವ ಸರ್ಕಾರ ಇದ್ದರೇನು? ಇಲ್ಲದಿದ್ದರೇನು?. ಮೊದಲ ಹಂತದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಎಷ್ಟು ಮಂದಿಗೆ ಲಸಿಕೆ ಹಾಕಲಾಗಿದೆ? ಅವರಲ್ಲಿ ಎಷ್ಟು ಮಂದಿಗೆ ಎರಡನೇ ಹಂತದಲ್ಲಿ ಲಸಿಕೆ ಕೊಡಲಾಗಿದೆ? ಎಂಬ ಅಂಕಿ - ಅಂಶಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿ ಎಂದು ಆಗ್ರಹಿಸಿದ್ದಾರೆ.