ಕರ್ನಾಟಕ

karnataka

ETV Bharat / state

ಒಂದು ನಯಾ ಪೈಸೆ ಖರ್ಚು ಮಾಡದೆ ಚುನಾವಣೆ ಮಾಡುತ್ತೇವೆಂದು ಎಲ್ಲ ಶಾಸಕರು ಆತ್ಮ ಸಾಕ್ಷಿಯಿಂದ ಹೇಳಲಿ : ಹೆಚ್​​ಡಿಕೆ

ನಾವು ನಾಡಿನ ಜನರಿಗೆ ಉತ್ತರದಾಯಿಯಾಗಿ ಇರಬೇಕಾಗುತ್ತದೆ. ಇವತ್ತು ಸಂವಿಧಾನದ ಇತರೆ ಅಂಗಗಳು ಸಮಾಜಕ್ಕೆ ಏನೇ ಸಮಸ್ಯೆ ಆದರೂ ಉತ್ತರದಾಯಿ ಆಗಲ್ಲ. ಆದರೆ, ಕಾರ್ಯಾಂಗವಷ್ಟೇ ಉತ್ತರದಾಯಿ ಆಗಿರುತ್ತದೆ. ಅಂದರೆ, ಶಾಸಕರು ಉತ್ತರದಾಯಿ ಆಗಿರುತ್ತಾರೆ ಎಂದು ಹೆಚ್​​ಡಿಕೆ ಹೇಳಿದರು.

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

By

Published : Mar 30, 2022, 7:19 PM IST

ಬೆಂಗಳೂರು: ಒಂದು ನಯಾ ಪೈಸೆಯನ್ನು ಸಹ ಖರ್ಚು ಮಾಡದೆ ಚುನಾವಣೆ ಮಾಡುತ್ತೇವೆಂದು ಸದನದಲ್ಲಿರುವ 224 ಜನ ಶಾಸಕರು ತಮ್ಮ ಆತ್ಮಸಾಕ್ಷಿಯಿಂದ ಹೇಳಲಿ. ಆದರೆ, ಅದು ಸಾಧ್ಯವಿಲ್ಲ. ಈ ರೀತಿಯ ಪರಿಸ್ಥಿತಿಯಲ್ಲಿ ನಾವು ಇದ್ದೇವೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯಲ್ಲಿ ಇಂದು ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ಕುರಿತ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯದ ವಿಚಾರವಾಗಿ ಸದನದಲ್ಲಿ ಎರಡು ದಿನಗಳ ಕಾಲ ಚರ್ಚೆಗೆ ಅವಕಾಶ ನೀಡಲಾಗಿದೆ. ನಾವು ನಾಡಿನ ಜನರಿಗೆ ಉತ್ತರದಾಯಿಯಾಗಿ ಇರಬೇಕಾಗುತ್ತದೆ. ಇವತ್ತು ಸಂವಿಧಾನದ ಇತರೆ ಅಂಗಗಳು ಸಮಾಜಕ್ಕೆ ಏನೇ ಸಮಸ್ಯೆ ಆದರೂ ಉತ್ತರದಾಯಿ ಆಗಲ್ಲ. ಆದರೆ, ಕಾರ್ಯಾಂಗವಷ್ಟೇ ಉತ್ತರದಾಯಿ ಆಗಿರುತ್ತದೆ. ಅಂದರೆ, ಶಾಸಕರು ಉತ್ತರದಾಯಿ ಆಗಿರುತ್ತಾರೆ ಎಂದರು.

ನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ಕುರಿತ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ

ಜನರೇ ಹಣ ಕೊಟ್ಟು ಚುನಾವಣೆ ನಡೆಸುತ್ತಿದ್ದರು :ಪ್ರತಿ ಚುನಾವಣೆ ಬಂದಾಗಲೂ ಇವಿಎಂ ಬಗ್ಗೆ ಮಾತನಾಡುತ್ತೇವೆ. ಇದನ್ನು ಎಷ್ಟು ವರ್ಷ ಅಂತ ಮುಂದುವರೆಸಿಕೊಂಡು ಹೋಗಬೇಕು? ನಾವೆಲ್ಲರೂ ಮುಕ್ತವಾಗಿ ಚರ್ಚೆ ಮಾಡಬೇಕಾದ ವಿಚಾರ ಇದು. ಇದು ಚುನಾವಣಾ ಪದ್ಧತಿ ಸುಧಾರಣೆ ತರಲು ಮೊದಲ ಹೆಜ್ಜೆಯಾಗಿದೆ. ಮೊದಲ ಚುನಾವಣೆ ಆರಂಭವಾದಾಗಿನಿಂದ ಹಿಡಿದು ಈವರೆಗೆ 17 ಲೋಕಸಭೆ ಚುನಾವಣೆಗಳು ನಡೆದಿವೆ. ಆದರೆ, ನಾವು ಯಾರನ್ನೂ ಬೊಟ್ಟು ಮಾಡಿ ತೋರಿಸಲು ಆಗಲ್ಲ. ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ನೋಡಿದ್ದೆವು.1972-73 ಚುನಾವಣೆಯಲ್ಲಿ ಹಳ್ಳಿಗಳಲ್ಲಿ ಅಭ್ಯರ್ಥಿಗಳು ಆದಾಗ ಜನರೇ ಹಣ ಕೊಟ್ಟು ಚುನಾವಣೆ ನಡೆಸುತ್ತಿದ್ದರು. ಚುನಾವಣೆಯ ಎರಡು ದಿನ ಮೊದಲು ಅಭ್ಯರ್ಥಿಗಳು ಆಮಿಷವೊಡ್ಡಬಾರದು ಅಂತ ರಸ್ತೆಗೆ ಅಡ್ಡವಾಗಿ ಕಲ್ಲು, ಮರ ಹಾಕುತ್ತಿದ್ದರು. ಈಗ ಅಂತ ವಾತಾವರಣ ಇಲ್ಲ ಎಂದು ಹೇಳಿದರು.

ಹಳ್ಳಿಗರ ಬಗ್ಗೆ ಲಘುವಾಗಿ ಮಾತನಾಡಬೇಡಿ : ನಿನ್ನೆ ಅನಕ್ಷರಸ್ಥರ ಬಗ್ಗೆ ಯಾರೋ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಚುನಾವಣೆಯನ್ನು ಹಬ್ಬದ ವಾತಾವರಣದಲ್ಲಿ ಆಚರಿಸೋದು ರೈತರು ಮತ್ತು ಕೂಲಿಯ ವರ್ಗ ಮಾತ್ರ. ಸೌಲಭ್ಯ ಪಡೆಯಲು, ಧ್ವನಿ ಎತ್ತುವ ಜನರ ಸಂಖ್ಯೆ ಕಡಿಮೆ. ಲಘುವಾಗಿ ಮಾತನಾಡುವ ವರ್ಗ ಚುನಾವಣೆಗೆ ಬರೋದು ಕಡಿಮೆ. ಚುನಾವಣೆ ಬಂದಾಗ ವಿಶ್ವಾಸದಿಂದ ಬರುವ ಜನ ಕೂಲಿ ವರ್ಗದ ಜನ. ಅಂದಿನ ಹಾಗೂ ಇಂದಿನ ಚುನಾವಣೆ ಎಲ್ಲಿಗೆ ಬಂದಿದೆ ಅಂತ ನೋಡಿದ್ದೇವೆ ಎಂದರು.

ಟಿ. ಎನ್. ಶೇಷನ್ ಅವರು ಚುನಾವಣೆಯ ವ್ಯವಸ್ಥೆ ಸಂಪೂರ್ಣ ಸರಿಪಡಿಸಲಾಗದಿದ್ದರೂ ಭಯದಿಂದ ಚುನಾವಣೆ ನಡೆಸುವಂತೆ ಮಾಡಿದರು. ನಂತರ ಹಾಗೆ ಯಾರೂ ಕೆಲಸ ಮಾಡಲಿಲ್ಲ. ಏನೇ ಮಾಡಿದರೂ ಎಲ್ಲರೂ ರಾಜಕಾರಣಿಗಳ ವಿರುದ್ಧವೇ ಬೊಟ್ಟು ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಶ್ರೀಲಂಕಾಗೆ ಓಡಿ ಹೋದ ಕ್ರಿಕೆಟ್ ಬೆಟ್ಟಿಂಗ್ ದಾರ : ಅಭ್ಯರ್ಥಿಗಳು ಪೂರ್ವ ಚರಿತ್ರೆ ನೀಡಬೇಕು ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಬೆಟ್ಟಿಂಗ್ ನಡೆಸುವ ವಿಚಾರಕ್ಕೆ ಬ್ರೇಕ್ ಬೀಳಲು ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಿದ್ದೇ ನಾನು. ಕ್ರಿಕೆಟ್ ಬೆಟ್ಟಿಂಗ್ ಮಾಡ್ತಿದ್ದವನ ಹಿಡಿಯಲು ಹೋದಾಗ, ಶ್ರೀಲಂಕಾಗೆ ಓಡಿಹೋದ. ಅವನೇ ಮೈತ್ರಿ ಸರ್ಕಾರ ಬೀಳಿಸಲು ಎಲ್ಲಾ ರೀತಿಯ ಕೆಲಸ ಮಾಡಿದ. ಅದರ ಲಾಭವನ್ನೂ ಯಾರೆಲ್ಲಾ ಪಡೆದುಕೊಂಡರು ಅಂತ ಮಾಧ್ಯಮಗಳಲ್ಲಿ ಚರ್ಚೆ ಮಾಡಲ್ಲ ಎಂದು ಅಸಮಾಧಾನ ಹೊರಹಾಕಿದರು.

ಕಮೀಷನ್ :ಲಂಚ, ಕಮೀಷನ್ ಪಡೆಯುವವನು ಮಾತ್ರವಲ್ಲದೆ, ಕೊಡುವವನ ಮೇಲೂ ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯತ್ ಸದಸ್ಯರು ನಮ್ಮ ತೋಟಕ್ಕೆ ಬಂದಿದ್ದರು. ನರೇಗಾ ಕೆಲಸ ಮಾಡಲು ನಮ್ಮ ಹೆಂಡತಿ ಒಡವೆ ಇಟ್ಟು ಕೆಲಸ ಮಾಡಿದೆವು. ಆದರೆ ಹಣ ನೀಡಿಲ್ಲ,‌ ಈಗ ಮನೆಯಲ್ಲಿ ಊಟ ಹಾಕುತ್ತಿಲ್ಲ. ಕೊನೆಗೆ ನಾವು ಊರಿಗೆ ಹೋಗಲ್ಲ, ಇಲ್ಲೇ ತೋಟದಲ್ಲಿ ಕೆಲಸ ಮಾಡುತ್ತೇವೆ ಅಂತ ನಿರ್ಧಾರಕ್ಕೆ ಬಂದರು. ಸಚಿವ ಕೆ.ಎಸ್. ಈಶ್ವರಪ್ಪ ಅವರ ಇಲಾಖೆಯಲ್ಲಿ ಹೀಗಾಗಿದೆ ಎಂದು ಕುಮಾರಸ್ವಾಮಿ ಸದನದ ಗಮನ ಸೆಳೆದರು.

ಚುನಾವಣೆಯನ್ನು ನಿಯಮಿತ ಹಣದಲ್ಲಿ ಮಾಡಲು ಆಯೋಗ ಸೂಚಿಸಿದೆ. ಅದು ನಿಜಕ್ಕೂ ಸಾಧ್ಯವಾ? ಅದನ್ನು ಲೆಕ್ಕ ಹಾಕಲು ಒಬ್ಬ ಅಧಿಕಾರಿಯನ್ನು ನೇಮಕ ಮಾಡುತ್ತಾರೆ. ನಾವು ಸಭೆ ಸಮಾರಂಭ ಮಾಡಿದಾಗ, ತಲೆಗಳನ್ನು ಲೆಕ್ಕ ಹಾಕುತ್ತಾರೆ. ಭ್ರಷ್ಟಾಚಾರ ಅನ್ನೋದು ಮಿತಿಮೀರಿದೆ. ಬಡವರು ಕೆಲಸ ಮಾಡಿಸಿಕೊಳ್ಳಬೇಕಾದರೆ ಎಂಟು ಸಾವಿರ ಮಿಲಿಯನ್ ಲಂಚ ಕೊಟ್ಟಿರೋದು ದಾಖಲಾಗಿದೆ. ಪ್ರತೀ ಇಲಾಖೆಯಲ್ಲೂ ಮಿಲಿಯನ್ ಗಟ್ಟಲೆ ಲಂಚ ನೀಡಲಾಗಿದೆ. ಪೊಲೀಸ್ ಇಲಾಖೆಗೆ ಹೆಚ್ಚು ಲಂಚ ನೀಡಲಾಗಿದೆ. ಇದು ಇಂಡಿಯಾ ಕರೆಪ್ಶನ್ ಸರ್ವೆ ನೀಡಿರುವ ವರದಿಯಲ್ಲಿ ಉಲ್ಲೇಖ ಆಗಿದೆ ಎಂದು ಹೆಚ್​ಡಿಕೆ ಹೇಳಿದರು.

ಯಾರ ಮನೆ ಹಾಳು ಮಾಡಿದರೂ ಸರಿ, ಗೆಲ್ಲಬೇಕು : 2004ರ ನಂತರ ನಾನು ರಾಜಕಾರಣಕ್ಕೆ ಬಂದವನು. ವಿಧಾನ ಪರಿಷತ್ ಚುನಾವಣೆ ಹೇಗೆ ನಡೆಯುತ್ತಿದೆ ಅಂತ ಎಲ್ಲರಿಗೂ ಗೊತ್ತಿದೆ. ಇತ್ತೀಚೆಗೆ ನಡೆದ ಚುನಾವಣೆಯನ್ನೇ ಉದಾಹರಣೆಗೆ ನೋಡಿದ್ದೇವೆ. ರಾಜ್ಯಸಭಾ ಚುನಾವಣೆಯನ್ನೂ ನೋಡಿದ್ದೇವೆ. ಯಾರ ಮನೆ ಹಾಳು ಮಾಡಿದರೂ ಸರಿ, ಗೆಲ್ಲಬೇಕು ಅಷ್ಟೇ. ಚುನಾವಣೆ ಗೆಲ್ಲೋವರೆಗೂ ಒಂದು ಹಂತ ಅಷ್ಟೇ. ನಂತರ ಐದು ವರ್ಷ ಉಳಿಯಬೇಕಲ್ಲ, ಅದು ಭಾರಿ ಕಷ್ಟ. ದೇವಸ್ಥಾನ, ಮದುವೆ, ಸ್ಕೂಲ್ ಫೀಸ್ ಎಲ್ಲದಕ್ಕೂ ಜನ ಬರುತ್ತಾರೆ. ಜಾಹೀರಾತು ವಿಚಾರ ಕೂಡ ದೊಡ್ಡ ಸಮಸ್ಯೆ ಆಗಿದೆ ಎಂದರು.

ಶಾಸಕರಾದವರು ಪರವಾಗಿಲ್ಲ,‌ ಒಂದಷ್ಟು ಹಣ ಬರುತ್ತದೆ. ಆದರೆ ಎಂಎಲ್​​ಲ್ಸಿ ಆಗುವವರು 25-30 ಕೋಟಿ ಖರ್ಚು ಮಾಡಿ ಬರುತ್ತಾರೆ. ಪಂಚಾಯತ್ ಅಧ್ಯಕ್ಷ ಆಗಲು ಒಂದು ಮತಕ್ಕೆ 500-600 ಲೆಕ್ಕದಂತೆ 1-2 ಕೋಟಿ ಖರ್ಚು ಮಾಡುತ್ತಿದ್ದಾರೆ. ಅವರೇ ಅಷ್ಟು ಖರ್ಚು ಮಾಡುವಾಗ, ನಮ್ಮ ಚುನಾವಣೆ ಹೇಗೆ ಮಾಡಬೇಕು? ಎಲ್ಲಾ ಚುನಾವಣೆ ನಾವೇ ನಡೆಸಬೇಕು. ಎಲ್ಲದಕ್ಕೂ ಹಣ ಕೊಡಿ ಅಂತ ಕೇಳುತ್ತಾರೆ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಅದರಲ್ಲಿ ಯಾವುದೇ ಧರ್ಮ ಅಡ್ಡ ಬರೋದಿಲ್ಲ ಎಂದು ಕುಮಾರಸ್ವಾಮಿ ಪ್ರಸ್ತುತ ಚುನಾವಣಾ ವ್ಯವಸ್ಥೆ ಮೇಲೆ ಬೆಳಕು ಚೆಲ್ಲಿದರು.

ಧರ್ಮ‌- ಧರ್ಮದ ನಡುವೆ ಸಂಘರ್ಷ :ಮತದಾರರಿಗೆ ಆಮಿಷವೊಡ್ಡುವ ಕೆಲಸ ಮಾಡಲಾಗುತ್ತಿದೆ. ಈಗ ಧರ್ಮ‌ ಧರ್ಮದ ನಡುವೆ ಸಂಘರ್ಷ ತರುವ ಕೆಲಸ ಆಗುತ್ತಿದೆ. ಇದನ್ನು ಹೇಗೆ ನಿಲ್ಲಿಸ್ತೀರಾ ಹೇಳಿ? ನಮ್ಮ‌ ತಂದೆಯವರು ಚುನಾವಣೆ ನಡೆಸುವಾಗ ಅಭ್ಯರ್ಥಿಗಳು ಕೊಡುವ ಐದು ಸಾವಿರ ಹಣವನ್ನು ಕಣ್ಣಿಗೆ ಒತ್ತಿಕೊಂಡು ಸ್ವೀಕಾರ ಮಾಡ್ತಿದ್ದರು. ಈಗ ಐದು ಕೋಟಿ ಕೊಟ್ಟರೂ ಸಾಲುವುದಿಲ್ಲ. ಅಂತ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

For All Latest Updates

TAGGED:

ABOUT THE AUTHOR

...view details