ಬೆಂಗಳೂರು:ಪ್ರತಿಪಕ್ಷ ನಾಯಕನ ಆಯ್ಕೆ ಪ್ರಕ್ರಿಯೆ ನಡುವೆ ಪಕ್ಷದ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಜೊತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಮಹತ್ವದ ಮಾತುಕತೆ ನಡೆಸಿದರು. ಗ್ಯಾರಂಟಿಗಳ ವಿಚಾರದಲ್ಲಿ ಸರ್ಕಾರದ ವಿರುದ್ಧ ಹೋರಾಟ ಸೇರಿದಂತೆ ಪಕ್ಷದ ಮುಂದಿನ ನಡೆ ಕುರಿತು ಸಮಾಲೋಚನೆ ನಡೆಸಲಾಯಿತು ಎನ್ನಲಾಗಿದೆ.
ಡಾಲರ್ಸ್ ಕಾಲೋನಿಯಲ್ಲಿರುವ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ನಿವಾಸ ಧವಳಗಿರಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದರು. ಬಿಎಸ್ವೈ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ಸದ್ಯ ಬಿಜೆಪಿಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಇನ್ನೂ ನಡೆದಿಲ್ಲ. ಹೊಸ ನಾಯಕನ ಆಯ್ಕೆ ಕುರಿತು ಸಾಕಷ್ಟು ಚರ್ಚೆಯಾಗಿದೆ. ಆದರೆ, ಯಾವುದೇ ನಿರ್ಧಾರಕ್ಕೆ ಬಂದಿಲ್ಲ, ಹಾಗಾಗಿ ನೂತನ ನಾಯಕನ ಆಯ್ಕೆ ಕುರಿತ ಪ್ರಕ್ರಿಯೆಯನ್ನು ಆದಷ್ಟು ಬೇಗ ಮುಗಿಸುವ ಕುರಿತು ಚರ್ಚಿಸಲಾಯಿತು.
ಯಾರಿಗೆ ಪ್ರತಿಪಕ್ಷ ಸ್ಥಾನ ನೀಡಬೇಕು ಎನ್ನುವ ಕುರಿತು ಪಕ್ಷದಲ್ಲಿ ನಡೆಯುತ್ತಿರುವ ಚರ್ಚೆಗಳ ವಿಚಾರದ ಬಗ್ಗೆಯೂ ಸಮಾಲೋಚನೆ ನಡೆದಿದೆ. ಸದ್ಯ ಕಳೆದ ಬಾರಿ ಉಪ ನಾಯಕರಾಗಿದ್ದ ಆರ್. ಅಶೋಕ್, ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್ ಸೇರಿದಂತೆ ಕೆಲವರು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಲಾಭಿ ನಡೆಸುತ್ತಿದ್ದಾರೆ. ಆದರೆ, ಪಕ್ಷದ ಕೆಲ ನಾಯಕರು ಹಾಗೂ ಹೈಕಮಾಂಡ್ನ ಕೆಲ ನಾಯಕರು ಬಸವರಾಜ ಬೊಮ್ಮಾಯಿ ಅವರನ್ನೇ ಕೆಲ ಸಮಯ ಮುಂದುವರೆಸಬೇಕು ಎಂದು ಒಲವು ವ್ಯಕ್ತಪಡಿಸಿದ್ದಾರೆ. ಹಾಗಾಗಿ ಈ ಕುರಿತು ಸಹ ಮಾತುಕತೆ ನಡೆದಿದೆ ಎನ್ನಲಾಗಿದೆ.
ಸರ್ಕಾರದ ವಿರುದ್ಧ ವ್ಯವಸ್ಥಿತ ರೀತಿಯಲ್ಲಿ ಹೋರಾಟ ನಡೆಸುವ ಕುರಿತು ಔಪಚಾರಿಕವಾಗಿ ಮಾತುಕತೆ ನಡೆಸಲಾಗಿದೆ ಎನ್ನಲಾಗಿದೆ. ಐದು ಗ್ಯಾರಂಟಿಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಇದೀಗ ಷರತ್ತುಗಳ ಬಗ್ಗೆ ಮಾತನಾಡುತ್ತಿದೆ. ಹಾಗಾಗಿ ಷರತ್ತು ವಿಧಿಸಿದರೆ ಯಾವ ರೀತಿ ಪಕ್ಷ ಹೋರಾಟ ನಡೆಸಬೇಕು ಎನ್ನುವ ಕುರಿತು ಮಾತುಕತೆ ನಡೆಸಿದರು. ಅಲ್ಲದೇ ಲೋಕಸಭಾ ಚುನಾವಣೆಗೆ ಸಿದ್ಧತೆಗಳನ್ನು ಆರಂಭಿಸಲು ಪಕ್ಷದ ಹೈಕಮಾಂಡ್ ಈಗಾಗಲೇ ನಿರ್ದೇಶನ ನೀಡಿದ್ದು, ಅದರಂತೆ ಸಿದ್ದತೆ ಆರಂಭಿಸುವ ಕುರಿತು ಮಾತುಕತೆ ನಡೆಸಲಾಯಿತು ಎಂದು ತಿಳಿದುಬಂದಿದೆ.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಕುರಿತು ಜಿಲ್ಲೆಗಳಿಂದ ಮಾಹಿತಿ ತರಿಸಿಕೊಂಡಿದ್ದು, ಪ್ರಾಥಮಿಕ ಮಾಹಿತಿಯನ್ನು ಪಕ್ಷದ ಹೈಕಮಾಂಡ್ಗೆ ಕಳುಹಿಸಲಾಗಿದೆ. ಆ ವರದಿ ಅನುಸಾರ ಹೈಕಮಾಂಡ್ ಕೆಲವೊಂದು ಸಲಹೆಗಳನ್ನು ಪಕ್ಷಕ್ಕೆ ನೀಡಿದ್ದು, ತಳಮಟ್ಟದಿಂದ ಪಕ್ಷವನ್ನು ಪುನರ್ ಸಂಘಟಿಸುವ ಸಂದೇಶ ರವಾನಿಸಿದೆ. ಹೀಗಾಗಿ ಪಕ್ಷ ಸಂಘಟನೆ, ರಾಜ್ಯ ಪ್ರವಾಸ, ಲೋಕಸಭಾ ಚುನಾವಣೆಗೆ ಸಿದ್ದತೆ ಸೇರಿದಂತೆ ಪಕ್ಷದ ಚಟುವಟಿಕೆಯನ್ನು ಚುರುಕುಗೊಳಿಸುವ ಕುರಿತು ಚರ್ಚಿಸಲಾಯಿತು ಎನ್ನಲಾಗಿದೆ.
ಜುಲೈನಲ್ಲಿ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಅಲ್ಲಿಯವರೆಗೆ ಸದನದ ಹೊರಗೆ ಹೋರಾಟ ನಡೆಸುವ ಮತ್ತು ಅಧಿವೇಶನದಲ್ಲಿ ಸದನದ ಒಳಗೆ ಹೋರಾಟ ನಡೆಸುವ ಕುರಿತು ಬಿಜೆಪಿ ನಿರ್ಧರಿಸಿದ್ದು, ಅದಕ್ಕೆ ಪೂರಕವಾಗಿ ಉಭಯ ನಾಯಕರು ಚರ್ಚಿಸಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದ್ದು, ನೂತನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ. ಅಲ್ಲಿ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲಿದ್ದು, ಅದಕ್ಕೆ ಪೂರಕವಾಗಿ ಇಂದು ಸಮಾಲೋಚನೆ ನಡೆಸಲಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ :ಜೂ.11 ರಿಂದ ಬಸ್ ಪ್ರಯಾಣ ಫ್ರೀ..ಫ್ರೀ.. ನನ್ನ ಹೆಂಡತಿಗೂ ಉಚಿತ, ರಾಜ್ಯದ ಮುಖ್ಯ ಕಾರ್ಯದರ್ಶಿಗೂ ಉಚಿತ ಎಂದ ಸಿಎಂ